ರಾಹುಲ್‌ ಗಾಂಧಿಗೆ ಸುಪ್ರೀಂ ಕೋರ್ಟ್‌ ತೀವ್ರ ತಪರಾಕಿ!

Published : Aug 05, 2025, 05:19 AM IST
Rahul Gandhi

ಸಾರಾಂಶ

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿಕೆ ಬಗ್ಗೆ ಸುಪ್ರೀಂಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

  ನವದೆಹಲಿ :  ‘ಲಡಾಖ್‌ನಲ್ಲಿ ಚೀನಾ ಸೇನೆಯು ಭಾರತಕ್ಕೆ ಸೇರಿದ 2000 ಚದರ ಕಿಲೋಮೀಟರ್‌ ವ್ಯಾಪ್ತಿಯಷ್ಟು ಜಾಗವನ್ನು ಅತಿಕ್ರಮಿಸಿದೆ. ಚೀನಾ ಸೇನೆಯು ಭಾರತೀಯ ಸೈನಿಕರ ಮೇಲೆ ಹಲ್ಲೆ ಮಾಡಿದೆ’ ಎಂಬ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿಕೆ ಬಗ್ಗೆ ಸುಪ್ರೀಂಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಇಂಥ ಹೇಳಿಕೆ ಬಗ್ಗೆ ನಿಮ್ಮ ಬಳಿ ಏನು ಸಾಕ್ಷ್ಯವಿದೆ?‘ ಎಂದು ಪ್ರಶ್ನಿಸಿರುವ ನ್ಯಾಯಾಲಯ, ‘ನೀವು ನಿಜ ಭಾರತೀಯನಾಗಿದ್ದರೆ ಇಂಥ ಹೇಳಿಕೆ ನೀಡುತ್ತಿರಲಿಲ್ಲ’ ಎಂದು ಕಾಂಗ್ರೆಸ್‌ ನಾಯಕನ ವಿರುದ್ಧ ಚಾಟಿ ಬೀಸಿದೆ.

ರಾಹುಲ್‌ ವಿರುದ್ಧ ಇಂಥ ಕಠಿಣ ಪದ ಬಳಸಿ ಕಿಡಿಕಾರಿದ ಹೊರತಾಗಿಯೂ ಈ ಹೇಳಿಕೆ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಮಾನನಷ್ಟ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್‌ ತಡೆ ನೀಡಿದೆ.

ಏನಿದು ಪ್ರಕರಣ?:

2023ರಲ್ಲಿ ನಡೆದ ಭಾರತ್‌ ಜೋಡೋ ಯಾತ್ರೆ ವೇಳೆ 2020ರಲ್ಲಿ ಲಡಾಖ್‌ನ ಗಲ್ವಾನ್‌ ಪ್ರದೇಶದಲ್ಲಿ ನಡೆದ ಭಾರತ- ಚೀನಾ ಯೋಧರ ಸಂಘರ್ಷದ ಕುರಿತು ರಾಹುಲ್‌ ಗಾಂಧಿ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದರು. ಅದರಲ್ಲಿ ‘ಅರುಣಾಚಲ ಪ್ರದೇಶದಲ್ಲಿ ಭಾರತೀಯ ಯೋಧರ ಮೇಲೆ ಚೀನಾ ಯೋಧರು ಹಲ್ಲೆ ನಡೆಸುತ್ತಿದ್ದಾರೆ. ಲಡಾಖ್‌ನಲ್ಲಿ ಚೀನಾ ಸೇನೆ ಭಾರತಕ್ಕೆ ಸೇರಿದ 2000 ಚ.ಕಿ.ಮೀ ಭೂಮಿ ಅತಿಕ್ರಮಣ ಮಾಡಿದೆ’ ಎಂದು ದೂರಿದ್ದರು.

ಬಳಿಕ ರಾಹುಲ್‌ ಹೇಳಿಕೆ ವಿರೋಧಿಸಿ ಉದಯ್‌ ಶಂಕರ್‌ ಶ್ರೀವಾತ್ಸವ ಎಂಬುವವರು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್‌ ವಿರುದ್ಧ ಯುಪಿ ಪೊಲೀಸರು ಕ್ರಿಮಿನಲ್‌ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿದ್ದ ರಾಹುಲ್‌ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

ರಾಹುಲ್‌ ವಿರುದ್ಧ ಚಾಟಿ:

ಸೋಮವಾರ ವಿಚಾರಣೆ ವೇಳೆ ರಾಹುಲ್‌ ಗಾಂಧಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾ. ದೀಪಂಕರ್‌ ದತ್ತಾ, ‘ನೀವು ವಿಪಕ್ಷದ ನಾಯಕ. ನೀವು ಏನು ಹೇಳಬೇಕೋ ಅದನ್ನು ನೀವು ಸಂಸತ್ತಿನಲ್ಲಿ ಏಕೆ ಹೇಳುವುದಿಲ್ಲ? ಇದನ್ನೆಲ್ಲಾ ನೀವು ಸಾಮಾಜಿಕ ಜಾಲತಾಣದ ಮೂಲಕ ಏಕೆ ಹೇಳಬೇಕು? ನಿಮಗೆ ಸಂವಿಧಾನವು 19(1)(ಎ) ವಿಧಿಯು ವಾಕ್‌ ಸ್ವಾತಂತ್ರ್ಯ ನೀಡುತ್ತದೆ ಎನ್ನುವ ಕಾರಣಕ್ಕೆ ನೀವು ಏನು ಬೇಕಾದರೂ ಹೇಳುವಂತಿಲ್ಲ’ ಎಂದು ಸ್ಪಷ್ಟಪಡಿಸಿತು.

ಜೊತೆಗೆ, ‘ಚೀನಾ ಸೇನೆ ಭೂಮಿ ಅತಿಕ್ರಮಣ ಮಾಡಿಕೊಂಡ ಜಾಗಕ್ಕೆ ನೀವು ಹೋಗಿದ್ದೀರಾ? ಆ ಬಗ್ಗೆ ನಿಮ್ಮಲ್ಲಿ ಯಾವುದಾದರೂ ವಿಶ್ವಾಸಾರ್ಹ ದಾಖಲೆಗಳು ಇವೆಯೇ? ಯಾವುದೇ ಸಾಕ್ಷ್ಯ ಇಲ್ಲದೇ ನೀವು ಇಂಥ ಹೇಳಿಕೆ ನೀಡುವುದಾದರೂ ಏಕೆ? ನೀವು ನಿಜವಾದ ಭಾರತೀಯನಾಗಿದ್ದರೆ ಇಂಥ ಹೇಳಿಕೆ ನೀಡುತ್ತಿರಲಿಲ್ಲ’ ಎಂದು ನ್ಯಾಯಪೀಠ ರಾಹುಲ್‌ರನ್ನು ಕಟುವಾಗಿ ಪ್ರಶ್ನಿಸಿತು.

ಈ ವೇಳೆ ಮಧ್ಯಪ್ರವೇಶಿಸಿದ ರಾಹುಲ್ ಪರ ವಕೀಲ ಸಿಂಘ್ವಿ, ‘ಲೋಕಸಭೆಯ ವಿಪಕ್ಷ ನಾಯಕನಾಗಿ ರಾಹುಲ್‌ ಗಾಂಧಿ ಇಂಥ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದಾದಲ್ಲಿ ಅದೊಂದು ದುರದೃಷ್ಟಕರ ಸನ್ನಿವೇಶ. ಪತ್ರಿಕೆಗಳಲ್ಲಿ ಪ್ರಕಟಗೊಂಡ ವಿಷಯಗಳನ್ನು ಅವರು ಹೇಳಲು ಸಾಧ್ಯವಿಲ್ಲ ಎಂದಾದಲ್ಲಿ ಅವರು ವಿಪಕ್ಷ ನಾಯಕನಾಗುವುದು ಸಾಧ್ಯವಿಲ್ಲ’ ಎಂದು ನ್ಯಾಯಾಲಯದ ಅಭಿಪ್ರಾಯಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಜೊತೆಗೆ ರಾಹುಲ್‌ ಅವರನ್ನು ನಿಜವಾದ ಭಾರತೀಯನಾಗಿದ್ದರೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಸಿಂಘ್ವಿ, ‘ಚೀನಾ ಯೋಧರು ನಮ್ಮ 20 ಯೋಧರ ಮೇಲೆ ದಾಳಿ ಮಾಡಿ ಹತ್ಯೆಗೈದಿದ್ದಾರೆ ಎಂದು ನಿಜ ದೇಶಭಕ್ತ ಹೇಳುವ ಸಾಧ್ಯತೆಯೂ ಇದೆ’ ಎಂದರು.

ಸಿಂಘ್ವಿ ಹೇಳಿಕೆಗೆ ತಿರುಗೇಟು ನೀಡಿದ ನ್ಯಾಯಪೀಠ, ‘ಗಡಿಯಲ್ಲಿ ಸಂಘರ್ಷದ ನಡೆದ ವೇಳೆ ಎರಡೂ ಬದಿಯಲ್ಲಿ ಸಾವು ಸಂಭವಿಸುವುದು ಅಸಹಜವೇ?’ ಎಂದು ಪ್ರಶ್ನಿಸಿತು. ಇದಕ್ಕೆ ಸಿಂಘ್ವಿ, ರಾಹುಲ್‌ ಕಳವಳ ಇರುವುದು ಈ ಪ್ರಕರಣದಲ್ಲಿ ಸತ್ಯಾಂಶವನ್ನು ಮರೆ ಮಾಚಿದ್ದರ ಬಗ್ಗೆ ಎಂದರು.

ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಇಂಥದ್ದನ್ನೆಲ್ಲಾ ಪ್ರಶ್ನಿಸುವುದಕ್ಕೆ ಸೂಕ್ತ ವೇದಿಕೆ ಇದೆ’ ಎಂದು ಹೇಳಿತು. ಆದಾಗ್ಯೂ ಕೊನೆಗೆ ಅಲಹಾಬಾದ್ ಹೈಕೋರ್ಟಿನಲ್ಲಿ ನಡೆದಿದ್ದ ವಿಚಾರಣೆಗೆ ತಡೆ ನೀಡಿತು.

ಚೀನಾ ಸೇನೆ 2000 ಕಿ.ಮೀ. ಭೂ ಅತಿಕ್ರಮಣ ಮಾಡಿದೆ ಎಂದಿದ್ದ ರಾಹುಲ್‌ ಗಾಂಧಿ

- ಚೀನಾ ಸೈನಿಕರು ಭಾರತದ ಸೈನಿಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದೂ ಹೇಳಿದ್ದರು

- ಇದರ ವಿರುದ್ಧ ಅಲಹಾಬಾದ್‌ ಹೈಕೋರ್ಟಲ್ಲಿ ರಾಹುಲ್‌ ವಿರುದ್ಧ ದಾವೆ ದಾಖಲಾಗಿತ್ತು

- ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಹೋಗಿದ್ದ ಲೋಕಸಭೆ ಪ್ರತಿಪಕ್ಷ ನಾಯಕ

- ರಾಹುಲ್‌ ಹೇಳಿಕೆಗೆ ಸುಪ್ರೀಂ ಗರಂ. ನೀವು ಅಲ್ಲಿ ಹೋಗಿ ನೋಡಿದ್ದೀರಾ ಎಂದು ಪ್ರಶ್ನೆ

- ಈ ಬಗ್ಗೆ ನಿಮ್ಮ ಬಳಿ ಏನು ಸಾಕ್ಷ್ಯವಿದೆ? ಸಂಸತ್ತಲ್ಲಿ ಏಕೆ ಮಾತನಾಡಿಲ್ಲ ಎಂದು ಪ್ರಶ್ನೆ

- ಕೊನೆಗೆ ಕಿಡಿಕಾರಿದ ಹೊರತಾಗ್ಯೂ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ

PREV
Read more Articles on

Recommended Stories

ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರುದ್ಧ ಕೇಂದ್ರಕ್ಕೆ ಮಹಾ ದೂರು
ಸನಾತನ ಧರ್ಮದ ಕೊಂಡಿ ಕಳಚಲು ಶಿಕ್ಷಣದಿಂದ ಮಾತ್ರ ಸಾಧ್ಯ : ಕಮಲ್‌