ಸಾವರ್ಕರ್‌ ಬಗ್ಗೆ ಟೀಕಿಸಿದ್ದ ರಾಹುಲ್‌ಗೆ ಸುಪ್ರೀಂ ಕ್ಲಾಸ್‌

ಸಾರಾಂಶ

ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್‌ ಅವರನ್ನು ಬ್ರಿಟಿಷ್‌ ಸರ್ಕಾರದ ಸೇವಕ ಎಂದು ಟೀಕಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್‌, ‘ಸ್ವಾತಂತ್ರ್ಯ ಹೋರಾಟಗಾರರನ್ನು ಅಣಕಿಸ ಬೇಡಿ.

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್‌ ಅವರನ್ನು ಬ್ರಿಟಿಷ್‌ ಸರ್ಕಾರದ ಸೇವಕ ಎಂದು ಟೀಕಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್‌, ‘ಸ್ವಾತಂತ್ರ್ಯ ಹೋರಾಟಗಾರರನ್ನು ಅಣಕಿಸ ಬೇಡಿ. 

ನಮ್ಮ ದೇಶವನ್ನು ಸ್ವತಂತ್ರಗೊಳಿಸಿದವರ ಬಗ್ಗೆ ಇಂತಹ ಮಾತುಗಳು ಸಲ್ಲದು. ಮತ್ತೆ ಏನಾದರೂ ಇಂಥ ಮಾತುಗಳನ್ನು ಆಡಿದರೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದೆ.

2022ರಲ್ಲಿ ಭಾರತ್‌ ಜೋಡೋ ಯಾತ್ರೆಯು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಸಾಗುತ್ತಿದ್ದ ವೇಳೆ ರಾಹುಲ್‌, ‘ಬ್ರಿಟಿಷ್‌ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದ ಸಾವರ್ಕರ್‌, ಬ್ರಿಟಿಷರ ಸೇವಕರಾಗಿದ್ದರು’ ಎಂದು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸಮುದಾಯಗಳ ನಡುವೆ ದ್ವೇಷ ಉತ್ತೇಜಿಸುವುದು ಮತ್ತು ಸಾರ್ವಜನಿಕ ಕಿಡಿಗೇಡಿತನದಂತಹ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

ಶುಕ್ರವಾರ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ। ದೀಪಂಕರ್‌ ದತ್ತಾ ಹಾಗೂ ಮನಮೋಹನ್‌ ಅವರ ಪೀಠ, ‘ಮಹಾತ್ಮ ಗಾಂಧಿಯವರು ಕೂಡ ವೈಸ್‌ರಾಯ್‌ ಅವರನ್ನುದ್ದೇಶಿಸಿ ನಾನು ನಿಮ್ಮ ವಿಧೇಯ ಸೇವಕ ಎನ್ನುತ್ತಿದ್ದರು. ಹಾಗಿದ್ದರೆ ಅವರನ್ನೂ ಬ್ರಿಟಿಷರ ಸೇವಕ ಎನ್ನಬಹುದೇ? ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಸಾವರ್ಕರ್‌ ಅವರನ್ನು ಹೊಗಳಿ ಪತ್ರ ಬರೆದಿದ್ದರು. ಹೀಗಾಗಿ ಇತಿಹಾಸ ತಿಳಿಯದೆ ಮಾತನಾಡಬೇಡಿ’ ಎಂದು ರಾಹುಲ್‌ ಗಾಂದಿ ವಿರುದ್ಧ ಕಟುವಾಗಿ ಪ್ರತಿಕ್ರಿಯಿಸಿದೆ. ಇದೇ ವೇಳೆ ಇದೇ ಪ್ರಕರಣದಲ್ಲಿ ರಾಹುಲ್‌ ಗಾಂಧಿ ವಿರುದ್ಧ ಲಖನೌ ಕೋರ್ಟ್‌ನಲ್ಲಿ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣಕ್ಕೆ ನ್ಯಾಯಾಲಯ ತಡೆ ನೀಡಿದೆ.

Share this article