ದಾನಿಗಳ ಅಂಡಾಣು, ವೀರ್ಯಾಣು ಪಡೆಯಲು ಕೇಂದ್ರ ಸರ್ಕಾರ ಅಸ್ತು

KannadaprabhaNewsNetwork | Updated : Feb 24 2024, 11:34 AM IST

ಸಾರಾಂಶ

ಬಾಡಿಗೆ ತಾಯ್ತನ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ದಾನಿಗಳಿಂದ ಅಂಡಾಣು ಮತ್ತು ವೀರ್ಯಾಣುಗಳನ್ನು ಪಡೆಯಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಪಿಟಿಐ ನವದೆಹಲಿ

ವಿವಾಹಿತ ದಂಪತಿಯ ಪೈಕಿ ಯಾರಿಗಾದರೂ ಒಬ್ಬರಿಗೆ ಆರೋಗ್ಯ ಸಮಸ್ಯೆ ಇದ್ದರೆ ಅಂಥವರು ದಾನಿಗಳಿಂದ ಅಂಡಾಣು ಅಥವಾ ವೀರ್ಯಾಣುವನ್ನು ಪಡೆದು ಬಾಡಿಗೆ ತಾಯ್ತನದ ಮೂಲಕ ಸಂತಾನ ಹೊಂದಲು ಕೇಂದ್ರ ಸರ್ಕಾರ ನಿಯಮಗಳಿಗೆ ತಿದ್ದುಪಡಿ ಮಾಡಿದೆ.

ಪತಿ ಅಥವಾ ಪತ್ನಿಯ ಪೈಕಿ ಒಬ್ಬರು ಆರೋಗ್ಯ ಸಂಬಂಧಿ ಸಮಸ್ಯೆ ಹೊಂದಿದ್ದಾರೆ ಎಂದು ಜಿಲ್ಲಾ ವೈದ್ಯಕೀಯ ಮಂಡಳಿ ಪ್ರಮಾಣೀಕರಿಸಬೇಕಾಗುತ್ತದೆ. 

ಅದಾದ ಬಳಿಕ ದಾನಿಗಳಿಂದ ನೆರವು ಪಡೆಯಬಹುದಾಗಿದೆ. ಈ ಸಂಬಂಧ 2022ರ ಬಾಡಿಗೆ ತಾಯ್ತನ ನಿಯಮಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದು, ಬುಧವಾರ ಅಧಿಸೂಚನೆ ಹೊರಡಿಸಿದೆ.

ಹಾಗೊಂದು ವೇಳೆ, ದಂಪತಿ ಪೈಕಿ ಇಬ್ಬರಿಗೂ ಆರೋಗ್ಯ ಸಮಸ್ಯೆ ಇದ್ದರೆ ಅಥವಾ ಅಂಡಾಣು/ವೀರ್ಯಾಣು ಉತ್ಪತ್ತಿ ಅವರಲ್ಲಿ ಇಲ್ಲದಿದ್ದರೆ ಅವರು ಬಾಡಿಗೆ ತಾಯ್ತನದ ಮೊರೆ ಹೋಗುವಂತಿಲ್ಲ ಎಂದು ನಿಯಮ ಹೇಳುತ್ತದೆ.

ಈವರೆಗೆ ದಾನಿಗಳಿಗೆ ನಿಷೇಧವಿತ್ತು: ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವವರು ದಾನಿಗಳಿಂದ ನೆರವು ಪಡೆಯುವುದನ್ನು ನಿಷೇಧಿಸಿ 2023ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದರ ವಿರುದ್ಧ ದೇಶಾದ್ಯಂತ ಮಹಿಳೆಯರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.

ಹುಟ್ಟಿನಿಂದಲೇ ಬರುವ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಬಾಡಿಗೆ ಅಂಡಾಣುವಿನ ಮೂಲಕ ತಾಯ್ತನ ಹೊಂದಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ ಈ ತಿದ್ದುಪಡಿಯಾಗಿದೆ.

Share this article