ತಿರುಪತಿ ದೇಗುಲದಿಂದ ಹಿಂದುಯೇತರ ನೌಕರರು ಔಟ್‌?

KannadaprabhaNewsNetwork |  
Published : Nov 20, 2024, 12:35 AM IST
ತಿರುಪತಿ | Kannada Prabha

ಸಾರಾಂಶ

ಹಿಂದಿನ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ತಿರುಪತಿ ದೇಗುಲದ ವಿವಿಧ ಹುದ್ದೆಗಳಿಗೆ ನೇಮಕವಾಗಿದ್ದ ಹಿಂದೂಯೇತರ ಸಿಬ್ಬಂದಿಗಳನ್ನು ವಿಆರ್‌ಎಸ್‌ ಮೂಲಕ ಸ್ವಯಂ ನಿವೃತ್ತಿಗೊಳಿಸಬೇಕು ಅಥವಾ ಅನ್ಯ ಸರ್ಕಾರಿ ಇಲಾಖೆಗೆ ವರ್ಗಾಯಿಸಬೇಕು ಎಂದು ತಿರುಮಲ ತಿರುಪತಿ ದೇವಸ್ವಾನ ಮಂಡಳಿ (ಟಿಟಿಡಿ) ಗೊತ್ತುವಳಿ ಅಂಗೀಕರಿಸಿದೆ.

ತಿರುಪತಿ: ಹಿಂದಿನ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ತಿರುಪತಿ ದೇಗುಲದ ವಿವಿಧ ಹುದ್ದೆಗಳಿಗೆ ನೇಮಕವಾಗಿದ್ದ ಹಿಂದೂಯೇತರ ಸಿಬ್ಬಂದಿಗಳನ್ನು ವಿಆರ್‌ಎಸ್‌ ಮೂಲಕ ಸ್ವಯಂ ನಿವೃತ್ತಿಗೊಳಿಸಬೇಕು ಅಥವಾ ಅನ್ಯ ಸರ್ಕಾರಿ ಇಲಾಖೆಗೆ ವರ್ಗಾಯಿಸಬೇಕು ಎಂದು ತಿರುಮಲ ತಿರುಪತಿ ದೇವಸ್ವಾನ ಮಂಡಳಿ (ಟಿಟಿಡಿ) ಗೊತ್ತುವಳಿ ಅಂಗೀಕರಿಸಿದೆ.

ಸೋಮವಾರ ನಡೆದ ಬಿ.ಆರ್‌. ನಾಯ್ಡು ಅಧ್ಯಕ್ಷತೆಯಲ್ಲಿ ನಡೆದ ಟಿಟಿಡಿ ನೂತನ ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿ, ‘ಟಿಟಿಡಿಯಲ್ಲಿನ ಹಿಂದೂಯೇತರ ಸಿಬ್ಬಂದಿಗಳು, ಒಂದೋ ಸ್ವಯಂ ನಿವೃತ್ತಿ ಪಡೆಯಬೇಕು ಇಲ್ಲವೇ ಸರ್ಕಾರದ ಬೇರೆ ಇಲಾಖೆಗೆ ವರ್ಗಾವಣೆಯಾಗಲು ಸಿದ್ಧರಿರಬೇಕು’ ಎಂಬ ಗೊತ್ತುವಳಿ ಪಾಸು ಮಾಡಲಾಯಿತು.

ಟಿಟಿಡಿಯ ಈ ನಿರ್ಧಾರದಿಂದ ಟಿಟಿಡಿ ವ್ಯಾಪ್ತಿಗೆ ಬರುವ 7000 ಕಾಯಂ ಸಿಬ್ಬಂದಿ ಪೈಕಿ 300 ಹಿಂದೂಯೇತರ ಸಿಬ್ಬಂದಿ ತಮಗೆ ನೀಡಿರುವ ಆಯ್ಕೆಯ ಪೈಕಿ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿ ಬರಲಿದೆ. ಇನ್ನು ಟಿಟಿಡಿ 14000 ಗುತ್ತಿಗೆ ಸಿಬ್ಬಂದಿಗಳನ್ನು ಕೂಡ ಹೊಂದಿದ್ದು, ಈ ಪೈಕಿ ಎಷ್ಟು ಹಿಂದೂಯೇತರ ಸಿಬ್ಬಂದಿ ಇದ್ದಾರೆ ಎಂಬುದು ಖಚಿತಪಟ್ಟಿಲ್ಲ.

ಟಿಟಿಡಿ ಕಾಯ್ದೆಯ ಅನ್ವಯ ಹಿಂದೂಯೇತರ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವಂತಿಲ್ಲ. ಆದರೂ ಹಿಂದಿನ ಜಗನ್‌ ಅವಧಿಯಲ್ಲಿ ಕಾನೂನು ಬಾಹಿರವಾಗಿ ಇಂಥ ನೇಮಕ ಮಾಡಲಾಗಿತ್ತು ಎಂದು ಮೂಲಗಳು ಹೇಳಿವೆ.

ಇತರ ನಿರ್ಧಾರ:

ದೇಗುಲದಲ್ಲಿ ಜನದಟ್ಟಣೆ ಕಡಿಮೆ ಮಾಡಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಟಿಟಿಡಿ ಆವರಣದಲ್ಲಿ ರಾಜಕೀಯ ಹೇಳಿಕೆ ನೀಡಬಾರದು. ಲಡ್ಡು ವಿವಾದದ ಹಿನ್ನೆಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ತುಪ್ಪವನ್ನೇ ಲಡ್ಡು ತಯಾರಿಕೆಗೆ ಬಳಸಬೇಕು ಎಂಬ ನಿರ್ಣಯಗಳನ್ನೂ ಮಂಡಳಿ ತೆಗೆದುಕೊಂಡಿತು.

____

ಈ ನಡುವೆ ಇತ್ತೀಚೆಗೆ ರಾಜ್ಯದಲ್ಲಿ ಅಧಿಕಾರ ಬಂದ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ, ಟಿಟಿಡಿಗೆ ಹೊಸ ಮಂಡಳಿಯನ್ನು ನೇಮಕ ಮಾಡಿತ್ತು. ಅದು ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಳಿಬಂದಿದ್ದ ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬಿರುವ ತುಪ್ಪ ಬಳಕೆಯ ಪ್ರಕ್ರಿಯೆಗೆ ಕಡಿವಾಣ ಹಾಕುವುದರ ಜೊತೆಗೆ, ಹಿಂದೂಯೇತರ ಸಿಬ್ಬಂದಿಗಳನ್ನು ತೆಗೆದು ಹಾಕುವ ಘೋಷಣೆ ಮಾಡಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ