ಚೆನ್ನೈ: ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ರಾಷ್ಟ್ರಗೀತೆಗೆ ಅವಮಾನ ಸೇರಿದಂತೆ ಹಲವು ಅಸಂಬದ್ಧ ಅಂಶಗಳಿವೆ ಎಂದು ಆರೋಪಿಸಿ ತಮಿಳುನಾಡು ರಾಜ್ಯಪಾಲ ಆರ್. ಎನ್. ರವಿ ಬಜೆಟ್ ಅಧಿವೇಶನದ ಮೊದಲ ದಿನ, ಭಾಷಣವನ್ನು ಓದದೇ ವಿಧಾನಸಭೆಯಿಂದ ಹೊರನಡೆದ ಪ್ರಸಂಗ ಮಂಗಳವಾರ ನಡೆದಿದೆ. ಈ ಮೂಲಕ ಸತತ 4ನೇ ವರ್ಷ ರಾಜ್ಯಪಾಲರು ಭಾಷಣವನ್ನು ಓದದೆ ಸದನದಿಂದ ಹೊರನಡೆದಂತಾಗಿದೆ.
ಭಾಷಣ ಓದಲು ಆರಂಭಿಸಿದ ರಾಜ್ಯಪಾಲರು ಅಸಮಾಧಾನಗೊಂಡು ವಿಧಾನಸಭೆಯಿಂದ ಹೊರನಡೆದು ಕಾರನ್ನೇರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆ ಬಳಿಕ ಲೋಕಭವನ ಅವರ ಈ ನಡೆಗೆ 13 ಕಾರಣಗಳನ್ನು ಬಿಡುಗಡೆ ಮಾಡಿದೆ.
‘ಭಾಷಣದಲ್ಲಿ ರಾಷ್ಟ್ರಗೀತೆಗೆ ಅವಮಾನಿಸುವ ಅಂಶಗಳಿದ್ದವು. ವಿವಿಧ ತಪ್ಪುಗಳು, ದಾರಿ ತಪ್ಪಿಸುವ ಹೇಳಿಕೆಗಳು ಮತ್ತು ಆಧಾರರಹಿತ ವಾದಗಳಿದ್ದವು. ಆದರೆ ಭಾಷಣದಲ್ಲಿ ಜನರನ್ನು ಕಾಡುತ್ತಿರುವ ಗಂಭೀರ ಸಮಸ್ಯೆ ನಿರ್ಲಕ್ಷಿಸಲಾಗಿತ್ತು. ಮೂಲಭೂತ ಸಾಂವಿಧಾನಿಕ ಕರ್ತವ್ಯವನ್ನು ಕಡೆಗಣಿಸಲಾಗಿತ್ತು. ತಮಿಳುನಾಡು 12 ಲಕ್ಷ ಕೋಟಿ ರು.ಗಳಿಗಿಂತ ಹೆಚ್ಚಿನ ಬೃಹತ್ ಹೂಡಿಕೆಗಳನ್ನು ಆಕರ್ಷಿಸಿದೆ ಎಂಬ ಸತ್ಯಕ್ಕೆ ದೂರವಾದ ಸಂಗತಿಯನ್ನು ಉಲ್ಲೇಖಿಸಲಾಗಿತ್ತು. ಪೋಕ್ಸೊ ಅತ್ಯಾಚಾರ ಪ್ರಕರಣಗಳು ಶೇ.55ಕ್ಕಿಂತ ಹೆಚ್ಚು ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಶೇ.33ಕ್ಕಿಂತ ಹೆಚ್ಚಿದ್ದರೂ, ಭಾಷಣದಲ್ಲಿ ಮಹಿಳೆಯರ ಸುರಕ್ಷತೆಯ ವಿಷಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು. ಶಿಕ್ಷಣದ ಗುಣಮಟ್ಟ ಕುಸಿತದ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಂತಿಲ್ಲ’ ಎಂದು ಲೋಕಭವನ ಆರೋಪಿಸಿದೆ.
ರಾಜ್ಯಪಾಲರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ‘ರಾಜ್ಯಪಾಲರು ನೀತಿ ಉಲ್ಲಂಘಿಸಿ ಹೊರನಡೆದಿದ್ದಾರೆ. ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ, ರಾಜ್ಯಪಾಲರು ತಮ್ಮ ಅಭಿಪ್ರಾಯಗಳನ್ನು ಸೇರಿಸಲು ಅಥವಾ ಬೇರೆ ಏನನ್ನೂ ಹೇಳಲು ಯಾವುದೇ ಅವಕಾಶವಿಲ್ಲ. ರಾಜ್ಯಪಾಲರು ವಿಧಾನಸಭೆಗೆ ಮಾಡುವ ಭಾಷಣವನ್ನು ಕಡ್ಡಾಯಗೊಳಿಸುವ ನಿಬಂಧನೆಗಳನ್ನು ಕೈಬಿಡಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೋರುತ್ತೇವೆ’ ಎಂದಿದ್ದಾರೆ.