ಆಂಧ್ರದಲ್ಲಿ ತೆಲುಗುದೇಶಂ ಗೆದ್ದರೆ ಬಡವರಿಗೆ ಫ್ರೀ ಸೈಟ್‌!

KannadaprabhaNewsNetwork |  
Published : May 01, 2024, 02:04 AM IST
ಚಂದ್ರಬಾಬು ನಾಯ್ಡು | Kannada Prabha

ಸಾರಾಂಶ

ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ. 59 ವರ್ಷದೊಳಗಿನ ಮಹಿಳೆಯರಿಗೆ ಮಾಸಿಕ ₹1500. ಪ್ರತಿ ಕುಟುಂಬಕ್ಕೆ ವಾರ್ಷಿಕ 3 ಗ್ಯಾಸ್‌ ಸಿಲಿಂಡರ್‌. ರೈತರಿಗೆ ವಾರ್ಷಿಕ 20 ಸಾವಿರ ರುಪಾಯಿ ನೆರವು. ಬಡವರಿಗೆ ನಿವೇಶನದ ಜತೆ ಮರಳು ಕೂಡ ವಿತರಣೆ. ವಾಸಿಸುವವನೇ ಭೂಮಿಯ ಒಡೆಯ ಕಾಯ್ದೆ ರದ್ದು ಮಾಡಲಾಗುವುದು ಎಂದು ವಿಧಾನಸಭೆ ಚುನಾವಣೆಗೆ ಟಿಡಿಪಿ-ಜನಸೇನಾ-ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿವೆ.

ಅಮರಾವತಿ: ಮೇ 13ರಂದು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗೆ ನಡೆಯುವ ಚುನಾವಣೆ ಸಂಬಂಧ ತೆಲುಗು ದೇಶಂ-ಜನಸೇನಾ ಮತ್ತು ಬಿಜೆಪಿ ಮೈತ್ರಿಕೂಟ ಮಂಗಳವಾರ ಭರ್ಜರಿ ಉಚಿತ ಕೊಡುಗೆ ಒಳಗೊಂಡ ಪ್ರಣಾಳಿಕೆ ಪ್ರಕಟಿಸಿವೆ. ಇದರಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಬಡವರಿಗೆ 900 ಚದರಡಿ ಉಚಿತ ಸೈಟ್‌, ಬಸ್‌ನಲ್ಲಿ ಉಚಿತ ಪ್ರಯಾಣ, ಮಹಿಳೆಯರಿಗೆ ಪಿಂಚಣಿಯಂಥ ಹಲವು ಜನಪ್ರಿಯ ಅಂಶಗಳಿವೆ.ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಜನಸೇನಾ ಪಕ್ಷದ ನಾಯಕ, ನಟ ಪವನ್‌ ಕಲ್ಯಾಣ್‌ ಮಂಗಳವಾರ ಇಲ್ಲಿ ಎನ್‌ಡಿಎ ಮೈತ್ರಿಕೂಟದ ಪ್ರಣಾಳಿಕೆ ಬಿಡುಗಡೆ ಮಾಡಿದರು. ಸೂಪರ್‌ ಸಿಕ್ಸ್‌, ಪಿ4 ಹೀಗೆ ಹಲವು ವಿಶೇಷ ಭರವಸೆಗಳನ್ನು ಪ್ರಣಾಳಿಕೆ ಒಳಗೊಂಡಿದೆ.ಸೂಪರ್‌ಸಿಕ್ಸ್‌:

19-59ರ ವಯೋಮಾನದ ಮಹಿಳೆಯರಿಗೆ ಮಾಸಿಕ 1500 ರು. ಪಿಂಚಣಿ, ಯುವಕರಿಗೆ 20 ಲಕ್ಷ ಉದ್ಯೋಗ ನೀಡಿಕೆ, ನಿರುದ್ಯೋಗಿಗಳಿಗೆ ಮಾಸಿಕ 3000 ರು. ಭತ್ಯೆ, ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ, ಪ್ರತಿ ಕುಟುಂಬಕ್ಕೆ ವಾರ್ಷಿಕ 3 ಉಚಿತ ಎಲ್ಪಿಜಿ ಸಿಲಿಂಡರ್‌, ಪ್ರತಿ ರೈತರಿಗೆ ವಾರ್ಷಿಕ 20000 ರು. ನೆರವಿನ ಭರವಸೆ ನೀಡಲಾಗಿದೆ.

ಇತರೆ ಭರವಸೆ:

ಬಡ ಕುಟುಂಬಗಳಿಗೆ 900 ಚದರ ಅಡಿ ಉಚಿತ ಭೂಮಿ, ಮನೆ ಕಟ್ಟಲು ಉಚಿತ ಮರಳು, ತಲ್ಲಿಕಿ ವಂಡನಮ್‌ ಯೋಜನೆಯಲ್ಲಿ ದಾಖಲಾದ ಶಾಲಾ ಮಕ್ಕಳಿಗೆ ವಾರ್ಷಿಕ 15 ಸಾವಿರ ರು., ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಮೀನುಗಾರರಿಗೆ 20 ಸಾವಿರ ರು. ಆರ್ಥಿಕ ನೆರವು, ಮನೆಗಳಿಗೆ ಉಚಿತ ನೀರು ಸಂಪರ್ಕ, ಉಚಿತ ಕುಡಿಯುವ ನೀರು ಪೂರೈಕೆ, ಉಳುವವರು ಹಾಗೂ ವಾಸಿಸುವವನೇ ಭೂಮಿಯ ಒಡೆಯ ಕಾಯ್ದೆ ರದ್ದು ಮಾಡುವ ಭರವಸೆ ನೀಡಲಾಗಿದೆ.ದೋಣಿ ರಿಪೇರಿಗೆ ಸಹಾಯಧನ, ಸಣ್ಣ ವ್ಯಾಪಾರಸ್ಥರಿಗೆ ಬಡ್ಡಿ ರಹಿತ ಸಾಲ, ಹಿಂದುಳಿದ ಜಾತಿಗಳ ರಕ್ಷಣೆಗೆ ವಿಶೇಷ ಕಾಯ್ದೆ, ಪೊಲ್ಲಾವರಂ ಯೋಜನೆ ಪೂರ್ಣ, ಎಲ್ಲಾ ಕುಟುಂಬಗಳಿಗೆ 25 ಲಕ್ಷ ರು. ಆರೋಗ್ಯ ವಿಮೆ, ಅಪಘಾತದಲ್ಲಿ ಸಾವಿಗೆ 10 ಲಕ್ಷ ರು. ವಿಮೆ, ಸಹಜ ಸಾವಿಗೆ 5 ಲಕ್ಷ ರು., ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಬಡವರಿಗೆ ಉಚಿತ ಜನೆರಿಕ್‌ ಔಷಧ ವಿತರಣೆ, ರಾಜಧಾನಿಯಾಗಿ ಅಮರಾವತಿ ಅಭಿವೃದ್ಧಿಯ ಭರವಸೆ ನೀಡಲಾಗಿದೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ