ಒಬಿಸಿ ಮೀಸಲಿಗೆ ತಡೆ: ತೆಲಂಗಾಣ ಬಂದ್‌ ಯಶಸ್ವಿ

KannadaprabhaNewsNetwork |  
Published : Oct 19, 2025, 01:03 AM IST
ತೆಲಂಗಾಣ | Kannada Prabha

ಸಾರಾಂಶ

ತೆಲಂಗಾಣ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗದವರಿಗೆ ಶೇ.42ರಷ್ಟು ಮೀಸಲಾತಿ ನೀಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆ, ಮಧ್ಯಪ್ರವೇಶಕ್ಕೆ ಸುಪ್ರೀಂ ನಕಾರ ಹಿನ್ನೆಲೆಯಲ್ಲಿ ಶನಿವಾರ ತೆಲಂಗಾಣ ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್‌ ಸಂಪೂರ್ಣ ಯಶಸ್ವಿಯಾಯಿತು. ಈ ವೇಳೆ ಕೆಲವು ಪ್ರತಿಭಟನಾಕಾರರು ಪೆಟ್ರೋಲ್‌ ಪಂಪ್‌ , ಕೆಲ ಅಂಗಡಿಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದರು.

ಹೈದರಾಬಾದ್‌: ತೆಲಂಗಾಣ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗದವರಿಗೆ ಶೇ.42ರಷ್ಟು ಮೀಸಲಾತಿ ನೀಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆ, ಮಧ್ಯಪ್ರವೇಶಕ್ಕೆ ಸುಪ್ರೀಂ ನಕಾರ ಹಿನ್ನೆಲೆಯಲ್ಲಿ ಶನಿವಾರ ತೆಲಂಗಾಣ ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್‌ ಸಂಪೂರ್ಣ ಯಶಸ್ವಿಯಾಯಿತು. ಈ ವೇಳೆ ಕೆಲವು ಪ್ರತಿಭಟನಾಕಾರರು ಪೆಟ್ರೋಲ್‌ ಪಂಪ್‌ , ಕೆಲ ಅಂಗಡಿಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದರು.

ತೆಲಂಗಾಣ ಹಿಂದುಳಿದ ವರ್ಗಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಬಂದ್‌ಗೆ ಆಡಳಿತರೂಢ ಕಾಂಗ್ರೆಸ್‌, ಬಿಜೆಪಿ, ಬಿಆರ್‌ಎಸ್‌ ಪಕ್ಷದ ಕಾರ್ಯಕರ್ತರು ಬೆಂಬಲ ಸೂಚಿಸಿದರು. ಬಂದ್‌ ಹಿನ್ನೆಲೆಯಲ್ಲಿ ಜನಜೀವ ಅಸ್ತವ್ಯಸ್ತಗೊಂಡಿತ್ತು. ಉದ್ಯಮಗಳು, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ತಬ್ಧವಾಗಿತ್ತು. ಇನ್ನು ಪ್ರತಿಭಟನೆ ವೇಳೆ ಹೈದರಾಬಾದ್‌ನಲ್ಲಿ ಕೆಲವೆಡೆ ಹಿಂಸಾಚಾರವೂ ನಡೆಯಿತು.

==

ಜಾತಿಕಲಹ ನಿಲ್ಲದಿದ್ರೆ ಶೀಘ್ರ ಹಿಂದೂ ಗುರುತೇ ಮಾಯ

-ಜಾತಿ ಪ್ರತಿಪಾದನೆಯಿಂದ ಸಮಾಜಕ್ಕೆ ಹಾನಿ: ಹೈಕೋರ್ಟ್‌

ಭೋಪಾಲ್‌: ರಾಜ್ಯದಲ್ಲಿ ಜಾತಿ ಆಧರಿತ ಸಂಘರ್ಷಗಳು ಮತ್ತು ತಾರತಮ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದು ಆಘಾತಕಾರಿ. ಜಾತಿಭೇದಗಳು ಹೀಗೆಯೇ ಮುಂದುವರಿದರೆ, ಮುಂದೊಂದು ದಿನ ಇಡೀ ಹಿಂದೂ ಗುರುತೇ ಅಳಿಸಿಹೋಗಬಹುದು ಎಂದು ಮಧ್ಯಪ್ರದೇಶ ಹೈಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದೆ.

ಅ.11ರಂದು ದಮೋಹ್‌ ಜಿಲ್ಲೆಯ ಒಬಿಸಿ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಎಐ ರಚಿತ ಮೀಮ್‌ ಹಂಚಿಕೊಂಡಿದ್ದಕ್ಕಾಗಿ, ಮೇಲ್ವರ್ಗದ ಜನರು ಅವನನ್ನು ನಿಂದಿಸಿದ್ದರು. ಅಲ್ಲದೆ, ಆತ ಇನ್ನೊಬ್ಬ ವ್ಯಕ್ತಿಯ ಪಾದವನ್ನು ತೊಳೆಯುವಂತೆ ಮಾಡಿದ್ದರು. ಈ ದೌರ್ಜನ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ಈ ಕುರಿತು ಕೋರ್ಟ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.ಅ.14ರಂದು ಇದರ ವಿಚಾರಣೆ ಕೈಗೆತ್ತಿಕೊಂಡ ನ್ಯಾ. ಅತುಲ್‌ ಶ್ರೀಧರನ್‌ ಮತ್ತು ನ್ಯಾ. ಪ್ರದೀಪ್‌ ಮಿತ್ತಲ್‌ ಅವರ ಪೀಠ,

‘ರಾಜ್ಯದಲ್ಲಿ ಜಾತಿ ಸಂಬಂಧಿತ ಹಿಂಸಾಚಾರ ಮತ್ತು ತಾರತಮ್ಯ ಪದೇ ಪದೇ ಘಟಿಸುತ್ತಿರುವುದು ಆಘಾತಕಾರಿ. ಪ್ರತಿಯೊಂದು ಸಮುದಾಯವು, ಇಡೀ ಹಿಂದೂ ಸಮಾಜಕ್ಕೆ ಹಾನಿಯಾಗುವಂತೆ ನಾಚಿಕೆಯಿಲ್ಲದೆ ತನ್ನ ಜಾತಿ ಗುರುತನ್ನು ಎತ್ತಿ ತೋರಿಸುತ್ತಿದೆ. ವ್ಯಕ್ತಿಗಳು ತಮ್ಮನ್ನು ತಾವು ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು ಎಂದು ಕರೆದುಕೊಳ್ಳುತ್ತಾರೆ. ಪ್ರತಿಯೊಬ್ಬರೂ ತಮ್ಮ ಸ್ವತಂತ್ರ ಗುರುತನ್ನು ಪ್ರತಿಪಾದಿಸುತ್ತಾರೆ. ಈ ಹಂತದಲ್ಲೇ ಇದನ್ನು ನಿಯಂತ್ರಿಸದಿದ್ದರೆ, ಇನ್ನು ಒಂದೂವರೆ ಶತಮಾನದೊಳಗೆ ಹಿಂದೂಗಳು ಎಂದು ಕರೆದುಕೊಳ್ಳುವ ಜನರೇ ಅಸ್ತಿತ್ವದಲ್ಲಿರುವುದಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದೆ.

==

ಪೋಷಕರನ್ನು ನಿರ್ಲಕ್ಷಿಸುವ ಅಧಿಕಾರಿಗಳ ವೇತನ ಕಟ್‌

ತೆಲಂಗಾಣದಲ್ಲಿ ಹೊಸ ಕಾಯ್ದೆ ರೂಪಿಸಲು ನಿರ್ಧಾರ

ಹೈದರಾಬಾದ್‌: ತಮ್ಮ ತಂದೆ ತಾಯಿಯನ್ನು ನೋಡಿಕೊಳ್ಳದೆ ನಿರ್ಲಕ್ಷಿಸುವ ಸರ್ಕಾರಿ ನೌಕರರ ಸಂಬಳವನ್ನು ಶೇ.10- 15ರಷ್ಟು ಕಡಿತಗೊಳಿಸಿ, ಅದನ್ನು ಪೋಷಕರಿಗೆ ನೀಡುವ ಕಾನೂನನ್ನು ಜಾರಿಗೆ ತರಲು ತೆಲಂಗಾಣ ಸರ್ಕಾರ ಚಿಂತನೆ ನಡೆಸಿದೆ.ಈ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಮಾಹಿತಿ ನೀಡಿದ್ದು, ‘ ಒಂದು ವೇಳೆ ಸರ್ಕಾರಿ ನೌಕರರು ತಮ್ಮ ತಂದೆ- ತಾಯಿಯನ್ನು ನಿರ್ಲಕ್ಷಿಸಿದರೆ ಅವರ ಶೇ,10- 15ರಷ್ಟು ವೇತನವನ್ನು ಕಡಿತಗೊಳಿಸಿ ಅವರ ತಂದೆ- ತಾಯಿ ಬ್ಯಾಂಕ್‌ ಖಾತೆಯಲ್ಲಿ ಠೇವಣಿ ಇಡಲಾಗುತ್ತದೆ. ನೀವು ಶಾಸನ ರಚಿಸುವವರು. ನೀವು ತಿಂಗಳ ವೇತನ ಪಡೆಯುವಂತೆ ನಿಮ್ಮ ಹೆತ್ತವರೂ ಕೂಡ ಇದರಿಂದ ಮಾಸಿಕ ಆದಾಯ ಪಡೆಯುವುದನ್ನು ನಾವು ಖಚಿತ ಪಡಿಸಿಕೊಳ್ಳುತ್ತೇವೆ’ ಎಂದಿದ್ದಾರೆ. ಇದೇ ವೇಳೆ ಅವರು ಕಾಯ್ದೆ ರಚಿಸಲು ಅಧಿಕಾರಿಗಳ ಸಮಿತಿ ರಚಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ
ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ