ಹೈದರಾಬಾದ್: ಕಳೆದ 6 ದಶಕಗಳಿಂದ ಒಂದು ಕೋಟಿಗೂ ಅಧಿಕ ಸಸಿಗಳನ್ನು ನೆಟ್ಟು, ‘ವನಜೀವಿ’ ಎಂದು ಪಟ್ಟ ಪಡೆದಿದ್ದ ತೆಲಂಗಾಣದ ಪದ್ಮಶ್ರೀ ವಿಜೇತ ದರಿಪಲ್ಲಿ ರಾಮಯ್ಯ ಶನಿವಾರ ನಿಧನರಾಗಿದ್ದಾರೆ. 87 ಪ್ರಾಯದವರಾಗಿದ್ದ ಇವರು, ಖಮ್ಮಂ ಜಿಲ್ಲೆಯ ರೆಡ್ಡಿಪಲ್ಲಿಯಲ್ಲಿ ಹೃದಯಾಘಾತದಿಂದ ಅಸುನೀಗಿದರು.
ಇವರು 2017ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಇತ್ತೀಚೆಗಷ್ಟೇ ತೆಲಂಗಾಣ ಸರ್ಕಾರ, ರಾಮಯ್ಯ ಅವರ ಕತೆಯನ್ನು ಶಾಲಾ ಪಠ್ಯಪುಸ್ತಕಕ್ಕೆ ಸೇರಿಸಿತ್ತು. ರಾಮಯ್ಯ ಅವರ ಅಗಲಿಕೆಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಸಂತಾಪ ಸೂಚಿಸಿದ್ದು, ‘ರಾಮಯ್ಯನವರ ನಿಧನ ಸಮಾಜಕ್ಕೆ ತುಂಬಲಾಗದ ನಷ್ಟ. ಪ್ರಕೃತಿ ಮತ್ತು ಪರಿಸರವಿಲ್ಲದೆ ಮನುಕುಲದ ಉಳಿವು ಅಸಾಧ್ಯ ಎಂದು ನಂಬಿದ್ದ ಅವರು, ಒಬ್ಬಂಟಿಯಾಗಿ ಸಸಿ ನೆಡಲು ಆರಂಭಿಸಿ, ತಮ್ಮಿಡೀ ಜೀವನವನ್ನು ಪರಿಸರ ಸಂರಕ್ಷಣೆಗೆ ಮುಡಿಪಾಗಿಟ್ಟು ಯುವಕರಿಗೆ ಮತ್ತು ಸಮಾಜಕ್ಕೆ ಸ್ಫೂರ್ತಿಯಾದರು’ ಎಂದರು.
ಪವನ್ ಮಗನ ರಕ್ಷಿಸಿದ 4 ಭಾರತೀಯರಿಗೆ ಸಿಂಗಾಪುರ ಸರ್ಕಾರ ಸನ್ಮಾನ
ಸಿಂಗಾಪುರ: ಸಿಂಗಾಪುರದ ಶಾಲೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಆಂಧ್ರಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ ಕಿರಿಯ ಪುತ್ರ ಮಾರ್ಕ್ ಶಂಕರ್ ಸೇರಿದಂತೆ 22 ಮಂದಿಯನ್ನು ರಕ್ಷಿಸಿದ ಭಾರತ ಮೂಲದ ನಾಲ್ವರು ವಲಸೆ ಕಾರ್ಮಿಕರನ್ನು ಪಶ್ಚಿಮ ಬಂಗಾಳ ಸರ್ಕಾರ ಸನ್ಮಾನಿಸಿದೆ.ಏ.8ರಂದು ಸಿಂಗಾಪುರದ ಶಾಲೆಯೊಂದರಲ್ಲಿ ಅಗ್ನಿ ಅವಘಢ ಸಂಭವಿಸಿತ್ತು. ಈ ವೇಳೆ ಮಕ್ಕಳ ಕಿರುಚಾಟ ಕೇಳಿ ಭಾರತ ಮೂಲದ ಇಂದ್ರಜಿತ್ ಸಿಂಗ್, ಸುಬ್ರಮಣಿಯನ್ ಸರಣ್ ರಾಜ್, ನಾಗರಾಜನ್ ಅನ್ಬರಸನ್ ಮತ್ತು ಶಿವಸಾಮಿ ವಿಜಯರಾಜ್ ತಮ್ಮ ಜೀವದ ಹಂಗು ತೊರೆದು ಕಟ್ಟಡದಿಂದ ಮಕ್ಕಳನ್ನು ಹೊರಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಅವರು ಘಟನೆಯಲ್ಲಿ 16 ಮಕ್ಕಳು ಮತ್ತು 6 ವಯಸ್ಕರು ಸೇರಿದಂತೆ 22 ಮಂದಿ ಜೀವ ಉಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಂಗಾಪುರದ ಮಾನವ ಸಚಿವಾಲಯದ ಏಸ್ ಸಂಸ್ಥೆ ನಾಲ್ವರನ್ನು ಸನ್ಮಾನಿಸಿದೆ.
ಹಿಂದೂ ತಿಲಕದ ಬಗ್ಗೆ ಕೀಳು ಹೇಳಿಕೆ: ತಮಿಳುನಾಡು ಸಚಿವ ಕ್ಷಮೆ
ಚೆನ್ನೈ: ಹಿಂದೂ ತಿಲಕಗಳ ಬಗ್ಗೆ ಕೀಳು ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಕೆ. ಪೊನ್ಮುಡಿ ಕ್ಷಮೆ ಯಾಚಿಸಿದ್ದಾರೆ. ‘ನನ್ನ ಹೇಳಿಕೆಯಿಂದ ನಕಾರಾತ್ಮಕ ಸಂದೇಶ ರವಾನೇ ಆಗಿದೆ. ಈ ಬಗ್ಗೆ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ. ‘ಹಿಂದೂಗಳು ಅಡ್ಡನಾಮ ಹಾಕಿಕೊಂಡರೆ ಮಲಗಿ ಲೈಂಗಿಕ ಕ್ರಿಯೆ ನಡೆಸಬೇಕು ಹಾಗೂ ಉದ್ದ ನಾಮ ಹಾಕಿದ್ದರೆ ಎದ್ದುನಿಂತು ಲೈಂಗಿಕ ಕ್ರಿಯೆ ನಡೆಸಬೇಕು ಎಂದು ವೇಶ್ಯೆ ಹೇಳಿದ್ದಳು’ ಎಂದು ಅವರು ಇತ್ತೀಚೆಗೆ ಕೀಳು ಹೇಳಿಕೆ ನೀಡಿದ್ದರು. ಇದರ ವಿರುದ್ಧ ಬಿಜೆಪಿ, ವಿಶ್ವ ಹಿಂದೂ ಪರಿಷದ್ ಮತ್ತು ಅಣ್ಣಾಡಿಎಂಕೆ ಸಿಡಿದೆದ್ದಿದ್ದವು ಹಾಗೂ ಸಚಿವನ ವಜಾಗೆ ಆಗ್ರಹಿಸಿದ್ದವು.