ಶ್ರೀನಗರ: ಭಯೋತ್ಪಾದನೆ, ಒಳನುಸುಳುವಿಕೆ, ಗಡಿಯಲ್ಲಿನ ಕಿರಿಕಿರಿಯಿಂದ ಬಗಲಲ್ಲಿರುವ ಮುಳ್ಳಿನಂತೆ ಕಾಡುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಜಲಾಘಾತ ನೀಡುವತ್ತ ಭಾರತ ಹೆಜ್ಜೆ ಇಡುತ್ತಿದೆ. ಭಾರತದಿಂದ ಪಾಕ್‌ಗೆ ಹರಿಯುವ ಚಿನಾಬ್ ನದಿಗೆ ಅಡ್ಡಲಾಗಿ ದೇಶದ ಅತಿದೊಡ್ಡ ಜಲವಿದ್ಯುತ್ ಯೋಜನೆ ನಿರ್ಮಾಣಕ್ಕೆ 44 ವರ್ಷಗಳ ಬಳಿಕ ಸರ್ಕಾರ ಟೆಂಡರ್ ಕರೆದಿದೆ.
ಪಹಲ್ಗಾಂ ಉಗ್ರದಾಳಿಯ ಕೆಲ ತಿಂಗಳುಗಳ ಬಳಿಕ ಪಾಕ್ ಜತೆಗಿನ ಸಿಂಧು ಜಲ ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಿತ್ತು. ಇದರಿಂದ ನೆರೆದೇಶ ಕೆಲಕಾಲ ಬಾಯಾರಿತ್ತು. ಇದೀಗ ಪಾಕ್ ಜತೆ ಯಾವುದೇ ಮಾಹಿತಿ ಹಂಚಿಕೊಳ್ಳದೆ, ಸಾವಲ್‌ಕೋಟ್‌ನಲ್ಲಿ 1856 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಯನ್ನು ಆರಂಭಿಸಲಾಗಿದೆ. ಇದಕ್ಕಾಗಿ ರಾಷ್ಟ್ರೀಯ ಜಲವಿದ್ಯುತ್ ನಿಗಮ(ಎನ್‌ಎಚ್‌ಪಿಸಿ) ಬುಧವಾರ ಟೆಂಡರ್ ಕರೆದಿದ್ದು, ಬಿಡ್ ಸಲ್ಲಿಸಲು ಸೆ.10 ಕೊನೆ ದಿನವಾಗಿದೆ.
ಎನ್‌ಎಚ್‌ಪಿಸಿ ಮತ್ತು ಜಮ್ಮು ಕಾಶ್ಮೀರ ವಿದ್ಯುತ್ ಅಭಿವೃದ್ಧಿ ನಿಗಮ ಒಟ್ಟಾಗಿ ಈ ಯೋಜನೆ ಸಾಕಾರಕ್ಕೆ ಶ್ರಮಿಸುತ್ತಿದ್ದು, ಇದಕ್ಕೆ 22,704 ಕೋಟಿ ರು. ವ್ಯಯವಾಗುವ ಅಂದಾಜಿದೆ.
ವಿಳಂಬವೇಕೆ?:
ಚಿನಾಬ್ ನದಿ ಮೇಲೆ ಜಲವಿದ್ಯುತ್ ಸ್ಥಾವರ ನಿರ್ಮಾಣದ ಯೋಜನೆಯನ್ನು 1980ರಲ್ಲೇ ರೂಪಿಸಲಾಗಿತ್ತಾದರೂ, ಪಾಕಿಸ್ತಾನ ಆ ಬಗ್ಗೆ ಕಳವಳ ವ್ಯಕ್ತಪಡಿಸಿ, ಜಾರಿಗೆ ಬರದಂತೆ ನೋಡಿಕೊಂಡಿತ್ತು. ಕಾರಣ, ಭಾರತದಿಂದ ತನ್ನ ನೆಲಕ್ಕೆ ಹರಿಯುವ ನದಿಗೆ ಅಡ್ಡವಾಗಿ ಸ್ಥಾವರ ನಿರ್ಮಾಣವಾದರೆ, ತನಗೆ ನೀರಿನ ಕೊರತೆಯಾಗಬಹುದು ಎಂಬುದು ಪಾಕ್‌ನ ಆತಂಕವಾಗಿತ್ತು. ಜಮ್ಮು ಕಾಶ್ಮೀರ ವಿದ್ಯುತ್ ಅಭಿವೃದ್ಧಿ ನಿಗಮವು 400 ಕೋಟಿ ರು. ವೆಚ್ಚದಲ್ಲಿ ಯೋಜನೆಯನ್ನು ಆರಂಭಿಸಿತ್ತಾದರೂ, ದಶಕದ ಹಿಂದೆ ಅದನ್ನು ನಿಲ್ಲಿಸಲಾಗಿತ್ತು.
ಆದರೆ ಈಗ ಸಿಂಧು ಒಪ್ಪಂದ ಸ್ಥಗಿತವಾಗಿರುವ ಕಾರಣ, ಸಿಂಧುವಿನ ಯಾವ ಉಪನದಿಗಳ ಬಗ್ಗೆಯೂ ಪಾಕಿಸ್ತಾನಕ್ಕೆ ಮಾಹಿತಿ ನೀಡುವ ಅಗತ್ಯವಿಲ್ಲ.
ಮಹತ್ವವೇನು?:
ಸಿಂಧು ಒಪ್ಪಂದ ಸ್ಥಗಿತದ ಬಳಿಕ, ಭಾರತ ತನ್ನ ನೆಲದಲ್ಲಿ ಹರಿಯುವ ನದಿಗಳ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು. ಈ ಯೋಜನೆಯಿಂದ ಭಾರಯ ಇಂಧನ ಸ್ವಾವಲಂಬನೆ ಸಾಧಿಸುವುದಲ್ಲದೆ, ಪಶ್ಚಿಮದ ನದಿಗಳ ಮೇಲೆ ಪೂರ್ಣ ನಿಯಂತ್ರಣ ಸಾಧಿಸಬಹುದು.