ಮೋದಿ ನನ್ನ ಬೆಸ್ಟ್‌ ಫ್ರೆಂಡ್‌ ಎನ್ನುತ್ತಲೇ ಕುಟುಕಿದ ಟ್ರಂಪ್‌ : ಭಾರತಕ್ಕೆ ಟ್ರಂಪ್‌ ಟ್ಯಾಕ್ಸ್‌ ಶಾಕ್‌

Published : Jul 31, 2025, 07:32 AM IST
Donald Trump US President

ಸಾರಾಂಶ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಸಾಕಾರಗೊಳ್ಳುವ ಲಕ್ಷಣ ಕ್ಷೀಣ ಆಗುತ್ತಿದ್ದಂತೆಯೇ ‘ಆಗಸ್ಟ್ 1ರಿಂದ ಭಾರತ ಶೇ. 25ರಷ್ಟು ಸುಂಕ ಪಾವತಿಸಬೇಕಾಗುತ್ತದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ.

ವಾಷಿಂಗ್ಟನ್‌/ನವದೆಹಲಿ : ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಸಾಕಾರಗೊಳ್ಳುವ ಲಕ್ಷಣ ಕ್ಷೀಣ ಆಗುತ್ತಿದ್ದಂತೆಯೇ ‘ಆಗಸ್ಟ್ 1ರಿಂದ ಭಾರತ ಶೇ. 25ರಷ್ಟು ಸುಂಕ ಪಾವತಿಸಬೇಕಾಗುತ್ತದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ. ಇದಲ್ಲದೆ, ‘ರಷ್ಯಾದಿಂದ ಇಂಧನ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸಿದರೆ ಭಾರತ ಹೆಚ್ಚುವರಿ ದಂಡವನ್ನು ಪಾವತಿಸಬೇಕಾಗುತ್ತದೆ’ ಎಂದೂ ಎಚ್ಚರಿಸಿದ್ದಾರೆ.

ಈ ಹಿಂದೆ ಏ.2ರಂದು ಟ್ರಂಪ್‌ ಭಾರತದ ಮೇಲೆ ಶೇ.26 ತೆರಿಗೆ ಘೋಷಿಸಿದ್ದರು. ಬಳಿಕ ಅದರ ಜಾರಿಯನ್ನು ಜು.9ಕ್ಕೆ ಮುಂದೂಡಿದ್ದರು ಹಾಗೂ ನಂತರ ಮತ್ತೆ ಆ.1ಕ್ಕೆ ಮುಂದೂಡಿದ್ದರು. ಅಷ್ಟರೊಳಗೆ ಭಾರತದ ಜತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಇರಾದೆ ವ್ಯಕ್ತಪಡಿಸಿದ್ದರು. ಆದರೆ ಹಲವು ಬಿಕ್ಕಟ್ಟುಗಳ ಕಾರಣ ವ್ಯಾಪಾರ ಒಪ್ಪಂದ ಸಾಕಾರಗೊಂಡಿಲ್ಲ. ಹೀಗಾಗಿ ಆ.1ರ ಗಡುವು ಸಮೀಪಿಸುತ್ತಿರುವ ಕಾರಣ ಅವರು ಶೇ.25ರ ತರಿಗೆ ಘೋಷಿಸಿದ್ದಾರೆ.

ಇದರರ್ಥ ಭಾರತದ ಯಾವುದೇ ವಸ್ತು ಅಮೆರಿಕಕ್ಕೆ ರಫ್ತಾದರೆ ಅದರ ಮೇಲೆ ಈಗಾಗಲೇ ಇರುವ ಶೇ.10ರಷ್ಟು ಮೂಲ ತೆರಿಗೆ ಜೊತೆಗೆ ಶೇ.25ರಷ್ಟು ಹೆಚ್ಚುವರಿ ತೆರಿಗೆ ಬೀಳುತ್ತದೆ. ಆದರೆ ರಷ್ಯಾದಿಂದ ಖರೀದಿಯನ್ನು ಭಾರತ ಮುಂದುವರಿಸಿದರೆ ಹೆಚ್ಚಿನ ದಂಡ ವಿಧಿಸುವ ಟ್ರಂಪ್‌ ಹೇಳಿಕೆ ಬಗ್ಗೆ ಸ್ಪಷ್ಟತೆ ಇಲ್ಲ. ಏಕೆಂದರೆ ದಂಡ ಎಷ್ಟು ಎಂದು ಅವರು ಹೇಳಿಲ್ಲ.

ಟ್ರಂಪ್ ಹೇಳಿದ್ದೇನು?:

‘ನೆನಪಿಡಿ, ಭಾರತ ನಮ್ಮ ಸ್ನೇಹಿತನಾಗಿದ್ದರೂ, ನಾವು ವರ್ಷಗಳಲ್ಲಿ ಅವರೊಂದಿಗೆ ತುಲನಾತ್ಮಕವಾಗಿ ಕಡಿಮೆ ವ್ಯವಹಾರ ಮಾಡಿದ್ದೇವೆ. ಏಕೆಂದರೆ ಅವರ ಸುಂಕಗಳು ತುಂಬಾ ಹೆಚ್ಚಿವೆ, ವಿಶ್ವದಲ್ಲೇ ಅತ್ಯಧಿಕವಾಗಿವೆ ಮತ್ತು ಅವರು ಯಾವುದೇ ದೇಶಕ್ಕಿಂತ ಅತ್ಯಂತ ಕಠಿಣ ಮತ್ತು ಅಸಹ್ಯಕರವಾದ ವಿತ್ತೀಯವಲ್ಲದ ವ್ಯಾಪಾರ ಅಡೆತಡೆಗಳನ್ನು ಹೊಂದಿದ್ದಾರೆ’ ಎಂದು ಎಂದು ಟ್ರಂಪ್ ಟ್ರುತ್ ಸೋಶಿಯಲ್‌ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಅಲ್ಲದೆ, ‘ಅವರು (ಭಾರತ) ಯಾವಾಗಲೂ ತಮ್ಮ ಮಿಲಿಟರಿ ಉಪಕರಣಗಳ ಬಹುಪಾಲು ರಷ್ಯಾದಿಂದಲೇ ಖರೀದಿಸಿದ್ದಾರೆ. ಮತ್ತು ಚೀನಾ ಬಳಿಕ ರಷ್ಯಾದ ಅತಿದೊಡ್ಡ ಇಂಧನ ಖರೀದಿದಾರರಾಗಿದ್ದಾರೆ. ರಷ್ಯಾ ಉಕ್ರೇನ್‌ನಲ್ಲಿ ನಡೆಸುತ್ತಿರುವ ಹತ್ಯೆಯನ್ನು ನಿಲ್ಲಿಸಬೇಕೆಂದು ಎಲ್ಲರೂ ಬಯಸುತ್ತಿದ್ದಾರೆ. ಆದರೂ ಭಾರತವು ರಷ್ಯಾ ಜತೆಗೆ ನಂಟು ಬಿಟ್ಟಿಲ್ಲ. ಇದು ಎಲ್ಲವೂ ಒಳ್ಳೆಯದಲ್ಲ! ಆದ್ದರಿಂದ ಭಾರತವು ಆಗಸ್ಟ್‌ 1ರಿಂದ 25% ಸುಂಕವನ್ನು ಮತ್ತು ದಂಡವನ್ನು ಪಾವತಿಸುತ್ತದೆ. ಇದು ನಿಮ್ಮ (ಭಾರತದ) ಗಮನಕ್ಕೆ. ಧನ್ಯವಾದಗಳು’ ಎಂದಿದ್ದಾರೆ.

ಅಧಿಕಾರಿಗಳು ಹೇಳೋದೇನು?:

ಏತನ್ಮಧ್ಯೆ, ಟ್ರಂಪ್ ದೇಶಗಳಿಗೆ ವಿಧಿಸಿರುವ ಪರಸ್ಪರ ಸುಂಕಗಳು ಆಗಸ್ಟ್ 1, 2025 ರಿಂದ ಯಾವುದೇ ವಿಳಂಬವಿಲ್ಲದೆ ಜಾರಿಗೆ ಬರಲಿವೆ ಎಂದು ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ. ‘ಈ ಗಡುವಿನಲ್ಲಿ ಯಾವುದೇ ವಿಸ್ತರಣೆಗಳಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಬಿಕ್ಕಟ್ಟು:

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಸಂದರ್ಭದಲ್ಲಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಉದ್ದೇಶವನ್ನು ಘೋಷಿಸಿದ್ದರೂ, ಎರಡೂ ದೇಶಗಳು ಮಧ್ಯಂತರ ವ್ಯಾಪಾರ ಒಪ್ಪಂದವನ್ನು ರೂಪಿಸಲು ಸಾಧ್ಯವಾಗಿಲ್ಲ. ಎರಡೂ ದೇಶಗಳ ಅಧಿಕಾರಿಗಳ ನಡುವೆ 5 ಸುತ್ತಿನ ಮಾತುಕತೆಗಳು ನಡೆದಿವೆ ಮತ್ತು ಆಗಸ್ಟ್ 25ಕ್ಕೆ 6ನೇ ಸುತ್ತಿನ ಮಾತುಕತೆ ನಡೆದಿವೆ. ವ್ಯಾಪಾರ ಒಪ್ಪಂದ ಅಂತಿಮಗೊಳ್ಳದ ಕಾರಣ ಭಾರತವು 25% ರಷ್ಟು ಸುಂಕವನ್ನು ಎದುರಿಸಬೇಕಾಗುತ್ತದೆ ಎಂದು 2 ದಿನ ಹಿಂದೆಯೇ ಟ್ರಂಪ್ ಸುಳಿವು ನೀಡಿದ್ದರು.

ತಾತ್ಕಾಲಿಕ?:

ಈ ನಡುವೆ, ಆ.1ರಿಂದ ಅಮೆರಿಕ ವಿಧಿಸಬಹುದಾದ ಯಾವುದೇ ಸುಂಕಗಳು ತಾತ್ಕಾಲಿಕವಾಗಿರಬಹುದು. ಏಕೆಂದರೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಇನ್ನೂ ಮಾತುಕತೆಗಳು ನಡೆಯುತ್ತಿವೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.

ಭಾರತದ ಮೇಲೆ ತೆರಿಗೆ ಯಾಕೆ?

ಅಮೆರಿಕ ರಪ್ತು ಮಾಡುವ ಹಲವು ಉತ್ಪನಗಳಿಗೆ ಭಾರತ ಭಾರೀ ತೆರಿಗೆ ಹೇರುತ್ತಿದೆ. ಹೀಗಾಗಿ ಅಮೆರಿಕ ಉತ್ಪನ್ನಗಳು ಭಾರತದಲ್ಲಿ ದುಬಾರಿಯಾಗಿವೆ. ಜೊತೆಗೆ ಅಮೆರಿಕ ಹಲವು ಉತ್ಪನ್ನಗಳಿಗೆ ಭಾರತ ತನ್ನ ಮಾರುಕಟ್ಟೆಯನ್ನು ತೆರೆದಿಲ್ಲ ಎಂಬುದು ಅಮೆರಿಕ ಆರೋಪ. ಇದೇ ಕಾರಣಕ್ಕೆ ಅದು ಭಾರತದ ಉತ್ಪನ್ನಗಳ ಆಮದಿಗೆ ಹೆಚ್ಚುವರಿ ಸುಂಕ ಹೇರಲು ಮುಂದಾಗಿದೆ.

ಒಪ್ಪಂದ ಜಾರಿಗೆ ಬಿಕ್ಕಟ್ಟು ಏನು?

ಭಾರತ ಮತ್ತು ಅಮೆರಿಕ ಪರಸ್ಪರ ವ್ಯಾಪಾರ ಒಪ್ಪಂದ ಸಂಬಂಧ ಹಲವು ಸುತ್ತಿನ ಮಾತುಕತೆ ನಡೆಸಿವೆ. ಆದರೆ ಅಮೆರಿಕದ ಕುಲಾಂತರಿ ವಸ್ತುಗಳು, ಕೃಷಿ ಮತ್ತು ಡೈರಿ ಕ್ಷೇತ್ರಗಳ ಸರಕುಗಳ ತನ್ನ ಮಾರುಕಟ್ಟೆ ತೆರೆಯಲು ಭಾರತ ಒಪ್ಪುತ್ತಿಲ್ಲ. ಇದು ಒಪ್ಪಂದ ಜಾರಿಗೆ ಅಡ್ಡಿಯಾಗಿದೆ. ಪರಿಣಾಮ ಹಲವು ಗಡುವು ನೀಡಿದರೂ ಒಪ್ಪಂದ ಜಾರಿ ಇದುವರೆಗೂ ಸಾಧ್ಯವಾಗಿಲ್ಲ.

ಭಾರತದ ಯಾವ ವಸ್ತುಗಳು ತುಟ್ಟಿ

ಆಟೋಮೊಬೈಲ್‌ ವಸ್ತುಗಳು ಹಾಗೂ ಬಿಡಿಭಾಗಗಳು, ಎಲೆಕ್ಟ್ರಾನಿಕ್‌ ವಸ್ತುಗಳು, ಸೌರ ಉಪಕರಣಗಳು, ಆಭರಣ, ಸಾಗರೋತ್ಪನ್ನ ವಸ್ತುಗಳು, ಜವಳಿ, ಉಡುಪುಗಳು,

ಔಷಧ, ರಾಸಾಯನಿಕ ಉತ್ಪನ್ನಗಳು, ಆಹಾರೋತ್ಪನ್ನ, ತರಕಾರಿ, ಹಣ್ಣುಗಳು, ಪಾದರಕ್ಷೆ, ಪ್ಲಾಸ್ಟಿಕ್‌, ರಬ್ಬರ್‌ ಉತ್ಪನ್ನಗಳು

ದೇಶ ಹಿತಕ್ಕೆ ಆದ್ಯತೆ: ಮೋದಿ ಸರ್ಕಾರ

ದ್ವಿಪಕ್ಷೀಯ ವ್ಯಾಪಾರದ ಕುರಿತು ಟ್ರಂಪ್‌ ಹೇಳಿಕೆ ಗಮನಿಸಿದ್ದೇವೆ. ಅದರ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿದ್ದೇವೆ. ಟ್ರಂಪ್‌ ಜತೆ ವ್ಯಾಪಾರ ಮಾತುಕತೆ ಪ್ರಗತಿಯಲ್ಲಿದೆ. ನಾವು ರೈತರು, ಉದ್ಯಮಿಗಳು, ಸಣ್ಣಕೈಗಾರಿಕೆ ಹಿತರಕ್ಷಣೆಗೆ ಆದ್ಯತೆ ನೀಡುತ್ತೇವೆ. ಬ್ರಿಟನ್‌ ಜತೆಗಿನ ಒಪ್ಪಂದದ ರೀತಿಯೇ ನಮ್ಮ ರಾಷ್ಟ್ರೀಯ ಹಿತಾಸಕ್ತಿ ಭದ್ರಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ.

- ಭಾರತ ಸರ್ಕಾರ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ