ಭಯೋತ್ಪಾದಕ ದಾಳಿಗೆ ಸಜ್ಜಾಗಿದ್ದ 3 ಡಾಕ್ಟರ್ಸ್‌ ಸೇರಿ 8 ಉಗ್ರರ ಅರೆಸ್ಟ್‌

KannadaprabhaNewsNetwork |  
Published : Nov 11, 2025, 04:15 AM ISTUpdated : Nov 11, 2025, 05:09 AM IST
Terrorist

ಸಾರಾಂಶ

 ಕೆಮಿಕಲ್ ಬಾಂಬ್ ದಾಳಿಗೆ ಸಜ್ಜಾಗಿದ್ದ ಉಗ್ರನೊಬ್ಬ ಗುಜರಾತ್‌ನಲ್ಲಿ ಸೆರೆ ಸಿಕ್ಕ ಬೆನ್ನಲ್ಲೇ ದೇಶವ್ಯಾಪಿ ಕಂಡುಕೇಳರಿಯದ ರೀತಿಯ ಭಯೋತ್ಪಾದಕ ದಾಳಿಗೆ ಸಜ್ಜಾಗಿದ್ದ ಮೂವರು ಕಾಶ್ಮೀರಿ ವೈದ್ಯರು ಸೇರಿದಂತೆ 8 ಉಗ್ರರ ಜಾಲವನ್ನು ಭೇದಿಸುವಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಯಶಸ್ವಿಯಾಗಿದ್ದಾರೆ.

 ಶ್ರೀನಗರ/ಫರೀದಾಬಾದ್‌: ಕೆಮಿಕಲ್ ಬಾಂಬ್ ದಾಳಿಗೆ ಸಜ್ಜಾಗಿದ್ದ ಉಗ್ರನೊಬ್ಬ ಗುಜರಾತ್‌ನಲ್ಲಿ ಸೆರೆ ಸಿಕ್ಕ ಬೆನ್ನಲ್ಲೇ ದೇಶವ್ಯಾಪಿ ಕಂಡುಕೇಳರಿಯದ ರೀತಿಯ ಭಯೋತ್ಪಾದಕ ದಾಳಿಗೆ ಸಜ್ಜಾಗಿದ್ದ ಮೂವರು ಕಾಶ್ಮೀರಿ ವೈದ್ಯರು ಸೇರಿದಂತೆ 8 ಉಗ್ರರ ಜಾಲವನ್ನು ಭೇದಿಸುವಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರಿಂದ 2900 ಕೆಜಿಯಷ್ಟು ಭಾರೀ ಸ್ಫೋಟಕ, ಮದ್ದು, ಗುಂಡು, ಪಿಸ್ತೂಲ್‌, ಗನ್‌, ಸೂಟ್‌ಕೇಸ್‌, ಬ್ಯಾಟರಿ, ಟೈಮರ್‌, ವಾಕಿಟಾಕಿ ವಶಪಡಿಸಿಕೊಳ್ಳಲಾಗಿದೆ. ಬಂಧಿತರೆಲ್ಲರೂ ಜೈಷ್‌ ಎ ಮೊಹಮ್ಮದ್‌ ಮತ್ತು ಅನ್ಸರ್‌ ಘಜ್ವತ್‌ ಉಲ್‌ ಹಿಂದ್‌ ಸಂಘಟನೆಗೆ ಸೇರಿದವರಾಗಿದ್ದಾರೆ.

ಪ್ರಕರಣ ಬೆಳಕಿಗೆ ಹೇಗೆ?:

ಅ.19ರಂದು ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಪೊಲೀಸರು ಮತ್ತು ಸೇನೆಗೆ ಬೆದರಿಕೆ ಹಾಕುವ ಪೋಸ್ಟರ್‌ಗಳನ್ನು ಜೈಷ್‌ ಎ ಮೊಹಮ್ಮದ್‌ ಸಂಘಟನೆ ಹೆಸರಲ್ಲಿ ಗೋಡೆಗಳಿಗೆ ಅಂಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ತನಿಖೆ ವೇಳೆ ಈ ಕೃತ್ಯದಲ್ಲಿ ವಿದ್ಯಾವಂತರು, ಉನ್ನತ ವೇತನ ಪಡೆಯುವ ವ್ಯಕ್ತಿಗಳು, ವಿದ್ಯಾರ್ಥಿಗಳು ಭಾಗಿಯಾಗಿದ್ದು ಕಂಡುಬಂದಿತ್ತು. ಜೊತೆಗೆ ಇವರೆಲ್ಲಾ ಪಾಕಿಸ್ತಾನ ಮೂಲದ ವ್ಯಕ್ತಿಗಳ ಸೂಚನೆ ಅನ್ವಯ ಕಾರ್ಯನಿರ್ವಹಣೆ ಮಾಡುತ್ತಿದ್ದದ್ದು ಕಂಡುಬಂದಿತ್ತು.

ಅಲ್ಲದೆ ಭಾರತದಲ್ಲಿ ಉಗ್ರ ಕೃತ್ಯ ನಡೆಸಲು ವ್ಯಕ್ತಿಗಳ ನೇಮಕ, ಹಣ ಸಂಗ್ರಹ, ತರಬೇತಿ, ವಿದೇಶಗಳಿಂದ ಶಸ್ತ್ರಾಸ್ತ್ರ ತರಿಸಿಕೊಂಡ ವಿಷಯ ಪತ್ತೆಯಾಗಿತ್ತು. ಅಲ್ಲದೆ ಈ ಕೃತ್ಯಗಳಿಗೆ ಪ್ರತ್ಯೇಕ ತಂತ್ರಜ್ಞಾನ ಒಳಗೊಂಡ ವ್ಯವಸ್ಥೆ ಬಳಕೆ ಮಾಡುತ್ತಿದ್ದುದ್ದು ಬೆಳಕಿಗೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ಮೊದಲಿಗೆ ಅನಂತನಾಗ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ಸ್ಥಾನಿಕ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಡಾ. ಅದೀಲ್‌ ಅಹ್ಮದ್‌ ಎಂಬಾತನನ್ನು ಬಂಧಿಸಲಾಗಿತ್ತು. ತಪಾಸಣೆ ವೇಳೆ ಆತನ ಮನೆಯ ಲಾಕರ್‌ನಲ್ಲಿ ಎಕೆ 47 ಬಂದೂಕು ಪತ್ತೆಯಾಗಿತ್ತು. ವಿಚಾರಣೆ ವೇಳೆ ಆತ ಅಲ್‌ ಫಲಾಹ್‌ ವಿವಿಯಲ್ಲಿ ಸಹಾಯಕ ಪ್ರೊಫೆಸರ್‌ ಆಗಿರುವ ಮುಜಮ್ಮಲ್‌ನ ಹೆಸರು ಬಾಯಿಬಿಟ್ಟಿದ್ದ.

ಈ ಹಿನ್ನೆಲೆಯಲ್ಲಿ ಹರ್ಯಾಣದ ದೌಜ್‌ನಲ್ಲಿ ಅಲ್‌ ಫಲಹಾ ವಿವಿಯಲ್ಲಿ ಕೆಲಸ ಮಾಡುತ್ತಿದ್ದ ಮುಜಮ್ಮಿಲ್‌ ಮತ್ತು ಆತನ ಸ್ನೇಹಿತೆ ಡಾ. ಶಹೀನ್‌ರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಸೋಮವಾರ ಬಂಧಿಸಿದ್ದರು. ಅದರ ಬೆನ್ನಲ್ಲೇ ಫರೀದಾಬಾದ್‌ನಲ್ಲಿ ಮುಜಮ್ಮಿಲ್‌ ಹೊಂದಿದ್ದ ಬಾಡಿಗೆ ಮನೆಯ ಮೇಲೆ ದಾಳಿ ನಡೆಸಿದ ವೇಳೆ ಅಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆಯಾಗಿದೆ. ಇದು ಭಾರೀ ಪ್ರಮಾಣದ ಭಯೋತ್ಪಾದನಾ ಕೃತ್ಯಕ್ಕೆ ಬಳಸಲು ಸಜ್ಜುಗೊಳಿಸಿದ್ದ ವಸ್ತುಗಳು ಎಂದು ಪೊಲೀಸರು ಶಂಕಿಸಿದ್ದಾರೆ.ಮಹಿಳಾ ವೈದ್ಯೆ ಕಾರಲ್ಲಿ ಗನ್‌:ಅಲ್‌ ಫಲಾಹ್‌ ವಿವಿಯದಲ್ಲಿ ಕೆಲಸ ಮಾಡುತ್ತಿರುವ ಮುಜಮ್ಮಿಲ್‌ನ ಸ್ನೇಹಿತ ಮಹಿಳಾ ವೈದ್ಯೆ ಡಾ. ಶಹೀನ್‌ ಕಾರಲ್ಲಿ ಗನ್‌ ಕೂಡಾ ಪತ್ತೆಯಾದ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿದೆ.

ಏನೇನು ಪತ್ತೆ?:

360 ಕೆಜಿಯಷ್ಟು ತೀವ್ರ ದಹನಶೀಲ ಪದಾರ್ಥ (ಅಮೋನಿಯಂ ನೈಟ್ರೇಟ್‌ ಶಂಕೆ), 3 ಮ್ಯಾಗಜಿನ್‌, 83 ಜೀವಂತ ಗುಂಡು, 8 ಸುತ್ತು ಗುಂಡುಗಳಿದ್ದ ಪಿಸ್ತೂಲ್‌, ಗುಂಡು ಖಾಲಿಯಾಗಿದ್ದ ಎರಡು ಕಾಟ್ರಿಡ್ಜ್‌, ಎರಡು ಹೆಚ್ಚುವರಿ ಮ್ಯಾಗಜಿನ್‌, ಸ್ಫೋಟಕ ವಸ್ತು ತುಂಬಿದ್ದ 12 ಸೂಟ್‌ಕೇಸ್‌, 20 ಟೈಮರ್‌, 4 ಬ್ಯಾಟರಿ, ರಿಮೋಟ್‌, 5 ಕೆಜಿ ಹೆವಿ ಮೆಟಲ್‌ ಮತ್ತು ಒಂದು ವಾಕಿಟಾಕಿ ಸೆಟ್‌ ಪತ್ತೆಯಾಗಿದೆ.

ಬಂಧಿತರು:

ಪ್ರಕರಣದಲ್ಲಿ ಬಂಧಿತರನ್ನು ಡಾ. ಮುಜಮ್ಮಿಲ್‌ ಶಕೀಲ್‌, ಡಾ.ಶಹೀನ್‌, ಡಾ. ಅದೀಲ್‌, ಮಸೀದಿಯೊಂದರ ಇಮಾಂ ಮೌಲ್ವಿ ಇರ್ಫಾನ್‌ ಅಹಮ್ಮದ್‌, ಆರಿಫ್‌ ನಿಸಾರ್‌ ದರ್‌, ಮಕ್ಸೂಸ್‌ ಅಹಮದ್‌ ದರ್‌, ಜಮೀರ್‌ ಅಹಮ್ಮದ್‌ ಮತ್ತು ಯಾಸಿರ್‌ ಅಲ್‌ ಅಶ್ರಫ್‌ ಎಂದು ಗುರುತಿಸಲಾಗಿದೆ. ಬಂಧಿತರಿಂದ 2900 ಕೆಜಿ ಸ್ಫೋಟಕ, ಎಕೆ 56 ರೆಫೋಲ್‌, ಚೈನೀಸ್‌ ಸ್ಟಾರ್‌ ಪಿಸ್ತೂಲ್‌, ಬೆರೆಟ್ಟಾ ಪಿಸ್ತೂಲ್‌, ಎಕೆ ಕ್ರಿನ್‌ಕೋವ್‌ ರೈಫಲ್‌, ಬಾಂಬ್‌ ತಯಾರಿಕೆಗೆ ಬೇಕಾಗುವ ವಸ್ತು, ಟೈಮರ್‌, ಬ್ಯಾಟರಿ, ವೈರ್‌, ಎಲೆಕ್ಟ್ರಾನಿಕ್‌ ಸರ್ಕ್ಯೂಟ್‌, ರಿಮೋಟ್‌ ಕಂಟ್ರೋಲ್‌ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರದಲ್ಲಿ 4 ವೈದ್ಯ ಉಗ್ರರ ಸೆರೆ

ಮೊದಲಿಗೆ ಕಾಶ್ಮೀರದ ಪುಲ್ವಾಮಾದಲ್ಲಿ ಡಾ. ಅದೀಲ್‌ ಅಹ್ಮದ್‌ನನ್ನು ಬಂಧಿಸಲಾಗಿತ್ತು. ಆತ ನೀಡಿದ ಸುಳಿವಿನ ಮೇರೆಗೆ ಇದೀಗ ಡಾ. ಮುಜಮ್ಮಿಲ್‌ ಮತ್ತು ಡಾ.ಶಹೀನ್‌ರನ್ನು ಬಂಧಿಸಲಾಗಿದೆ. ಇನ್ನು ಚೀನಾದಲ್ಲಿ ವೈದ್ಯಕೀಯ ಪಡೆದು ಬಂದು, ಭಾರತದಲ್ಲಿ ಕೆಮಿಕಲ್‌ ಬಾಂಬ್‌ ದಾಳಿಗೆ ಸಜ್ಜಾಗಿದ್ದ ಹೈದರಾಬಾದ್‌ ಮೂಲದ ಅಹ್ಮದ್‌ ಮೊಹಿಯುದ್ದಿನ್‌ ಸೈಯದ್‌ನನ್ನು ಭಾನುವಾರ ಗುಜರಾತ್‌ನಲ್ಲಿ ಬಂಧಿಸಲಾಗಿತ್ತು.

PREV
Read more Articles on

Recommended Stories

ಬೆಳ್ಳಿಗೂ ಸಿಗಲಿದೆ ಇನ್ಮುಂದೆ ಬ್ಯಾಂಕ್‌ ಸಾಲ
ಬಾಂಗ್ಲಾ ಬಳಸಿ ಭಾರತದ ಮೇಲೆ ದಾಳಿಗೆ ಉಗ್ರ ಹಫೀಜ್‌ ಸಂಚು