ನವದೆಹಲಿ: ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಭಾರತದ ಪಾಲಿಗೆ ಮಗ್ಗುಲ ಮುಳ್ಳಾಗುತ್ತಿರುವ ಬಾಂಗ್ಲಾದೇಶ ಇದೀಗ ಭಾರತ ವಿರೋಧಿ ಉಗ್ರರಿಗೂ ನೆಲೆಯಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ಬಾಂಗ್ಲಾದೇಶವನ್ನ ಬಳಸಿಕೊಂಡು ಭಾರತದ ಮೇಲೆ ದಾಳಿ ನಡೆಸಲು ಲಷ್ಕರ್-ಎ-ತೊಯ್ಬಾ ಸಂಘಟನೆಯ ಮುಖ್ಯಸ್ಥ ಹಫೀಸ್ ಸೈದ್ ಸಂಚು ರೂಪಿಸುತ್ತಿರುವ ಬಗ್ಗೆ ಸ್ವತಃ ಉಗ್ರನೊಬ್ಬ ಬಾಯಿಬಿಟ್ಟಿದ್ದಾನೆ. ಇದರ ಬೆನ್ನಲ್ಲೇ ಬಾಂಗ್ಲಾ ಗಡಿಯಲ್ಲಿ ಭಾರತ ಕಣ್ಗಾವಲು ಹೆಚ್ಚಿಸಿದೆ.
ಅ.30ರಂದು ಪಾಕಿಸ್ತಾನದ ಖೈರ್‌ಪುರ್ ತಾಮೆವಾಲಿಯಲ್ಲಿ ನಡೆದ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಲಷ್ಕರ್ ಕಮಾಂಡರ್ ಸೈಫುಲ್ಲಾ ಸೈಫ್, ‘ಭಾರತ ನಡೆಸಿದ ಆಪರೇಷನ್ ಸಿಂದೂರದ ಬಳಿಕ ನಮ್ಮ ಮುಖ್ಯಸ್ಥ ಹಫೀಜ್ ಸುಮ್ಮನೆ ಕುಳಿತಿಲ್ಲ. ಅವರು ಬಾಂಗ್ಲಾದ ಮೂಲದ ಭಾರತದ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ಶುರು ಆಗಿದ್ದು, ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡಿ ಅವರಿಗೆ ಉಗ್ರ ತರಬೇತಿ ನೀಡಲು ಹಫೀಜ್ ತಮ್ಮ ನಿಕಟ ಸಹಚರರೊಬ್ಬರನ್ನು ಬಾಂಗ್ಲಾಗೆ ಕಳಿಸಿಕೊಟ್ಟಿದ್ದಾರೆ’ ಎಂದು ಹೇಳಿದ್ದಾನೆ.
ಸೈಫ್ ಭಾರತದ ವಿರುದ್ಧ ಯುದ್ಧಕ್ಕೆ ಕರೆ ನೀಡಿದ ಈ ರ್‍ಯಾಲಿಯಲ್ಲಿ ಮಕ್ಕಳೂ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಎಂಬ ಆತಂಕಕಾರಿ ಅಂಶ ಬಹಿರಂಗವಾಗಿದೆ. ಇದರಿಂದ, ಚಿಕ್ಕಂದಿನಲ್ಲೇ ಮುಗ್ಧ ಮನಸ್ಸುಗಳನ್ನು ಭಾರತದ ವಿರುದ್ಧ ವಿಷದ ಬೀಜ ಬಿತ್ತುವ ಕೆಲಸದಲ್ಲಿ ಉಗ್ರರು ತೊಡಗಿರುವುದು ಸ್ಪಷ್ಟವಾಗಿದೆ.
ಅಮೆರಿಕ ನಮ್ಮ ಪರ:
ಇದೇ ವೇಳೆ ಸೈಫ್, ‘ಅಮೆರಿಕ ಪಾಕಿಸ್ತಾನದ ಪರವಾಗಿದೆ. ಅಂತೆಯೇ, ಈಗ ಬಾಂಗ್ಲಾ ಕೂಡ ನಮ್ಮ ಬೆಂಬಲಕ್ಕೆ ನಿಂತಿದೆ’ ಎಂದು ಹೇಳಿದ್ದಾನೆ.