ದಿಲ್ಲಿ ಕೆಂಪುಕೋಟೆ ಕಾರು ಸ್ಫೋಟಕ್ಕೆ 8 ಬಲಿ

KannadaprabhaNewsNetwork |  
Published : Nov 11, 2025, 02:00 AM ISTUpdated : Nov 11, 2025, 05:27 AM IST
Delhi

ಸಾರಾಂಶ

ಉಗ್ರರ ವಿರುದ್ಧ ಭದ್ರತಾಪಡೆಗಳು ದೇಶವ್ಯಾಪಿ ಕಾರ್‍ಯಾಚರಣೆ ನಡೆಸಿ ಕಳೆದ 2 ದಿನದಲ್ಲಿ 11 ಉಗ್ರರನ್ನು ಬಂಧಿಸಿದ ಬೆನ್ನಲ್ಲೇ, ರಾಜಧಾನಿ ನವದೆಹಲಿಯ ಕೆಂಪುಕೋಟೆಯ ಮೆಟ್ರೋ ಸ್ಟೇಷನ್‌ ಸಿಗ್ನಲ್‌ ಬಳಿ ಸೋಮವಾರ ಸಂಜೆ 6.52ರ ವೇಳೆಗೆ ಭೀಕರ ಸ್ಫೋಟವೊಂದು ಸಂಭವಿಸಿದೆ.

 ನವದೆಹಲಿ :  ಉಗ್ರರ ವಿರುದ್ಧ ಭದ್ರತಾಪಡೆಗಳು ದೇಶವ್ಯಾಪಿ ಕಾರ್‍ಯಾಚರಣೆ ನಡೆಸಿ ಕಳೆದ 2 ದಿನದಲ್ಲಿ 11 ಉಗ್ರರನ್ನು ಬಂಧಿಸಿದ ಬೆನ್ನಲ್ಲೇ, ರಾಜಧಾನಿ ನವದೆಹಲಿಯ ಕೆಂಪುಕೋಟೆಯ ಮೆಟ್ರೋ ಸ್ಟೇಷನ್‌ ಸಿಗ್ನಲ್‌ ಬಳಿ ಸೋಮವಾರ ಸಂಜೆ 6.52ರ ವೇಳೆಗೆ ಭೀಕರ ಸ್ಫೋಟವೊಂದು ಸಂಭವಿಸಿದೆ. ಸಿಗ್ನಲ್‌ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಹ್ಯುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿದ್ದು, ಅದರ ತೀವ್ರತೆಗೆ ಅಕ್ಕಪಕ್ಕದ ವಾಹನಗಳಿಗೂ ಬೆಂಕಿ ಹತ್ತಿಕೊಂಡು ಅವು ಸುಟ್ಟು ಕರಕಲಾಗಿವೆ. ಈ ದುರ್ಘಟನೆಯಲ್ಲಿ 8 ಜನರು ಸಾವನ್ನಪ್ಪಿ, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಗಾಯಗೊಂಡರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಭೀತಿ ಎದುರಾಗಿದೆ.

ಸ್ಫೋಟ ಆಕಸ್ಮಿಕವೇ ಅಥವಾ ಉಗ್ರರ ಕೃತ್ಯವೇ ಎಂಬುದು ಇನ್ನೂ ಖಚಿತಗೊಂಡಿಲ್ಲ. ಘಟನಾ ಸ್ಥಳಕ್ಕೆ ಎನ್ಎಸ್‌ಜಿ, ಎನ್‌ಐಎ, ವಿಧಿವಿಜ್ಞಾನ ತಜ್ಞರು ಧಾವಿಸಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಾರು ಮಾಲೀಕ ಸಲ್ಮಾನ್‌ ಎಂಬುವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ ನೀಡಿದ್ದಾರೆ. ಇದರ ನಡುವೆ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಅಮಿತ್‌ ಶಾರಿಂದ ಘಟನೆಯ ಕುರಿತು ಮಾಹಿತಿ ಕಲೆ ಹಾಕಿದ್ದು ಇಡೀ ಘಟನೆ ಬಗ್ಗೆ ತೀವ್ರ ನಿಗಾ ಇರಿಸಿದ್ದಾಗಿ ಹೇಳಿದ್ದು, ಅಪಾರ ಸಾವು ನೋವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

ದೆಹಲಿ ಸ್ಫೋಟ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಯುಪಿ, ಸೇರಿ ದೇಶಾದ್ಯಂತ ಭಾರೀ ಹೈಅಲರ್ಟ್‌ ಘೋಷಿಸಲಾಗಿದೆ. ಅಲ್ಲದೆ ಪ್ರಮುಖ ದೇಗುಲ ನಗರಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ಭದ್ರತಾ ಪಡೆಗಳು ಭಾನುವಾರವಷ್ಟೇ ಗುಜರಾತ್‌ನಲ್ಲಿ ಮೂವರು ಮತ್ತು ಸೋಮವಾರ ಕಾಶ್ಮೀರದಲ್ಲಿ 8 ಉಗ್ರರನ್ನು ಬಂಧಿಸಿದ್ದರು. ಅದರ ಬೆನ್ನಲ್ಲೇ ಈ ಘಟನೆ ನಡೆದಿರುವುದು, ಇದು ಉಗ್ರ ಕೃತ್ಯವಿರಬಹುದು ಎಂಬ ಶಂಕೆಗೆ ಕಾರಣವಾಗಿದೆ. ಒಂದು ವೇಳೆ ಇದು ಉಗ್ರ ಕೃತ್ಯವೆಂದು ಖಚಿತವಾದರೆ ಅದು ಈ ವರ್ಷ ದೇಶದಲ್ಲಿ ನಡೆದ 2ನೇ ಉಗ್ರ ದಾಳಿಯಾಗಲಿದೆ. ಈ ಹಿಂದೆ ಏ.22ರಂದು ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿ 26 ಜನರನ್ನು ಬಲಿ ಪಡೆದಿದ್ದರು.

ಏನಾಯ್ತು?:

ಸೋಮವಾರ ಸಂಜೆ 6.52ರ ವೇಳೆಗೆ ಕೆಂಪುಕೋಟೆಯ ಮೆಟ್ರೋ ಸ್ಟೇಷನ್‌ ಬಳಿ ಇರುವ ಸಿಗ್ನಲ್‌ ಬಳಿ ನಿಧಾನವಾಗಿ ಚಲಿಸುತ್ತಿದ್ದ ಹ್ಯುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟ ಸಂಭವಿಸಿದ ಕಾರಿನಲ್ಲಿ ಮೂವರು ಕುಳಿತಿದ್ದರು ಎಂಬುದು ಖಚಿತಪಟ್ಟಿದೆ.

ಸ್ಫೋಟದ ತೀವ್ರತೆಗೆ ಭಾರೀ ಬೆಂಕಿ ಹತ್ತಿಕೊಂಡು ಅದು ಅಕ್ಕಪಕ್ಕದ ವಾಹನಗಳಿಗೂ ಹಬ್ಬಿದ ಕಾರಣ ಅವುಗಳಿಗೂ ಬೆಂಕಿ ಹಲವು ವಾಹನಗಳು ಅಗ್ನಿಗೆ ಆಹುತಿಯಾಗಿವೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು 30 ನಿಮಿಷಗಳ ಕಾಲ ಶ್ರಮಿಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಸ್ಫೋಟದ ತೀವ್ರತೆ, ಬೆಂಕಿಯ ಕೆನ್ನಾಲಿಗೆಗೆ ಅನೇಕರು ಸಾವನ್ನಪ್ಪಿ, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಕಾರು ಮಾಲೀಕ ವಶಕ್ಕೆ:

ಸ್ಫೋಟಗೊಂಡ ಕಾರು ಹರ್ಯಾಣ ಮೂಲದ ಸಲ್ಮಾನ್‌ ಎಂಬ ವ್ಯಕ್ತಿ ಹೆಸರಲ್ಲಿ ನೋಂದಣಿಯಾಗಿದ್ದು ಪತ್ತೆಯಾಗಿದೆ. ಇದರ ಬೆನ್ನಲ್ಲೇ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾನು ಕಾರು ಮಾರಿದ್ದಾಗಿ ಸಲ್ಮಾನ್‌ ಹೇಳಿದ್ದಾನೆ. ಆತನ ಮಾತಿನ ಸತ್ಯಾಸತ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೇಹ ಚೆಲ್ಲಾಪಿಲ್ಲಿ:

ಘಟನಾ ಸ್ಥಳದಲ್ಲಿ ಸ್ಫೋಟದ ತೀವ್ರತೆ ಸಾರುವಂತ ಸುಟ್ಟು ಕರಕಲಾದ ವಾಹನಗಳು, ಮೃತ ವ್ಯಕ್ತಿಗಳ ದೇಹದ ಭಾಗಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯಗಳು ಎಲ್ಲರ ಮನಕಲಕುವಂತಿದ್ದವು. ಘಟನೆಯಲ್ಲಿ 6 ಕಾರು, 2 ಇ ರಿಕ್ಷಾ, ಒಂದು ಆಟೋ ರಿಕ್ಷಾ ಸುಟ್ಟು ಕರಕಲಾಗಿದೆ.

ಕಾರು ಮಾರಿದ್ದ ಸಲ್ಮಾನ್‌ ಅರೆಸ್ಟ್‌ 

ನವದೆಹಲಿ: ಸೋಮವಾರದ ಸ್ಫೋಟ ಘಟನೆ ಸಂಬಂಧ ಕಾರಿನ ಹಿಂದಿನ ಮಾಲೀಕ ಸಲ್ಮಾನ್‌ ಎಂಬಾತನನ್ನು ಬಂಧಿಸಲಾಗಿದೆ. ಈಗ ದೆಹಲಿ ಓಕ್ಲಾ ಪ್ರದೇಶದ ನದೀಂ ಎಂಬುವವರಿಗೆ ಈ ಕಾರು ಮಾರಾಟ ಮಾಡಿದ್ದು ಎಂದು ಬೆಳಕಿಗೆ ಬಂದ ಬೆನ್ನಲ್ಲೇ ಆತನನ್ನು ಬಂಧಿಸಲಾಗಿದೆ.

ಸ್ಪೋಟ ಸ್ಥಳದಲ್ಲಿ ಜೀವಂತ ಗುಂಡು ಪತ್ತೆ

ನವದೆಹಲಿ: ಸೋಮವಾರ ಕಾರು ಸ್ಫೋಟ ನಡೆದ ಸ್ಥಳದಲ್ಲಿ ಜೀವಂತ ಗುಂಡೊಂದು ಪತ್ತೆಯಾಗಿದೆ. ಹೀಗಾಗಿ ಘಟನೆಯಲ್ಲಿ ಉಗ್ರ ಸಂಘಟನೆಗಳ ಕೈವಾಡದ ಶಂಕೆ ಮತ್ತಷ್ಟು ದೃಢವಾಗಿದೆ. ಸ್ಫೋಟದ ಸ್ಥಳದಲ್ಲಿ ಅವಶೇಷಗಳ ನಡುವೆ ಗುಂಡು ಕಂಡುಬಂದಿದೆ.

ಈ ವರ್ಷದ 2ನೇ ಉಗ್ರ ದಾಳಿ

ಈ ಮೊದಲು ಪಹಲ್ಗಾಂನಲ್ಲಿ ಪಾಕ್‌ ಉಗ್ರರಿಂದ ದಾಳಿನವದೆಹಲಿ: ದೆಹಲಿಯಲ್ಲಿ ಸೋಮವಾರ ಸಂಭವಿಸಿದ ಉಗ್ರ ದಾಳಿಯ ಕೃತ್ಯವು ಈ ವರ್ಷ ದೇಶದಲ್ಲಿ ನಡೆದ ಎರಡನೇ ಭಯೋತ್ಪಾದಕ ಕೃತ್ಯವಾಗಿದೆ. ಇದಕ್ಕೂ ಮೊದಲು ಏ.22ರಂದು ಪಾಕಿಸ್ತಾನ ಮೂಲದ ಉಗ್ರರು ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಕರ್ನಾಟಕದ ಇಬ್ಬರು ಸೇರಿ 26 ಜನರನ್ನು ಹತ್ಯೆಗೈದಿದ್ದರು.

ದೆಹಲಿಯಲ್ಲಿ ಈ ಹಿಂದಿನ ಸ್ಫೋಟ ಪ್ರಕರಣಗಳು

2001ರ ಸಂಸತ್‌ ದಾಳಿ:2001ರ ಡಿ.13ರಂದು ನಡೆದಿದ್ದ ದಾಳಿ. ಐವರು ಬಂಧೂಕದಾರಿಗಳು ಗುಂಡು ಹಾರಿಸಿದ್ದರು. 6 ಪೊಲೀಸರು, 2 ಭದ್ರತಾ ಸಿಬ್ಬಂದಿ, ಮತ್ತೋರ್ವ ಸೇರಿ 9 ಜನ ಸಾವನ್ನಪ್ಪಿದ್ದರು. 15 ಜನರು ಗಾಯಗೊಂಡಿದ್ದರು. ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಅಪ್ಜಲ್‌ ಗುರು ಕೃತ್ಯ ನಡೆಸಿದ್ದು ಸಾಬೀತಾಗಿ 2013ರಲ್ಲಿ ಗಲ್ಲಿಗೇರಿಸಲಾಗಿತ್ತು.2005ರ ದೆಹಲಿ ದಾಳಿಗಳು2005ರ ಅ.29ರಂದು ನಡೆದಿದ್ದ ದಾಳಿ. 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 200 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು, ದೀಪಾವಳಿಗೆ ಕೆಲವೇ ದಿನಗಳಿದ್ದಾಗ ಸಂಭವಿಸಿತ್ತು. ಜನನಿಬಿಡ ಮಾರುಕಟ್ಟೆಗಳಾದ ಸರೋಜಿನಿ ನಗರ, ಪಹರ್‌ಗಂಜ್‌, ಗೋವಿಂದಪುರಿ ಸೇರಿ 3 ಸ್ಥಳಗಳು ಕೇಂದ್ರವಾಗಿತ್ತು. ನಿಂತಿದ್ದ ವಾಹನದೊಳಗೆ ಸ್ಫೋಟಕ ಇರಿಸಲಾಗಿತ್ತು. ಲಷ್ಕರ್‌ ಕೈವಾಡ ಶಂಕೆ ವ್ಯಕ್ತವಾಗಿತ್ತು.2008ರ ದೆಹಲಿ ದಾಳಿಗಳು

2008ರ ಸೆ.13ರಂದು ನಡೆದಿದ್ದ ದಾಳಿ. ಕನಿಷ್ಠ 25 ಮಂದಿ ಸಾವು, 100ಕ್ಕೂ ಹೆಚ್ಚು ಮಂದಿ ಗಾಯ. ದೆಹಲಿಯ ಕರೋಲ್ ಬಾಗ್‌ನ ಗಫರ್ ಮಾರುಕಟ್ಟೆ, ಕನ್ನಾಟ್ ಪ್ಲೇಸ್ ಮತ್ತು ಗ್ರೇಟರ್ ಕೈಲಾಶ್‌ನ ಎಂ-ಬ್ಲಾಕ್ ಮಾರುಕಟ್ಟೆಯಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ಐದು ಸಂಘಟಿತ ಸ್ಫೋಟ ನಡೆದಿತ್ತು. ಇಂಡಿಯಾ ಗೇಟ್‌ ಬಳಿಯೂ ಸಂಚಿಗೆ ಪ್ರಯತ್ನ ನಡೆಯಿತು. ಆದರೆ ಅದನ್ನು ವಿಫಲಗೊಳಿಸಲಾಯಿತು. ಇಂಡಿಯನ್‌ ಮುಜಾಹಿದ್ದೀನ್‌ ಹೊಣೆ ಹೊತ್ತಿತ್ತು.ಇಸ್ರೇಲ್ ರಾಯಭಾರ ಕಚೇರಿ ಮೇಲೆ2012ರ ಫೆ.13ರಂದು ಇಸ್ರೇಲ್‌ ರಾಯಭಾರ ಕಚೇರಿ ಮೇಲೆ ದಾಳಿ ನಡೆದಿತ್ತು. ರಾಜತಾಂತ್ರಿಕ ಅಧಿಕಾರಿಯ ಕಾರಿನಲ್ಲಿ ಬಾಂಬ್‌ ಸ್ಫೋಟಗೊಂಡಿತ್ತು. ನಾಗರಿಕರನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ರಾಯಭಾರಿ ಕಚೇರಿಯ ಸಿಬ್ಬಂದಿ ಸೇರಿ ಒಟ್ಟು ನಾಲ್ವರು ಗಾಯಗೊಂಡಿದ್ದರು,

ಮುಂಬೈ, ಯುಪಿ ಸೇರಿ ದೇಶಾದ್ಯಂತ ಹೈ ಅಲರ್ಟ್‌

ಯಾವುದೇ ಅಹಿತಕರ ಘಟನೆ ತಡೆಯಲು ಬಂದೋಬಸ್ತ್‌ದೇಗುಲ, ಮಾರುಕಟ್ಟೆ, ಬಸ್‌, ರೈಲ್ವೆ ನಿಲ್ದಾಣದಲ್ಲಿ ಕಟ್ಟೆಚ್ಚರ

ಮುಂಬೈ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಭೀಕರ ಸ್ಫೋಟ ಬೆನ್ನಲ್ಲೇ ವಾಣಿಜ್ಯ ನಗರಿ ಮುಂಬೈ, ಉತ್ತರಪ್ರದೇಶ ಸೇರಿದಂತೆ ದೇಶಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದ್ದು, ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ.ಮಹಾರಾಷ್ಟ್ರದ ಪ್ರಮುಖ ಸ್ಥಳಗಳಾದ ತಾಜ್‌ ಹೋಟೆಲ್‌, ಗೇಟ್‌ ವೇ ಆಫ್‌ ಇಂಡಿಯಾ , ಸಿದ್ಧಿ ವಿನಾಯಕ ದೇವಸ್ಥಾನ, ರೈಲು ನಿಲ್ದಾಣ ಸೇರಿದಂತೆ ಜನನಿಬಿಡ ಪ್ರವಾಸಿ ತಾಣಗಳಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗುವಂತೆ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಮತ್ತೊಂದೆಡೆ ರಾಮಮಂದಿರ, ಕಾಶಿ, ವಾರಾಣಸಿಯಂತಹ ಧಾರ್ಮಿಕ ಕೇಂದ್ರಗಳನ್ನು ಹೊಂದಿರುವ ಅಯೋಧ್ಯೆಯಲ್ಲಿಯೂ ಪೊಲೀಸರು ಕಣ್ಗಾವಲಿರಿಸಿದ್ದು, ಎಲ್ಲಾ ಜಿಲ್ಲೆಗಳಲ್ಲಿಯೂ ಕಟ್ಟೆಚ್ಚರ ವಹಿಸಿದ್ದಾರೆ.

ಇಂದು ಸಂಜೆ ದೆಹಲಿಯಲ್ಲಿ ನಡೆದ ಸ್ಫೋಟದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಸಂತ್ರಸ್ತರಿಗೆ ಅಧಿಕಾರಿಗಳು ನೆರವಾಗುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ಮತ್ತು ಇತರೆ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದೆ.

ನರೇಂದ್ರ ಮೋದಿ, ಪ್ರಧಾನಿ

PREV
Read more Articles on

Recommended Stories

ಭಯೋತ್ಪಾದಕ ದಾಳಿಗೆ ಸಜ್ಜಾಗಿದ್ದ 3 ಡಾಕ್ಟರ್ಸ್‌ ಸೇರಿ 8 ಉಗ್ರರ ಅರೆಸ್ಟ್‌
ಬೆಳ್ಳಿಗೂ ಸಿಗಲಿದೆ ಇನ್ಮುಂದೆ ಬ್ಯಾಂಕ್‌ ಸಾಲ