;Resize=(412,232))
ಪಟನಾ: ಭಾರೀ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆ ಬಿದ್ದಿದೆ. ರಾಜ್ಯದ 243 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯ ಎರಡನೇ ಹಂತ ನ.11ರಂದು ನಡೆಯಲಿದ್ದು, ನ.14ರಂದು ಫಲಿತಾಂಶ ಪ್ರಕಟವಾಗಲಿದೆ.
ನ.6ರಂದು ನಡೆದ ಮೊದಲ ಸುತ್ತಿನಲ್ಲಿ 121 ಕ್ಷೇತ್ರಗಳಲ್ಲಿ ಶೇ.65ರಷ್ಟು ಮತದಾನವಾಗಿತ್ತು. 2ನೇ ಹಂತದಲ್ಲಿ 122 ಕ್ಷೇತ್ರಗಳಿಗೆ ಮತದಾರ ನಡೆಯಲಿದ್ದು, 1302 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.
ಎರಡನೇ ಹಂತದ ಚುನಾವಣೆ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆ ಬಿದ್ದಿದ್ದು, ಅಂತಿಮ ದಿನ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.
ಈ ವಿಧಾನಸಭಾ ಚುನಾವಣಾ ಪ್ರಚಾರವು ಎಲ್ಲ ಪಕ್ಷಗಳ ಪ್ರಭಾವಿಗಳ ಅಬ್ಬರದ ಪ್ರಚಾರಕ್ಕೆ ಸಾಕ್ಷಿಯಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು 14 ಪ್ರಚಾರ, ರೋಡ್‌ಶೋಗಳನ್ನು ನಡೆಸಿದರೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಅವರು 10 ರ್‍ಯಾಲಿಗಳಲ್ಲಿ ಭಾಗಿಯಾದರು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ, ಎಂಪಿ ಸಿಎಂ ಮೋಹನ್ ಯಾದವ್ ಸಹ ಬಿಜೆಪಿಗೆ ಮತಗಳಿಸುವಲ್ಲಿ ಶ್ರಮಿಸಿದರು.
ಕಾಂಗ್ರೆಸ್ ಪರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಹಲವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಅತ್ತ ಬಿಹಾರದ ವಿಪಕ್ಷ ಆರ್‌ಜೆಡಿ ಪರವಾಗಿ ತೇಜಸ್ವಿ ಯಾದವ್ ಸಹ ಮತದಾರನ ಸೆಳೆವ ಕೆಲಸ ಮಾಡಿದರು.
ನಿತೀಶ್ ಗೈರು:
ಚುನಾವಣಾ ಪ್ರಚಾರದುದ್ದಕ್ಕೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಗೈರುಹಾಜರಿಯು ಎದ್ದು ಕಾಣುತ್ತಿತ್ತು. ಪ್ರಧಾನಿ ಮೋದಿ ಅವರ ಮೊದಲ ಪ್ರಚಾರದಲ್ಲಿ ಮತ್ತು ಒಂದೆರಡು ರೋಡ್‌ಶೋಗಳಲ್ಲಿ ಮಾತ್ರ ಭಾಗಿಯಾಗಿದ್ದರು. ಇದು ನಿತೀಶ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂಬ ಸುದ್ದಿಗೆ ಗ್ರಾಸವಾಗಿತ್ತು.