ಜೈಪುರ: ರೀಲ್ಸ್ ಶೋಕಿಗಾಗಿ ರೈಲು ಬರುವ ವೇಳೆ ವ್ಯಕ್ತಿಯೊಬ್ಬ ಹಳಿಯ ಮೇಲೆ ಮಹೀಂದ್ರಾ ಥಾರ್ ಜೀಪ್ ಓಡಿಸಲು ಹೋಗಿ ಸಿಕ್ಕಿಬಿದ್ದ ಘಟನೆ ರಾಜಸ್ಥಾನದ ಜೈಪುರದ ಬಳಿ ನಡೆದಿದೆ. ಕುಡಿದ ಮತ್ತಿನಲ್ಲಿ ವ್ಯಕ್ತಿ ಹಳಿಯ ಮೇಲೆ ಜೀಪ್ ಹತ್ತಿಸಿದ್ದಾನೆ. ಆದರೆ ಎದುರಿಗೆ ರೈಲು ಬರುತ್ತಿದ್ದಂತೆ ಆತಂಕಕ್ಕೆ ಒಳಗಾಗಿ ಹಳಿಯಿಂದ ಜೀಪ್ ಇಳಿಸಲು ಯತ್ನಿಸಿದ್ದಾನೆ. ಈ ವೇಳೆ ಅದು ಹಳಿಯೊಳಗೆ ಸಿಕ್ಕಿಬಿದ್ದಿದೆ. ಆದರೆ ಆದರೆ ಅದೃಷ್ಟವಶಾತ್ ರೈಲಿನ ಚಾಲಕ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಿ ರೈಲು ನಿಲ್ಲಿಸಿದ ಕಾರಣ ದೊಡ್ಡ ಅವಘಡ ತಪ್ಪಿದೆ.
ಇದಾದ ಬಳಿಕ ಆತ ಹಳಿಯಿಂದ ಕೆಳಗೆ ಇಳಿಸಲು ಜೀಪನ್ನು 10-20 ಮೀಟರ್ ಹಿಂದಕ್ಕೆ ಚಲಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯರು ನೆರವಾಗಿದ್ದಾರೆ. ಅದಾದ ಬಳಿಕ ಆತ ಕಾರನ್ನು ರೋಡಿಗೆ ತಂದು ನಿಲ್ಲಿಸಿ ಪರಾರಿಗೆ ಯತ್ನಿಸಿದ್ದಾನೆ. ಈ ವೇಳೆ ಕಾರು ಡಿಕ್ಕಿ ಹೊಡೆದು ಕೆಲವರಿಗೆ ಗಾಯಗಳಾಗಿವೆ. ಘಟನೆ ನಂತರ ಚಾಲಕನನ್ನು ಬಂಧಿಸಲಾಗಿದೆ.==
ಸಿಐಎಸ್‌ಎಫ್‌ನಲ್ಲಿ ಪೂರ್ಣ ಮಹಿಳಾ ಬೆಟಾಲಿಯನ್! ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್)ಯಲ್ಲಿ ಪ್ರತ್ಯೇಕ ಹಾಗೂ ಪ್ರಥಮ ಮಹಿಳಾ ಬೆಟಾಲಿಯನ್ ಸ್ಥಾಪಿಸಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ‘ಮೀಸಲು ಬೆಟಾಲಿಯನ್’ ಹೆಸರಿನ 1,025 ಮಹಿಳಾ ಸಿಬ್ಬಂದಿಯನ್ನೊಳಗೊಂಡ ಘಟಕ ಸ್ಥಾಪಿಸಲು ಕೇಂದ್ರ ಗೃಹ ಸಚಿವಾಲು ಸೋಮವಾರ ಒಪ್ಪಿಗೆ ನೀಡಿದೆ.ಈ ಕುರಿತು ಮಾಹಿತಿ ನೀಡಿರುವ ಪಡೆಯ ವಕ್ತಾರರು, ‘ಮಹಿಳೆಯರ ವಿಶೇಷ ಬೆಟಾಲಿಯನ್ ರಚನೆ, ನೇಮಕಾತಿ, ತರಬೇತಿ ಪ್ರಾರಂಭವಾಗಿದೆ. ಇವರನ್ನು ವಿಐಪಿ ಭದ್ರತೆ, ವಿಮಾನ ನಿಲ್ದಾಣ ಭದ್ರತೆ, ದೆಹಲಿ ಮೆಟ್ರೋಗಳಲ್ಲಿ, ಚುನಾವಣಾ ಸಮಯದಲ್ಲಿ ತಾತ್ಕಾಲಿಕವಾಗಿ ಹಾಗೂ ಸಂಸತ್ ಭದ್ರತೆಗೆ ಶಾಶ್ವತವಾಗಿ ನಿಯೋಜಿಸಲಾಗುತ್ತದೆ’ ಎಂದರು.ಪ್ರಸ್ತುತ ಇರುವ 12 ಬೆಟಾಲಿಯನ್‌ಗಳಲ್ಲಿ ಮಹಿಳೆ ಹಾಗೂ ಪುರುಷ ಸಿಬ್ಬಂದಿಗಳು ಒಟ್ಟಾಗಿದ್ದಾರೆ. ಒಟ್ಟಾರೆಯಾಗಿ ಸಿಐಎಸ್‌ಎಫ್‌ನಲ್ಲಿ ಶೇ.7ರಷ್ಟು (1.80 ಲಕ್ಷ) ಮಹಿಳಾ ಸಿಬ್ಬಂದಿ ಇದ್ದಾರೆ. ಈಗಾಗಲೇ ಸಿಆರ್‌ಪಿಎಫ್‌ನಲ್ಲಿ ಮಹಿಳೆಯರ 6 ಬೆಟಾಲಿಯನ್‌ಗಳಿವೆ.
==ಪನ್ನೂ ಬೆದರಿಕೆ ಬೆನ್ನಲ್ಲೇ ರಾಮ ಮಂದಿರಕ್ಕೆ ಭಾರೀ ಭದ್ರತೆಅಯೋಧ್ಯೆ: ನ.16,17ರಂದು ರಾಮ ಮಂದಿರದ ಮೇಲೆ ದಾಳಿ ನಡೆಸುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂನ್ ಬೆದರಿಕೆ ಹಾಕಿದ ಬೆನ್ನಲ್ಲೇ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಮಮಂದಿರದಲ್ಲಿ ನ.18ರಂದು ರಾಮವಿವಾಹ ನಡೆಯಲಿದ್ದು, ಸಿಎಂ ಯೋಗಿ ಆದಿತ್ಯನಾಥ್ ಭಾಗವಹಿಸುವ ಸಾಧ್ಯತೆಯಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ದೇವಾಲಯದ ಸುತ್ತಮುತ್ತ ಭಯೋತ್ಪಾದಕ ನಿಗ್ರಹ ದಳವನ್ನು ನಿಯೋಜಿಸಲಾಗಿದೆ, ಸಿಸಿಟೀವಿ, ಡ್ರೋನ್ ಕಣ್ಗಾವಲನ್ನು ಹೆಚ್ಚಿಸಲಾಗಿದೆ. ಜೊತೆಗೆ ಗುಪ್ತಚರ ದಳ, ಬಾಂಬ್ ನಿಷ್ಕ್ರೀಯ ದಳ, ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ, ಕೇಂದ್ರೀಯ ಮೀಸಲು ಪಡೆ, ಪೊಲೀಸರನ್ನು ಅಯೋಧ್ಯೆಯಾದ್ಯಂತ ನಿಯೋಜಿಸಲಾಗಿದೆ.
==ಪನ್ನು ದಾಳಿ ಬೆದರಿಕೆ: ಕೆನಡಾದ ತ್ರಿವೇಣಿ ದೇಗುಲ ಕಾರ್‍ಯಕ್ರಮ ರದ್ದು
ಒಟ್ಟಾವ: ಈ ವಾರಾಂತ್ಯದಲ್ಲಿ ಆಯೋಧ್ಯೆ ರಾಮಮಂದಿರ ಹಾಗೂ ಕೆನಡಾದಲ್ಲಿನ ಹಲವು ಹಿಂದೂ ದೇಗುಲಗಳ ಮೇಲೆ ದಾಳಿ ನಡೆಸುವುದಾಗಿ ಸಿಖ್ ಫಾರ್ ಜಸ್ಟಿಸ್ ಸಂಘಟನೆಯ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್ ಬೆದರಿಕೆ ಹಾಕಿದ ಬೆನ್ನಲ್ಲೆ ತ್ರಿವೇಣಿ ಮಂದಿರದಲ್ಲಿ ಆಯೋಜಿಸಿದ್ದ ಭಾರತೀಯ ರಾಯಭಾರ ಕಚೇರಿಯ ಕಾರ್ಯಕ್ರಮ ರದ್ದು ಮಾಡಲಾಗಿದೆ.ನ.17 ರಂದು ಟೊರೊಂಟೊದ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಪಿಂಚಣಿ ನೀಡುವ ಉದ್ದೇಶದಿಂದ ‘ದಾಖಲಾತಿ ಕಾರ್ಯಕ್ರಮ’ವನ್ನು ಈ ದೇಗುಲದ ಆವರಣದಲ್ಲಿ ಆಯೋಜಿಸಿತ್ತು. ಪ್ರಾದೇಶಿಕ ಪೊಲೀಸರು ‘ಈ ದೇಗುಲಗಳ ಬಳಿ ಹಿಂಸಾತ್ಮಕ ಪ್ರತಿಭಟನೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಕಾರ್ಯಕ್ರಮ ರದ್ದುಮಾಡಿ ಎಂದು ದೇಗುಲ ಆಡಳಿತ ಮಂಡಳಿಗೆ ಸೂಚನೆ ನೀಡಿತ್ತು.