ಆಗಸದಲ್ಲಿ ಮಾನವನ ಅತ್ಯಲ್ಪತೆ ಅರಿವಿತ್ತಿದ್ದು ಭಗವದ್ಗೀತೆ: ಸುನಿತಾ

KannadaprabhaNewsNetwork |  
Published : Jan 25, 2026, 02:00 AM IST
ಸುನೀತಾ | Kannada Prabha

ಸಾರಾಂಶ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಿಂದ ಇತ್ತೀಚೆಗೆ ನಿವೃತ್ತಿ ಪಡೆದ ಭಾರತ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್‌, ಬಾಹ್ಯಾಕಾಶದಲ್ಲಿ ಗಣೇಶ ಮತ್ತು ಭಗವದ್ಗೀತೆಯೊಂದಿಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

ನವದೆಹಲಿ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಿಂದ ಇತ್ತೀಚೆಗೆ ನಿವೃತ್ತಿ ಪಡೆದ ಭಾರತ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್‌, ಬಾಹ್ಯಾಕಾಶದಲ್ಲಿ ಗಣೇಶ ಮತ್ತು ಭಗವದ್ಗೀತೆಯೊಂದಿಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಸುನಿತಾ, ‘ನಮ್ಮ ಮನೆಯಲ್ಲಿ ಗಣೇಶನ ವಿಗ್ರಹ ಯಾವಾಗಲೂ ಇರುತ್ತದೆ. ಅವನನ್ನು ಬಾಹ್ಯಾಕಾಶಕ್ಕೂ ಕರೆದೊಯ್ದಿದ್ದೆ. ಜತೆಗೆ ನಾನು ಕೊಂಡೊಯ್ದಿದ್ದ ಭಗವದ್ಗೀತೆಯಿಂದಾಗಿ, ಆ ಮೌನಜಗತ್ತಲ್ಲಿ ನನಗೆ ಹೊಸ ದೃಷ್ಟಿಕೋನ ಸಿಕ್ಕಿತು. ಮೇಲಿಂದ ಭೂಮಿಯತ್ತ ನೋಡಿದಾಗ ಮಾನವ ಅಹಂಕಾರದ ಅತ್ಯಲ್ಪತೆಯ ಅರಿವಾಗುತ್ತದೆ. ಗೀತೆಯಿಂದಾಗಿ ನಾನು ಆ ತೂಕವಿಲ್ಲದ ಜಗತ್ತಿನಲ್ಲೂ ಸಾಧಾರಣವಾಗಿರಲು ಸಾಧ್ಯವಾಯಿತು’ ಎಂದು ಹೇಳಿದ್ದಾರೆ. 2006ರಲ್ಲಿ ಬಾಹ್ಯಾಕಾಶಕ್ಕೆ ಹೋಗಿದ್ದಾಗ ತಮ್ಮೊಂದಿಗೆ ಭಗವದ್ಗೀತೆಯ ಪುಟ್ಟ ಪ್ರತಿಯನ್ನು ತೆಗೆದುಕೊಂಡು ಹೋಗಿದ್ದ ಸುನಿತಾ, 2024ರಲ್ಲಿ ಸಣ್ಣ ಗಣೇಶನ ವಿಗ್ರಹವನ್ನು ಕೊಂಡೊಯ್ದಿದ್ದರು.

==

ಅಪಾರ್ಟ್‌ಮೆಂಟ್‌ ಮೇಲೆ ಗುಂಡಿನ ದಾಳಿ: ನಟ ಕಮಾಲ್‌ಖಾನ್‌ ಬಂಧನ

ಮುಂಬೈ: ಅಪಾರ್ಟ್‌ಮೆಂಟ್‌ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದ ಪ್ರಕರಣದಲ್ಲಿ ಬಾಲಿವುಡ್‌ ನಟ ಕಮಾಲ್‌ ರಶೀದ್‌ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ‘ಜ.18ರಂದು ಅಂಧೇರಿ ಬಳಿಯ ಓಶಿವಾರಾದ ನಳಂದಾ ಸೊಸೈಟಿಯ 2ನೇ ಮತ್ತು ನಾಲ್ಕನೇ ಮಹಡಿಯ ಮನೆಗಳ ಗುಂಡಿನ ದಾಳಿ ನಡೆದಿತ್ತು. ಬರಹಗಾರರು ಮತ್ತು ಮಾಡೆಲ್‌ಗಳನು ವಾಸವಿದ್ದ ಮನೆಯ ಮೇಲೆ ನಡೆದ ಗುಂಡಿನ ದಾಳಿ ತನಿಖೆ ವೇಳೆ, ಅಲ್ಲಿ ಸಿಕ್ಕ ಗುಂಡು ಕಮಾಲ್‌ ಖಾನ್‌ ಗನ್‌ನಿಂದ ಹಾರಿದ್ದು ಎಂದು ಸಾಬೀತಾಗಿತ್ತು. ವಿಚಾರಣೆ ವೇಳೆ ದಾಳಿ ನಡೆಸಿದ್ದನ್ನು ಖಾನ್‌ ಒಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಗುಂಡಿನ ದಾಳಿಗೆ ಕಾರಣ ತಿಳಿದುಬಂದಿಲ್ಲ.

==

30 ಟನ್‌ ತೂಕವಿರುವ ಕಬ್ಬಿಣದ ಸೇತುವೆಯೇ ರಾತ್ರೋರಾತ್ರಿ ಕಳ್ಳತನ

ಕೋರ್ಬಾ: ವಾಹನ, ಆಭರಣ ಕಳ್ಳತನ ಸಾಮಾನ್ಯ. ಆದರೆ ಛತ್ತೀಸ್‌ಗಢದಲ್ಲಿ ಕಳ್ಳರು ಒಂದು ಹೆಜ್ಜೆ ಮುಂದಕ್ಕೆ ಹೋಗಿ 40 ವರ್ಷ ಹಳೆಯ ಕಬ್ಬಿಣದ ಸೇತುವೆಯನ್ನೇ ಕದ್ದೊಯ್ದಿದ್ದಾರೆ. ಕೋರ್ಬಾ ಜಿಲ್ಲೆಯಲ್ಲಿ ಈ ಐನಾತಿ ಕಳ್ಳತನ ನಡೆದಿದೆ. 40 ವರ್ಷಗಳ ಹಿಂದೆ ಜನರು ಸುಲಲಿತವಾಗಿ ಕಾಲುವೆ ದಾಟುವ ಸಲುವಾಗಿ ಸ್ಥಳೀಯಾಡಳಿತವು 20-30 ಟನ್‌ ತೂಗುವ ಗಟ್ಟಿಮುಟ್ಟಾದ ಕಬ್ಬಿಣದ ಸೇತುವೆಯನ್ನು ಕಟ್ಟಿಸಿತ್ತು. ಶುಕ್ರವಾರ ರಾತ್ರಿವರೆಗೂ ಜನರು ಇದರ ಮೇಲೆ ಓಡಾಡಿದ್ದಾರೆ. ಮುಂಜಾನೆ ನೋಡಿದರೆ, ಸೇತುವೆಯೇ ಇಲ್ಲ. ಇದರೊಂದಿಗೆ ನೀರಿನ ಪೈಪ್‌ಲೈನ್‌ಗೆ ಬಳಸಿದ್ದ ಕಬ್ಬಿಣವೂ ಕಾಣೆ. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರು ಗ್ಯಾಸ್‌ ಕಟರ್‌ ಬಳಸಿ ಸೇತುವೆಯನ್ನು ತುಂಡರಿಸಿದ್ದು ಈ ವೇಳೆ ಗೊತ್ತಾಗಿದೆ. ಎಲ್ಲ ಗುಜರಿ ಅಂಗಡಿಗಳಿಗೂ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆ ಈವರೆಗೆ ಕಳ್ಳರ ಗುರುತು ಪತ್ತೆಯಾಗಿಲ್ಲ.

==

ಪಂಜಾಬ್‌ನಲ್ಲಿ ರೈಲ್ವೆ ಹಳಿ ಮೇಲೆ ಸ್ಫೋಟ: ವಿಧ್ವಂಸಕ ಕೃತ್ಯ

ಚಂಡೀಗಢ: ಗಣರಾಜ್ಯೋತ್ಸವ ದಿನ ಸಮೀಪಿಸುತ್ತಿರುವ ಹೊತ್ತಿನಲ್ಲಿಯೇ ಪಂಜಾಬ್‌ನ ಫತೇಘರ್‌ ಸಾಹಿಬ್‌ ಜಿಲ್ಲೆಯಲ್ಲಿ ಸರಕು ಸಾಗಣೆ ರೈಲನ್ನು ಗುರಿಯಾಗಿಸಿಕೊಂಡು ಹಳಿ ಮೇಲೆ ಸ್ಫೋಟಕವಿರಿಸಿ ಸ್ಫೋಟಿಸಲಾಗಿದೆ. ಘಟನೆಯಿಂದ ಲೋಕೋ ಪೈಲಟ್‌ ಗಾಯಗೊಂಡಿದ್ದಾರೆ. ಸಿರ್ಹಿಂದ್‌ ರೈಲು ನಿಲ್ದಾಣದಿಂದ ಶುಕ್ರವಾರ ರಾತ್ರಿ 9.50ರ ಸುಮಾರಿಗೆ ಸರಕು ಸಾಗಣೆ ರೈಲು ಕಾನ್ಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಫೋಟದ ಪರಿಣಾಮ ಸರಕು ರೈಲಿನ ಎಂಜಿನ್‌ಗೆ ಸ್ವಲ್ಪ ಹಾನಿಯಾಗಿದೆ. ಜೊತೆಗೆ ಲೋಕೋ ಪೈಲಟ್‌ ಕೆನ್ನೆಗೆ ಸಣ್ಣ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್‌ ಯಾವುದೇ ಜೀವಹಾನಿ ಅಥವಾ ಆಸ್ತಿ ನಷ್ಟ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ತನಿಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದರ ಹಿಂದೆ ವಿಧ್ವಂಸಕ ಕೃತ್ಯದ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಆ ಆಯಾಮದಲ್ಲಿಯೂ ತನಿಖೆ ಕೈಗೊಂಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಂಗವೈಕಲ್ಯ ಕೋಟಾದಡಿ ವೈದ್ಯ ಸೀಟು ಪಡೆಯಲು ಪಾದ ತುಂಡರಿಸಿಕೊಂಡ!
ತೆಲಂಗಾಣ: ಮತ್ತೆ 300 ಬೀದಿ ನಾಯಿಗಳ ಹತ್ಯೆ