ಶ್ರೀನಗರ/ಜೈಪುರ/ಗಾಂಧಿಗರ/ಅಮೃತಸರ: ಭಯೋತ್ಪಾದನೆ ವಿಷಯದಲ್ಲಿ ಮೊದಲಿನಿಂದಲೂ ಕಪಟ ನಾಟಕ ಆಡುತ್ತಿದ್ದ ಪಾಕಿಸ್ತಾನದ ಬಣ್ಣ ಮತ್ತೊಮ್ಮೆ ಬಯಲಾಗಿದೆ. ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಕಳೆದ 4 ದಿನಗಳಿಂದ ಭಾರತ ನಡೆಸಿದ ದಾಳಿಗೆ ಕಂಗೆಟ್ಟು ಕದನ ವಿರಾಮಕ್ಕೆ ಅಂಗಲಾಚಿದ್ದ ಪಾಕಿಸ್ತಾನ, ಶನಿವಾರ ಕದನ ವಿರಾಮ ಘೋಷಣೆಯ ಬಳಿಕ ಮತ್ತೆ ಭಾರತದ ಮೇಲೆ ದಾಳಿ ಆರಂಭಿಸಿದೆ.
ಅಮೆರಿಕದ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಶನಿವಾರ ಸಂಜೆ 5 ಗಂಟೆಯಿಂದ ಜಾರಿಗೆ ಬರುವಂತೆ ಕದನ ವಿರಾಮ ಘೋಷಿಸಿದ್ದವು. ಆದರೆ ಶನಿವಾರ ರಾತ್ರಿಯಾಗುತ್ತಲೇ ಕಾಶ್ಮೀರ, ಪಂಜಾಬ್, ಗುಜರಾತ್, ರಾಜಸ್ಥಾನ- ಹೀಗೆ 4 ರಾಜ್ಯಗಳಲ್ಲಿ ಪಾಕಿಸ್ತಾನ ಕದನವಿರಾಮ ಉಲ್ಲಂಘಿಸಿ ನೂರಾರು ಡ್ರೋನ್ ಹಾಗೂ ಶೆಲ್ ದಾಳಿ ನಡೆಸಿದೆ. ಗಮನಾರ್ಹವೆಂದರೆ ಶ್ರೀಕ್ಷೇತ್ರ ವೈಷ್ಣೋದೇವಿ ಮೇಲೂ ಡ್ರೋನ್ ದಾಳಿ ಯತ್ನ ನಡೆದಿದೆ. ಹೀಗಾಗಿ ಪಾಕಿಸ್ತಾನದ ಕದನವಿರಾಮ ಘೋಷಣೆ ಕೇವಲ ಕಪಟ ನಾಟಕ ಎಂದು ಸಾಬೀತಾಗಿದೆ.
ಶನಿವಾರ ಸಂಜೆ ದಿಢೀರ್ ವಿದ್ಯಮಾನವೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ‘ಭಾರತ-ಪಾಕಿಸ್ತಾನಗಳು ಕದನವಿರಾಮಕ್ಕೆ ಒಪ್ಪಿಕೊಂಡಿವೆ’ ಎಂದು ಪ್ರಕಟಿಸಿದರು. ಬಳಿಕ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಕದನವಿರಾಮ ಘೋಷಣೆ ಖಚಿತಪಡಿಸಿದರು. ಈ ನಡುವೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ, ‘ಭಾರತ ಮತ್ತು ಪಾಕಿಸ್ತಾನ ನಡುವೆ ಶನಿವಾರ 5 ಗಂಟೆಯಿಂದ ಜಾರಿಗೆ ಬರುವಂತೆ ಕದನವಿರಾಮಕ್ಕೆ ಒಪ್ಪಿಕೊಳ್ಳಲಾಗಿದೆ’ ಎಂದು ಪ್ರಕಟಿಸಿದರು. ಬಳಿಕ ಕದನವಿರಾಮ ಘೋಷಣೆ ಬಗ್ಗೆ ವಿಶ್ವವ್ಯಾಪಿ ಸ್ವಾಗತ ವ್ಯಕ್ತವಾಯಿತು. ಆದರೆ ವಾಸ್ತವವಾಗಿ ಐಎಂಎಫ್‌ನಿಂದ 85 ಸಾವಿರ ಕೋಟಿ ರು. ಸಾಲ ಪಡೆಯಲು ಪಾಕಿಸ್ತಾನ ತಾನೇ ಅಮೆರಿಕಕ್ಕೆ ಅಂಗಲಾಚಿ ಕದನವಿರಾಮಕ್ಕೆ ಒಪ್ಪಿತ್ತು ಎಂದು ನಂತರ ತಿಳಿದುಬಂದಿತ್ತು.
ರಾತ್ರಿ ಮತ್ತೆ ದಾಳಿ ಆರಂಭ:
ಕದನವಿರಾಮ ಸಾರಿದ ಬಳಿಕ ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದಂತೆಯೇ ತನ್ನದೇ ಕದನವಿರಾಮ ಘೋಷಣೆ ಉಲ್ಲಂಘಿಸಿದ ಪಾಕಿಸ್ತಾನ, ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರದ ಮೇಲೆ ಡ್ರೋನ್‌ಗಳ ಮಳೆ ಸುರಿಸಿದೆ. ಹೀಗಾಗಿ ನಗರದಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ಶ್ರೀಕ್ಷೇತ್ರ ವೈಷ್ಣೋದೇವಿ ಮೇಲೂ ಡ್ರೋನ್ ತೂರಿಬಂದಿದ್ದು, ಕ್ಷೇತ್ರದಲ್ಲಿ ಬ್ಲ್ಯಾಕ್ಔಟ್ ಮಾಡಲಾಗಿದೆ. ಭಾರತೀಯ ವಾಯು ರಕ್ಷಣಾ ಪಡೆಗಳು ಪಾಕಿಸ್ತಾನಿ ಸ್ಪೋಟಕಗಳನ್ನು ನಿಷ್ಕ್ರಿಯಗೊಳಿಸಿವೆ.
ಇದನ್ನು ಟ್ವೀಟರ್‌ನಲ್ಲಿ ಪ್ರಶ್ನಿಸಿರುವ ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ, ‘ಕದನ ವಿರಾಮಕ್ಕೆ ಈಗ ಏನಾಯಿತು? ಶ್ರೀನಗರದಾದ್ಯಂತ ಸ್ಫೋಟಗಳು ಕೇಳಿಬಂದಿವೆ. ಇದು ಕದನ ವಿರಾಮವಲ್ಲ’ ಎಂದು ಕಿಡಿಕಾರಿದರು.
ಅತ್ತ ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ‘ಕಛ್ ಜಿಲ್ಲೆಯಲ್ಲಿ ಡ್ರೋನ್‌ಗಳು ಸಹ ಕಂಡುಬಂದಿವೆ. ಈಗ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲಾಗುವುದು. ದಯವಿಟ್ಟು ಸುರಕ್ಷಿತವಾಗಿರಿ, ಭಯಪಡಬೇಡಿ’ ಎಂದು ಕೋರಿದ್ದಾರೆ.
ಭಾರತ ಸರ್ಕಾರದ ಮೂಲಗಳು ಇದಕ್ಕೆ ಪ್ರತಿಕ್ರಿಯಿಸಿ, ‘ಇಂದು ಮೊದಲು ಒಪ್ಪಿಕೊಂಡ ದ್ವಿಪಕ್ಷೀಯ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದೆ’ ಎಂದು ಹೇಳಿದೆ.
ಶೆಲ್, ಕ್ಷಿಪಣಿ ಮೊರೆತ:
ಪಾಕಿಸ್ತಾನ ಸೇನೆಯು ಒಪ್ಪಂದವನ್ನು ಉಲ್ಲಂಘಿಸಿ ಎಲ್‌ಒಸಿನಲ್ಲಿ (ಗಡಿ ನಿಯಂತ್ರಣ ರೇಖೆ) ಶ್ರೀನಗರ, ಉಧಂಪುರ, ರಾಜೌರಿ, ಅಖ್ನೂರ್ ಮತ್ತು ಪೂಂಛ್‌ನಾದ್ಯಂತ ಹಲವಾರು ಸ್ಥಳಗಳಲ್ಲಿ ಗುಂಡು ಹಾರಿಸಿದೆ. ಶ್ರೀನಗರ ಮೇಲೆ ಡ್ರೋನ್ ದಾಳಿ ಕೂಡ ನಡೆದಿದೆ. ಸ್ಫೋಟದ ಶಬ್ದ ಕೇಳಿಸಿವೆ. ಆದರೆ ರಾತ್ರಿ 9.52 ರ ಹೊತ್ತಿಗೆ ಗಡಿಯಲ್ಲಿ ಶೆಲ್ ದಾಳಿ ಮತ್ತು ಶ್ರೀನಗರದಲ್ಲಿ ಸ್ಫೋಟಗಳು ನಿಂತಿವೆ.
ರಾತ್ರಿ 9 ಗಂಟೆ ಸುಮಾರಿಗೆ, ಜಮ್ಮು-ಕಾಶ್ಮೀರದ ಕಠುವಾ, ಕಾರ್ಗಿಲ್, ರಿಯಾಸಿ, ಬಾರಾಮುಲ್ಲಾ, ಶ್ರೀನಗರ, ಉಧಂಪುರ ಪಂಜಾಬ್‌ನ ಫಿರೋಜ್‌ಪುರ ಮತ್ತು ಪಠಾಣ್‌ಕೋಟ್‌ನಲ್ಲಿ ವಿದ್ಯುತ್ ಕಡಿತಗೊಂಡಿದೆ. ಈ ಹಲವಾರು ನಗರಗಳಲ್ಲಿ ಸೈರನ್‌ಗಳು ಮೊಳಗಿದವು. .ಗುಜರಾತ್‌ನ ಕಛ್ ಜಿಲ್ಲೆಯ ಹರಾಮಿ ನಲಾ ಮತ್ತು ಜಖೌ ಬಳಿ 6 ಡ್ರೋನ್‌ಗಳು ಮತ್ತು ಖಾವ್ಡಾ ಬಳಿ ಇನ್ನೂ 3 ಡ್ರೋನ್‌ಗಳು ಕಂಡುಬಂದಿವೆ. ಕಛ್‌ನಾದ್ಯಂತ ಸಂಪೂರ್ಣ ಬ್ಲ್ಯಾಕೌಟ್ ಘೋಷಿಸಲಾಗಿದೆ.
ಭುಜ್‌ನಲ್ಲಿ ಸೈರನ್‌ಗಳು ಮೊಳಗಿವೆ.
ಪಂಜಾಬ್‌ನ ಮೋಗಾದಲ್ಲಿಯೂ ಸಂಪೂರ್ಣ ಬ್ಲ್ಯಾಕೌಟ್ ಜಾರಿಗೊಳಿಸಲಾಗಿದೆ. ರಾಜಸ್ಥಾನದ ಜೈಸಲ್ಮೇರ್, ಬಿಕಾನೇರ್, ಹನುಮಾನ್‌ಗಢ ಮತ್ತು ಜೋಧ್‌ಪುರ ಸೇರಿದಂತೆ ಹಲವಾರು ಗಡಿ ಜಿಲ್ಲೆಗಳಿಂದ ಬ್ಲ್ಯಾಕೌಟ್ ವರದಿಯಾಗಿದೆ.
ಟ್ರಂಪ್ ಘೋಷಿಸಿದ್ದ ಕದನವಿರಾಮಕ್ಕೆ ಬೆಲೆಯೇ ಇಲ್ಲ
ಟ್ರಂಪ್‌ಗೂ ಪಾಕಿಸ್ತಾನ ಮೋಸಭಾರತ-ಪಾಕ್ ನಡುವೆ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಕದನಕ್ಕೆ ವಿರಾಮ ಘೋಷಿಸಲು ಭಾರತ -ಪಾಕಿಸ್ತಾನ ಒಪ್ಪಿಕೊಂಡಿದೆ ಎಂದು ಶನಿವಾರ ಸಂಜೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದರು. ‘ಅಮೆರಿಕದ ಮಧ್ಯಸ್ಥಿಕೆಯಲ್ಲಿ ಶುಕ್ರವಾರ ರಾತ್ರಿಯಿಡೀ ನಡೆದ ಮಾತುಕತೆಯ ಬಳಿಕ ಭಾರತ ಮತ್ತು ಪಾಕಿಸ್ತಾನ ಸಂಪೂರ್ಣ ಮತ್ತು ತಕ್ಷಣದ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಕೊಂಡಿವೆ. ಇದಕ್ಕಾಗಿ ಎರಡೂ ದೇಶಗಳಿಗಾಗಿ ಅಭಿನಂದನೆಗಳು’ ಎಂದಿದ್ದರು. ಆದರೆ ಶನಿವಾರ ರಾತ್ರಿ ಮತ್ತೆ ಭಾರತದ ಮೇಲೆ ದಾಳಿ ಆರಂಭಿಸುವ ಬಳಿಕ ಪಾಕ್ ಟ್ರಂಪ್‌ಗೆ ಪಾಕಿಸ್ತಾನ ಮೋಸ ಎದುರಿಗಿದೆ.
ಕದನ ವಿರಾಮ ಕೋರಿ ನಿನ್ನೆ ಕರೆ ಮಾಡಿದ್ದ ಪಾಕ್ ಸೇನೆಶಾಂತಿ ಮಂತ್ರ ಜಪಿಸಿ ಯುದ್ಧಕದನ ವಿರಾಮದ ಬಗ್ಗೆ ಶನಿವಾರ ಮಧ್ಯಾಹ್ನ ಪಾಕಿಸ್ತಾನ ಭಾರತದ ಮುಂದೆ ಪ್ರಸ್ತಾಪ ಇಟ್ಟಿತ್ತು. ಪಾಕಿಸ್ತಾನದ ಸೇನಾ ಕಾರ್ಯಾಚರಣೆ ಮಹಾನಿರ್ದೇಶಕರು (ಡಿಜಿಎಂಒ) ಶನಿವಾರ ಮಧ್ಯಾಹ್ನ 3:35 ಕ್ಕೆ ಭಾರತದ ಡಿಜಿಎಂಒಗೆ ಕರೆ ಮಾಡಿದ್ದರು. ಇದಕ್ಕೆ ಭಾರತದ ಡಿಜಿಎಂಒ ಕೂಡಾ ಒಪ್ಪಿದ್ದರು. ಅದರ ಅನ್ವಯ ಭಾರತೀಯ ಕಾಲಮಾನ ಶನಿವಾರ ಸಂಜೆ 5ರಿಂದ ಜಾರಿಗೆ ಬರುವಂತೆ ಭೂಮಿ, ಗಾಳಿ ಮತ್ತು ಸಮುದ್ರದಲ್ಲಿ ಎಲ್ಲಾ ರೀತಿಯ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಅವರ ನಡುವೆ ಒಪ್ಪಂದವನ್ನು ಘೋಷಿಸಲಾಗಿತ್ತು. ಜೊತೆಗೆ ಮೇ 12 ರಂದು ಮತ್ತೆ ಎರಡೂ ದೇಶಗಳ ಡಿಜಿಎಂಒ ಹಂತದ ಮಾತುಕತೆಗೆ ನಿರ್ಧರಿಸಲಾಗಿತ್ತು.