ಭಾರತೀಯರ ಜೀವನ ಪಯಣದ ಅವಿಭಾಜ್ಯ ಅಂಗ ಸಂವಿಧಾನ

Published : Nov 26, 2026, 07:03 AM IST
Narendra Modi

ಸಾರಾಂಶ

ಸಂವಿಧಾನವನ್ನು ಎತ್ತಿಹಿಡಿಯುವ ಜವಾಬ್ದಾರಿ ಹೊತ್ತವರೇ ಅದನ್ನು ದುರ್ಬಲಗೊಳಿಸಲು ಮುಂದಾದ ಸಂದರ್ಭಗಳು ನಮ್ಮ ಇತಿಹಾಸದಲ್ಲಿವೆ. ವಿಪರ್ಯಾಸವೆಂದರೆ, ಐದು ದಶಕಗಳ ಕಾಲ ಭಾರತವನ್ನು ಆಳಲು ಅವಕಾಶ ಪಡೆದವರೇ ಈ ಕೃತ್ಯ ಎಸಗಿದ್ದಾರೆ.

-ನರೇಂದ್ರ ಮೋದಿ, ಭಾರತದ ಪ್ರಧಾನಮಂತ್ರಿ

‘ಸಂವಿಧಾನ ರಚನಾ ಸಭೆ’ಯು 1949ರ ನವೆಂಬರ್ 26ರಂದು ನಮ್ಮ ಸಂವಿಧಾನ ಅಂಗೀಕರಿಸಿತು. ಇಂದು ನಾವು ಡಾ। ರಾಜೇಂದ್ರ ಪ್ರಸಾದ್, ಡಾ। ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನ ರಚನಾ ಸಭೆಯ ಪ್ರತಿಯೊಬ್ಬ ಸದಸ್ಯರನ್ನು ಸ್ಮರಿಸುತ್ತೇವೆ. ಆಧುನಿಕ ಸಂವಿಧಾನವನ್ನು ರಚಿಸುವಾಗ ಭಾರತದ ಶ್ರೀಮಂತ ಪರಂಪರೆ ಮತ್ತು ನಾಗರಿಕತೆಯ ವಿವೇಕದಿಂದ ವ್ಯಾಪಕವಾಗಿ ಪ್ರೇರಣೆ ಪಡೆದಿರುವುದರಲ್ಲಿ ಸಂವಿಧಾನ ಶಿಲ್ಪಿಗಳ ಶ್ರೇಷ್ಠತೆ ಅಡಗಿದೆ.

ಅನೇಕ ನಂಬಿಕೆಗಳು, ಭಾಷೆಗಳು, ಆಚಾರ-ವಿಚಾರಗಳು ಮತ್ತು ಚಿಂತನಾ ಧಾರೆಗಳನ್ನು ಹೊಂದಿರುವ ಭಾರತದಂತಹ ವೈವಿಧ್ಯಮಯ ರಾಷ್ಟ್ರಕ್ಕೆ, ಸಂವಿಧಾನವು ಸಂಸತ್ತು ಮತ್ತು ನ್ಯಾಯಾಲಯಗಳ ಆವರಣವನ್ನು ಮೀರಿ ಪ್ರತಿಧ್ವನಿಸುವುದು ಅತ್ಯಗತ್ಯ. ನಮ್ಮ ಜನರು, ವಿಶೇಷವಾಗಿ ನಮ್ಮ ಯುವಜನರ ಸಾಮೂಹಿಕ ಪ್ರಜ್ಞೆಯೊಂದಿಗೆ ಸಂವಿಧಾನದ ಸಂಪರ್ಕವನ್ನು ಗಾಢವಾಗಿಸುವುದು ಮತ್ತು ಭಾರತದ ಉಜ್ವಲ ಭವಿಷ್ಯಕ್ಕೆ ಅಗತ್ಯವಾದ ಏಕತೆಯ ಭಾವನೆಯನ್ನು ಬಲಪಡಿಸುವುದು ನಮ್ಮ ಪ್ರಯತ್ನವಾಗಿದೆ. ಅದಕ್ಕಾಗಿಯೇ ಒಂದು ದಶಕಕ್ಕೂ ಹೆಚ್ಚು ಕಾಲದ ಹಿಂದೆ ನಮ್ಮ ಸರ್ಕಾರವು ನವೆಂಬರ್ 26 ಅನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸಲು ನಿರ್ಧರಿಸಿತು.

ಸಂವಿಧಾನ ನಮ್ಮ ಅವಿಭಾಜ್ಯ ಅಂಗ:

ನನ್ನನ್ನು ಒಳಗೊಂಡಂತೆ ಕೋಟ್ಯಂತರ ಭಾರತೀಯರಿಗೆ, ಭಾರತದ ಸಂವಿಧಾನವು ನಮ್ಮ ಜೀವನ ಪಯಣದ ಅವಿಭಾಜ್ಯ ಅಂಗವಾಗಿದೆ. ನನ್ನ ಬಾಲ್ಯವನ್ನು, ನಾನು ಬೆಳೆದ ಸಾಮಾನ್ಯ ಪರಿಸ್ಥಿತಿಗಳನ್ನು ಮತ್ತು ದೈನಂದಿನ ಜೀವನದ ಭಾಗವಾಗಿದ್ದ ಹೋರಾಟಗಳನ್ನು ಹಿಂತಿರುಗಿ ನೋಡಿದಾಗಲೆಲ್ಲಾ, ನಮ್ಮ ಸಂವಿಧಾನದ ಬಗ್ಗೆ ನನ್ನಲ್ಲಿ ಅಪಾರ ಕೃತಜ್ಞತೆಯ ಭಾವ ಮೂಡುತ್ತದೆ. ಯಾವುದೇ ವಿಶೇಷ ಸವಲತ್ತುಗಳಿಲ್ಲದ ಅಥವಾ ಹುಟ್ಟಿನಿಂದಲೇ ನಾನಾ ಅನುಕೂಲಗಳನ್ನು ಹೊಂದಿರದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಮಗುವಿಗೆ, ಒಂದು ದಿನ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ವಹಿಸಲು ಸಾಧ್ಯವಾಗಿರುವುದು ನಮ್ಮ ಸಂವಿಧಾನದ ಅಸಾಧಾರಣ ಶಕ್ತಿಗೆ ಸಾಕ್ಷಿಯಾಗಿದೆ. ಒಬ್ಬ ವ್ಯಕ್ತಿಯ ಹುಟ್ಟಿನ ಪರಿಸ್ಥಿತಿಗಳು ಆತನ ಭವಿಷ್ಯದ ಮಿತಿಗಳನ್ನು ನಿರ್ಧರಿಸುವುದಿಲ್ಲ ಎಂಬುದು ನಮ್ಮ ಸಂವಿಧಾನದಿಂದಲೇ ಸಾಧ್ಯವಾಗಿದೆ.

ನಮ್ಮ ಸಂವಿಧಾನವನ್ನು ಬಲಪಡಿಸುವ ಮೂಲಕ ಈ ಕೃತಜ್ಞತೆಯ ಋಣವನ್ನು ತೀರಿಸಲು ನಾವು ನಮ್ಮದೇ ಆದ ವಿನಮ್ರ ರೀತಿಯಲ್ಲಿ ಪ್ರಯತ್ನಿಸಿದ್ದೇವೆ.

ಖ್ಯಾತ ಸಂವಿಧಾನ ತಜ್ಞ ಗ್ರಾನ್‌ವಿಲ್ ಆಸ್ಟಿನ್ ಅವರು ನಮ್ಮ ಸಂವಿಧಾನವನ್ನು ‘ಮೊದಲನೆಯದಾಗಿ ಮತ್ತು ಪ್ರಮುಖವಾಗಿ ಒಂದು ಸಾಮಾಜಿಕ ದಾಖಲೆ’ ಎಂದು ಬಣ್ಣಿಸಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಹುಡುಕಾಟವು ನಮ್ಮ ಸಂವಿಧಾನದ ಎಳೆಎಳೆಯಲ್ಲೂ ಹಾಸುಹೊಕ್ಕಾಗಿದೆ. ಹೀಗಿರುವಾಗ, ನಮ್ಮ ಸಂವಿಧಾನ ಶಿಲ್ಪಿಗಳ ಈ ಪವಿತ್ರ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರಮಿಸುವುದಕ್ಕಿಂತ ಹೆಚ್ಚಿನ ತೃಪ್ತಿ ಬೇರೆ ಏನಿರಲು ಸಾಧ್ಯ?

ಸುಮಾರು 50 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ ಎಂದು ಇತ್ತೀಚಿನ ‘ವಿಶ್ವಬ್ಯಾಂಕ್’ ವರದಿಯು ಪ್ರಸ್ತಾಪಿಸಿದೆ. ತಲೆಮಾರುಗಳ ವಂಚನೆಯಿಂದ ಮುಕ್ತರಾಗಿ, ಕೋಟ್ಯಂತರ ಪೋಷಕರು ಈಗ ತಮ್ಮ ಮಕ್ಕಳ ಉತ್ತಮ ಭವಿಷ್ಯದ ಕನಸು ಕಾಣಬಹುದಾಗಿದೆ.

‘ಪಿಎಂ ಆವಾಸ್ ಯೋಜನೆ’ಯು ಒಂದು ಕುಟುಂಬವನ್ನು ಹುಲ್ಲಿನ ಚಾವಣಿಯಿಂದ ಶಾಶ್ವತ ಮನೆಗೆ ಸ್ಥಳಾಂತರಿಸುವುದನ್ನು ಖಚಿತಪಡಿಸಿದಾಗ, ಜೀವನದಲ್ಲಿ ಘನತೆಯನ್ನು ಒದಗಿಸುವ ಸಾಂವಿಧಾನಿಕ ಭರವಸೆಗೆ ಅರ್ಥ ಬರುತ್ತದೆ.

‘ಉಜ್ವಲ ಯೋಜನೆ’ಯು ತಾಯಿಯೊಬ್ಬಳನ್ನು ಹೊಗೆ ತುಂಬಿದ ಅಡುಗೆಮನೆಯ ಕಷ್ಟಗಳಿಂದ ಮುಕ್ತಗೊಳಿಸಿದಾಗ, ನಾವು ಸಮಾನತೆ ಮತ್ತು ಯೋಗಕ್ಷೇಮದ ಆದರ್ಶಗಳನ್ನು ಮುನ್ನಡೆಸುತ್ತೇವೆ.

‘ಆಯುಷ್ಮಾನ್ ಭಾರತ’ ಅಭಿಯಾನವು ಬಡ ಕುಟುಂಬಕ್ಕೆ ಸಾಲದ ಭಯವಿಲ್ಲದೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯಲು ಅನುವು ಮಾಡಿಕೊಟ್ಟಾಗ, ಸಾಮಾಜಿಕ ನ್ಯಾಯವು ಜೀವಂತ ವಾಸ್ತವವಾಗುತ್ತದೆ.

‘ಮುದ್ರಾ’ ಮತ್ತು ‘ಪಿಎಂ-ಸ್ವನಿಧಿ’ ಸಣ್ಣ ಉದ್ಯಮಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ಭದ್ರತೆಯಿಲ್ಲದ ಸಾಲವನ್ನು ಒದಗಿಸಿದಾಗ, ಅಲ್ಲಿ ಆರ್ಥಿಕ ನ್ಯಾಯವು ವ್ಯಕ್ತವಾಗುತ್ತದೆ.

ಡಿಜಿಟಲ್ ತಂತ್ರಜ್ಞಾನ ಮತ್ತು ‘ಯುಪಿಐ’ನಂತಹ ವೇದಿಕೆಗಳು ಎಲ್ಲಾ ಅಂತರಗಳನ್ನು ಮೀರಿ, ಒಂದು ಕಾಲದಲ್ಲಿ ಕೆಲವೇ ಕೆಲವು ಸವಲತ್ತುಳ್ಳವರಿಗೆ ಮಾತ್ರ ಲಭ್ಯವಿದ್ದ ಅವಕಾಶಗಳನ್ನು ಪ್ರತಿಯೊಬ್ಬ ನಾಗರಿಕನ ಕೈಗೆಟಕುವಂತೆ ಮಾಡಿದಾಗ, ನಾವು ಎಲ್ಲರನ್ನೂ ಒಳಗೊಳ್ಳುವಿಕೆಯ ಸಾಂವಿಧಾನಿಕ ಆದರ್ಶವನ್ನು ಮುನ್ನಡೆಸುತ್ತೇವೆ.

ದೇಶದ ಅಭಿವೃದ್ಧಿಗಾಗಿ ತಿದ್ದುಪಡಿ:

ಈ ಸಾಂವಿಧಾನಿಕ ದೃಷ್ಟಿಕೋನದ ಇನ್ನೂ ಅನೇಕ ಅಭಿವ್ಯಕ್ತಿಗಳಿವೆ. ನಾವು ಜಾರಿಗೆ ತಂದ ತಿದ್ದುಪಡಿಗಳ ಪಟ್ಟಿಯನ್ನು ಇದೇ ದೃಷ್ಟಿಕೋನದಲ್ಲಿ ನೋಡಬಹುದು. 101ನೇ ತಿದ್ದುಪಡಿಯು ಬಹುನಿರೀಕ್ಷಿತ ಸುಧಾರಣೆಯಾದ ‘ಜಿಎಸ್‌ಟಿ’ಯನ್ನು ಜಾರಿಗೆ ತಂದಿತು. 102ನೇ ತಿದ್ದುಪಡಿಯು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡಿತು, ಇದು ಸಮಾಜದ ತುಳಿತಕ್ಕೊಳಗಾದ ವರ್ಗಗಳ ದೀರ್ಘಕಾಲದ ಕನಸನ್ನು ನನಸಾಗಿಸಿತು.

103ನೇ ತಿದ್ದುಪಡಿಯು ವ್ಯಾಪಕ ಸಾಮಾಜಿಕ ಸ್ವೀಕಾರವನ್ನು ಪಡೆಯಿತು. ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್‌) ಮೀಸಲು ಕಲ್ಪಿಸುವ ಮೂಲಕ, ಅಸ್ತಿತ್ವದಲ್ಲಿರುವ ಮೀಸಲು ಚೌಕಟ್ಟಿನ ಹೊರಗಿರುವ ಸಮುದಾಯಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬಹುಕಾಲದ ಆಕಾಂಕ್ಷೆಗಳನ್ನು ಇದು ಈಡೇರಿಸಿತು.

1950ರ ನಂತರ ಇದೇ ಮೊದಲ ಬಾರಿಗೆ, ನಮ್ಮ ಸಂವಿಧಾನದ ಆವೃತ್ತಿಯು ಎಂಟನೇ ಅನುಸೂಚಿಯ ಎಲ್ಲಾ 22 ಭಾಷೆಗಳಲ್ಲಿ ಲಭ್ಯವಿದೆ. ಇದು ನಮ್ಮ ಸಂವಿಧಾನವನ್ನು ಜನರಿಗೆ ಇನ್ನಷ್ಟು ಹತ್ತಿರವಾಗಿಸಿದೆ.

1950ರಲ್ಲಿ ನಮ್ಮ ಸಂವಿಧಾನವು ಜಾರಿಗೆ ಬಂದ ನಂತರವೂ, ನಾವು 1860ರ ದಶಕದ ವಸಾಹತುಶಾಹಿ ದಂಡ ಸಂಹಿತೆಯಿಂದಲೇ ಆಳಲ್ಪಡುತ್ತಿದ್ದೆವು. ‘ಭಾರತೀಯ ನ್ಯಾಯ ಸಂಹಿತೆ’ಯ ಮೂಲಕ, ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಯನ್ನು ತರಲು ನಾವು ಪ್ರಯತ್ನಿಸಿದ್ದೇವೆ; ವಸಾಹತುಶಾಹಿ ಕಾಲದ ‘ದಂಡ’ (ಶಿಕ್ಷೆ) ಕೇಂದ್ರಿತ ವ್ಯವಸ್ಥೆಯಿಂದ ನಾಗರಿಕ ಕೇಂದ್ರಿತ ‘ನ್ಯಾಯ’ದ ಅನ್ವೇಷಣೆಯತ್ತ ಸಾಗಿದ್ದೇವೆ.

ಕಳೆದ ದಶಕದಲ್ಲಿ, ನಾವು ‘ಕರ್ತವ್ಯ’ ಅಥವಾ ನಾಗರಿಕರ ಜವಾಬ್ದಾರಿಗಳಿಗೆ ವಿಶೇಷ ಒತ್ತು ನೀಡಿದ್ದೇವೆ. ನಮ್ಮ ನಾಗರಿಕತೆಯು ಸಮಾಜದ ಪ್ರತಿಯೊಂದು ಪಾತ್ರದೊಂದಿಗೆ ಬರುವ ಜವಾಬ್ದಾರಿಗಳಿಗೆ ಸದಾ ಮಹತ್ವ ನೀಡಿದೆ. ‘ಸ್ವಚ್ಛ ಭಾರತ’ದಿಂದ ಹಿಡಿದು ಜಲ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಯವರೆಗೆ ಹಲವಾರು ಜನಾಂದೋಲನಗಳಲ್ಲಿ ಕರ್ತವ್ಯದ ಭಾವನೆಯು ವ್ಯಕ್ತವಾಗಿದೆ.

ಆದಾಗ್ಯೂ, ನಾನು ಹಂಚಿಕೊಳ್ಳಲೇಬೇಕಾದ ಇನ್ನೊಂದು ವಾಸ್ತವವಿದೆ. ಸಂವಿಧಾನವನ್ನು ಎತ್ತಿಹಿಡಿಯುವ ಜವಾಬ್ದಾರಿ ಹೊತ್ತವರೇ ಅದನ್ನು ದುರ್ಬಲಗೊಳಿಸಲು ಮುಂದಾದ ಸಂದರ್ಭಗಳು ನಮ್ಮ ಇತಿಹಾಸದಲ್ಲಿವೆ. ವಿಪರ್ಯಾಸವೆಂದರೆ, ಐದು ದಶಕಗಳ ಕಾಲ ಭಾರತವನ್ನು ಆಳಲು ಅವಕಾಶ ಪಡೆದವರೇ ಈ ಕೃತ್ಯ ಎಸಗಿದ್ದಾರೆ.

ಸಂವಿಧಾನದ ದುರ್ಬಳಕೆಯ ಅತೀರೇಕ:

1951ರ ಮೊದಲ ಸಂವಿಧಾನ ತಿದ್ದುಪಡಿಗೆ ಈ ವರ್ಷ 75 ವರ್ಷಗಳು ತುಂಬುತ್ತಿವೆ. ಅಂದು ಜನರಿಂದ ನೇರವಾಗಿ ಚುನಾಯಿತವಾಗದ ಸರ್ಕಾರವು ತಾತ್ಕಾಲಿಕ ಸಂಸತ್ತಿನಲ್ಲಿ ತನ್ನ ಬಹುಮತವನ್ನು ಬಳಸಿಕೊಂಡು ಮೂಲಭೂತ ಸ್ವಾತಂತ್ರ್ಯಗಳನ್ನು ನಿರ್ಬಂಧಿಸಿತು. ಭಾರತದ ಮೊದಲ ಸಾರ್ವತ್ರಿಕ ಚುನಾವಣೆಗೆ ಕೇವಲ ತಿಂಗಳುಗಳ ಮೊದಲು ಇದನ್ನು ತಂದಿರುವುದು, ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ಮತ್ತು ಸಾರ್ವಜನಿಕ ವಿರೋಧವನ್ನು ಹತ್ತಿಕ್ಕುವ ಉದ್ದೇಶವನ್ನು ಹೊಂದಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ.

ತುರ್ತು ಪರಿಸ್ಥಿತಿಯ ಉತ್ತುಂಗದಲ್ಲಿ ತರಲಾದ 42ನೇ ತಿದ್ದುಪಡಿಗೂ ಈಗ 50 ವರ್ಷಗಳಾಗಿವೆ. ಇದು ನ್ಯಾಯಾಂಗ ಪರಿಶೀಲನೆಯನ್ನು ಮೊಟಕುಗೊಳಿಸಿತು ಮತ್ತು ಸಾಂಸ್ಥಿಕ ಅಧಿಕಾರಗಳ ಸಮತೋಲನವನ್ನು ಮೂಲಭೂತವಾಗಿ ಬದಲಾಯಿಸಿತು. ಅಧಿಕಾರದ ದಾಹವಿರುವ ಮತ್ತು ಸಂವಿಧಾನ ವಿರೋಧಿ ನಾಯಕತ್ವವು ಏನು ಮಾಡಬಹುದು ಎಂಬುದನ್ನು ತಿಳಿಯಲು 38ನೇ ಮತ್ತು 39ನೇ ತಿದ್ದುಪಡಿಗಳನ್ನು ಅಧ್ಯಯನ ಮಾಡುವಂತೆ ನಾನು ಯುವಜನರನ್ನು ಒತ್ತಾಯಿಸುತ್ತೇನೆ.

ಚುನಾಯಿತ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಲು 356ನೇ ವಿಧಿಯನ್ನು ಪದೇಪದೇ ದುರುಪಯೋಗ ಪಡಿಸಿಕೊಂಡಿರುವುದು ಮತ್ತೊಂದು ಕಳವಳಕಾರಿ ಸಂಗತಿಯಾಗಿದೆ. ಒಂದು ಪಕ್ಷವು ಸುಮಾರು ನೂರು ಬಾರಿ 356ನೇ ವಿಧಿಯನ್ನು ಹೇರಿದ ಕುಖ್ಯಾತ ದಾಖಲೆಯನ್ನು ಹೊಂದಿದೆ ಮತ್ತು ಒಬ್ಬ ಮಾಜಿ ಪ್ರಧಾನಮಂತ್ರಿ ಈ ಕ್ಷೇತ್ರದಲ್ಲಿ ಅರ್ಧ ಶತಕವನ್ನೇ ಗಳಿಸಿದ್ದಾರೆ.

ನಮ್ಮ ಸಂವಿಧಾನ ಶಿಲ್ಪಿಗಳು ಭಾರತದಾದ್ಯಂತ ಸಂವಿಧಾನವು ಅಕ್ಷರಶಃವಾಗಿ ಮತ್ತು ಅದರ ಆಶಯಕ್ಕೆ ತಕ್ಕಂತೆ ಜಾರಿಯಾಗಬೇಕೆಂದು ಆಶಿಸಿದ್ದರು. ಆದರೆ, 70 ವರ್ಷಗಳಿಗೂ ಹೆಚ್ಚು ಕಾಲ 370 ಮತ್ತು 35ಎ ವಿಧಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಪೂರ್ಣ ಸಂವಿಧಾನವನ್ನು ಜಾರಿಗೆ ತರಲು ಅವಕಾಶ ನೀಡಲಿಲ್ಲ, ಆ ಮೂಲಕ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳು ಮತ್ತು ಮಹಿಳೆಯರ ಹಕ್ಕುಗಳನ್ನು ತುಳಿಯಲಾಗಿತ್ತು. 2019ರಲ್ಲಷ್ಟೇ ಈ ಐತಿಹಾಸಿಕ ತಪ್ಪನ್ನು ಸರಿಪಡಿಸಲಾಯಿತು.

ದಶಕಗಳಿಂದ, ಭಾರತದ ಹಲವಾರು ಭಾಗಗಳಲ್ಲಿ, ವಿಶೇಷವಾಗಿ ಬುಡಕಟ್ಟು ಪ್ರದೇಶಗಳಲ್ಲಿ, ನಕ್ಸಲರು ಬಂದೂಕಿನ ಬಲವನ್ನು ಬಳಸಿ ಅತ್ಯಂತ ಬಡ ಜನರಿಗೆ ನಮ್ಮ ಸಂವಿಧಾನವು ಖಾತರಿಪಡಿಸಿದ ಹಕ್ಕುಗಳನ್ನು ನಿರಾಕರಿಸಿದ್ದರು. ಈ ವರ್ಷ ನಕ್ಸಲಿಸಂ ಅನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿರುವುದು ವಿಶೇಷವಾಗಿ ಹೃದಯಸ್ಪರ್ಶಿಯಾಗಿದೆ, ಏಕೆಂದರೆ ಇದು ಕಡುಬಡವರು ಸಹ ಅಂತಿಮವಾಗಿ ಭಯವಿಲ್ಲದೆ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸುವುದನ್ನು ಖಚಿತಪಡಿಸಿದೆ. ಈಗ, ನಮ್ಮ ಕಾಲದ ವಾಸ್ತವಗಳಿಂದ ಬಹುದೂರವಿರುವ, ಆದರೆ ನಮ್ಮ ಪ್ರಗತಿಯ ಹಾದಿಯನ್ನು ತಪ್ಪಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುವ ʻಬೌದ್ಧಿಕ ನಕ್ಸಲರುʼ (ದಿಮಾಗಿ ನಕ್ಸಲ್ಸ್‌) ಮಾತ್ರ ಉಳಿದಿದ್ದಾರೆ.

‘ನಾರಿ ಶಕ್ತಿ’ಗೆ ವಿಪಕ್ಷ ಅನ್ಯಾಯ:

ವಿರೋಧ ಪಕ್ಷದ ಭಾಗವಾಗಿರುವ ಅತಿದೊಡ್ಡ ಪಕ್ಷವೊಂದು ಒಬಿಸಿ ಮೀಸಲಾತಿಯನ್ನು ಕಡಿತಗೊಳಿಸಿ ಮುಸ್ಲಿಂ ಮೀಸಲಾತಿಯನ್ನು ತರಲು ಬಯಸುತ್ತಿರುವುದು ಅತ್ಯಂತ ಆಘಾತಕಾರಿಯಾಗಿದೆ; ನಮ್ಮ ಸಂವಿಧಾನ ಶಿಲ್ಪಿಗಳು, ವಿಶೇಷವಾಗಿ ಡಾ। ಬಾಬಾಸಾಹೇಬ್ ಅಂಬೇಡ್ಕರ್ ಅವರು ಇದನ್ನು ಸಂಪೂರ್ಣವಾಗಿ ವಿರೋಧಿಸಿದ್ದರು.

ನಮ್ಮ ಸಂವಿಧಾನವನ್ನು ರೂಪಿಸಲು ನೆರವಾದ ಅಸಾಧಾರಣ ಮಹಿಳೆಯರನ್ನು ಸ್ಮರಿಸದಿದ್ದರೆ ಸಂವಿಧಾನದ ಪಯಣವು ಅಪೂರ್ಣವಾಗುತ್ತದೆ. ಆದರೆ, ಈ ವರ್ಷದ ಆರಂಭದಲ್ಲಿ ನಡೆದ ಘಟನೆಯು ನಮ್ಮ ಹೃದಯಗಳಲ್ಲಿ ನಾಚಿಕೆ ಮೂಡಿಸುವಂತಿದೆ. ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಉದ್ದೇಶದ ಮಸೂದೆಯನ್ನು ಅಂಗೀಕರಿಸಲು ಆ ಒಂದು ವಿರೋಧ ಪಕ್ಷವು ಅವಕಾಶ ನೀಡಲಿಲ್ಲ, ಈ ಮೂಲಕ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ತನಗಿರುವ ತಿರಸ್ಕಾರವನ್ನು ಮತ್ತೊಮ್ಮೆ ಪ್ರದರ್ಶಿಸಿತು. ಭಾರತದ ‘ನಾರಿ ಶಕ್ತಿ’ಗೆ ನ್ಯಾಯ ಒದಗಿಸುವುದನ್ನು ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ ಎಂದು ನಾನು ಭರವಸೆ ನೀಡುತ್ತೇನೆ.

ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಕ್ಕೆ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಪಾತ್ರವಿದೆ. ದುರದೃಷ್ಟವಶಾತ್, ಪ್ರಮುಖ ವಿರೋಧ ಪಕ್ಷವು ‘ವಿರೋಧ ಪಕ್ಷ’ಕ್ಕಿಂತ ಹೆಚ್ಚಾಗಿ ‘ಅವರೋಧ ಪಕ್ಷ’ (ಅಡ್ಡಿಪಡಿಸುವ ಪಕ್ಷ) ಆದಂತೆ ತೋರುತ್ತಿದೆ. ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುವುದು ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವುದಕ್ಕೆ ಪರ್ಯಾಯವಲ್ಲ ಎಂಬುದನ್ನು ಅವರು ತಿಳಿದಿರಬೇಕು.

ಇಂದು ಭಾರತವು ನಿರ್ಣಾಯಕ ಘಟ್ಟದಲ್ಲಿ ನಿಂತಿದೆ. 2047ರ ವೇಳೆಗೆ ‘ವಿಕಸಿತ ಭಾರತ’ದತ್ತ ನಾವು ಸಾಗುತ್ತಿರುವಾಗ, ಎರಡು ಸರಳ ಆದರೆ ಶಕ್ತಿಶಾಲಿ ತತ್ವಗಳು ನಮ್ಮ ಸಾಮೂಹಿಕ ಪ್ರಯತ್ನಗಳಿಗೆ ಮಾರ್ಗದರ್ಶನ ನೀಡಬಲ್ಲವು,

ಅವುಗಳೆಂದರೆ: ನಮ್ಮ ಆಲೋಚನೆಯಲ್ಲಿ ‘ಭಾರತ ಮೊದಲು’ ಮತ್ತು ನಮ್ಮ ಕಾರ್ಯಗಳಲ್ಲಿ ‘ಕರ್ತವ್ಯ’. ಇವುಗಳನ್ನು ನಮ್ಮ ಮಾರ್ಗದರ್ಶಿ ತತ್ವಗಳಾಗಿ ಮತ್ತು ಸಂವಿಧಾನವನ್ನು ನಮ್ಮ ಶಕ್ತಿಯ ಮೂಲವಾಗಿ ಇಟ್ಟುಕೊಂಡು, ಮುಂಬರುವ ತಲೆಮಾರುಗಳಿಗೆ ಉಜ್ವಲ ಭವಿಷ್ಯವನ್ನು ನಾವು ಭದ್ರಪಡಿಸಬಹುದು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

6 ವರ್ಷಗಳ ಬಳಿಕ ಎನ್‌ಡಿಎತೆಕ್ಕೆಗೆ ಮರಳಿದ ಅಕಾಲಿದಳ
ಸುಪ್ರೀಂ ಆದೇಶಕ್ಕೇ ತ.ನಾಡಿನ ವಿಜಯ್‌ ಸರ್ಕಾರ ಸಡ್ಡು