ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆಗೆ ಪ್ರತಿಯಾಗಿ ಭಾರತದ ಮೇಲೆ ದಾಳಿ ನಡೆಸಲು ಪಾಕಿಸ್ತಾನವು ಚೀನಾ ಮತ್ತು ಟರ್ಕಿ ನಿರ್ಮಿತ ಶಸ್ತ್ರಾಸ್ತ್ರ ಬಳಸಿತ್ತು ಎಂದು ಭಾರತೀಯ ಸೇನೆ ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದೆ. ಜೊತೆಗೆ, ನಮ್ಮ ಏರ್‌ಫೀಲ್ಡ್ ಮತ್ತು ಲಾಜಿಸ್ಟಿಕ್ ವ್ಯವಸ್ಥೆಯನ್ನು ಗುರಿ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ ಭಾರತದ ಏರ್‌ಬೇಸ್‌ಗಳನ್ನು ನಾಶ ಮಾಡಿದ್ದೇವೆಂಬ ಪಾಕಿಸ್ತಾನ ಸೇನೆಯ ಆರೋಪವನ್ನು ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ.
ಪಾಕ್ ದಾಳಿ ಕುರಿತು ಸೋಮವಾರ ವಿವರಣೆ ನೀಡಿದ್ದ ಡಿಜಿಎಂಒಗಳಾದ ಏರ್‌ಆಪರೇಷನ್ಸ್ ಡಿಜಿ ಏರ್‌ಮಾರ್ಷಲ್ ಎ.ಕೆ.ಭಾರ್ತಿ ಮತ್ತು ಡಿಜಿಎಂ ಲೆ.ಜನರಲ್ ರಾಜೀವ್ ಘಾಯ್, ‘ಭಾರತದ ವಾಯುಪ್ರದೇಶವನ್ನು ದಾಟುವುದು ಸುಲಭವಲ್ಲ. ಒಂದೊಮ್ಮೆ ದಾಟಿದರೂ ಗುರಿ ತಲುಪುವ ಮೊದಲೇ ಯಾವುದಾದರೂ ಒಂದು ಗ್ರಿಡ್ ಸಿಸ್ಟಂ ಅದನ್ನು ಹೊಡೆದುರುಳಿಸುವುದು ನಿಶ್ಚಿತ’ ಎಂದರು.
ಉಗ್ರರಷ್ಟೇ ಗುರಿ:
‘ಪಾಕಿಸ್ತಾನದಲ್ಲಿರುವ ಉಗ್ರರ ಮೂಲಸೌಕರ್ಯಗಳನ್ನು ನಾಶ ಮಾಡುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಆದರೆ ಪಾಕ್ ಸೇನೆ ಅವುಗಳ ರಕ್ಷಣೆಗೆ ನಿಂತಿತು. ಉಗ್ರರ ವಿಚಾರದಲ್ಲಿ ಪಾಕಿಸ್ತಾನ ಸೇನೆ ಮಧ್ಯಪ್ರವೇಶಿಸಿದ್ದು ನಾಚಿಕೆಗೇಡು ಎಂದು ಭಾರ್ತಿ ಹೇಳಿದರು.
ಇದೇ ವೇಳೆ ದೇಶದ ಸೇನಾ ಸಾಮರ್ಥ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ‘ಈಗಾಗಲೇ ನಮ್ಮ ಶಸ್ತ್ರಾಸ್ತ್ರಗಳು ನೈಜ ಯುದ್ಧದ ಸಮಯದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿವೆ. ದೇಶೀಯ ನಿರ್ಮಿತ ಆಕಾಶ್ ಕ್ಷಿಪಣಿ ವ್ಯವಸ್ಥೆ ಅತ್ಯುತ್ತಮ ಸಾಧನೆ ತೋರಿದೆ’ ಎಂದರು.
ಸಾಕ್ಷ್ಯ ಪ್ರದರ್ಶಿಸಿದ ಅಧಿಕಾರಿಗಳು
ಭಾರತೀಯ ಸೇನೆ ಹೊಡೆದುರುಳಿಸಿದ ಬಹುದೂರ ಸಾಗಬಹುದಾದ ರಾಕೆಟ್‌ಗಳು, ಆತ್ಮಾಹುತಿ ಡ್ರೋನ್, ಟರ್ಕಿ ಮೂಲದ ವೈಐಎಚ್‌ಎ ಮತ್ತು ಸೋನಾರ್ ಡ್ರೋನ್‌ಗಳೂ ಸೇರಿ ಯುಎವಿಗಳ ಅವಶೇಷಗಳನ್ನು ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.
ಕಿರಾನಾ ಬೆಟ್ಟಕ್ಕೆ ದಾಳಿ ಮಾಡಿಲ್ಲ
ಪಾಕಿಸ್ತಾನ ಅಣ್ವಸ್ತ್ರಗಳನ್ನು ಸಂಗ್ರಹಿಸಿಟ್ಟಿರುವ ಕಿರಾನ ಗುಡ್ಡದ ಮೇಲೆ ಭಾರತ ದಾಳಿ ನಡೆಸಿಲ್ಲ ಭಾರ್ತಿ ಸ್ಪಷ್ಟಪಡಿಸಿದರು. ಸಾಮಾಜಿಕ ಜಾಲತಾಣ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಕುರಿತು ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಮಾತನಾಡುತ್ತಾ, ''''''''ಪಾಕಿಸ್ತಾನವು ಕಿರಾನಾ ಬೆಟ್ಟದಲ್ಲಿ ಅಣ್ವಸ್ತ್ರಗಳು ಅಡಗಿಸಿಟ್ಟಿದೆ ಎಂಬ ಮಾಹಿತಿ ನೀಡಿದಕ್ಕಾಗಿ ಧನ್ಯವಾದಗಳು. ಅದೇ ಏನೇ ಇರಲಿ, ನಾವು ಕಿರಾನ ಬೆಟ್ಟದ ಮೇಲೆ ದಾಳಿ ನಡೆಸಿಲ್ಲ'''''''' ಎಂದರು.
ಕ್ರಿಕೆಟ್-ಏರ್‌ಡಿಫೆನ್ಸ್ ಕವಚ
ನಮ್ಮ ವಾಯುರಕ್ಷಣಾ ವ್ಯವಸ್ಥೆ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ವಿವರಿಸಲು ಘಾಯ್ ಅವರು ಆಸ್ಟ್ರೇಲಿಯಾ-ಇಂಗ್ಲೆಂಡ್ ಕ್ರಿಕೆಟ್‌ನ ಉದಾಹರಣೆ ನೀಡಿದರು. ‘1970ರಲ್ಲಿ ಇಂಗ್ಲೆಂಡ್-ಆಸ್ಟ್ರೇಲಿಯಾ ಆ್ಯಷಸ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್‌ನ ಇಡೀ ಬ್ಯಾಟಿಂಗ್ ಪಡೆಯನ್ನು ಆಸೀಸ್‌ನ ಇಬ್ಬರು ಬೌಲರ್‌ಗಳು ಪೆವಿಲಿಯನ್‌ಗೆ ಅಟ್ಟಿದರು. ಆಗ ಆಸ್ಟ್ರೇಲಿಯಾದವರು, ಆ್ಯಷಸ್ ಟು ಆ್ಯಷಸ್, ಡಸ್ಟ್ ಟು ಡಸ್ಟ್ ಎಂಬ ನಾಣ್ಣುಡಿ ಹುಟ್ಟುಹಾಕಿದ್ದರು. ನಮ್ಮ ಏರ್‌ಡಿಫೆನ್ಸ್ ಸಿಸ್ಟಂ ನೋಡಿದರೆ ಈ ಮಾತಿನ ತಿರುಳು ಅರ್ಥವಾಗುತ್ತದೆ’ ಎಂದರು.