4 ದಿನಗಳ ಟೆಸ್ಟ್‌ ಆಯೋಜಿಸಲು ಅನುಮತಿ ನೀಡಲು ಐಸಿಸಿ ಸಿದ್ಧವಿದೆ

KannadaprabhaNewsNetwork | Updated : Jun 18 2025, 06:31 AM IST

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಸಣ್ಣ ಕ್ರಿಕೆಟಿಂಗ್‌ ರಾಷ್ಟ್ರಗಳಿಗೆ ನಾಲ್ಕು ದಿನಗಳ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಲು ಸಿದ್ಧವಿದೆ  

 ಲಂಡನ್‌: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಸಣ್ಣ ಕ್ರಿಕೆಟಿಂಗ್‌ ರಾಷ್ಟ್ರಗಳಿಗೆ ನಾಲ್ಕು ದಿನಗಳ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಲು ಸಿದ್ಧವಿದೆ ಎಂದು ಬ್ರಿಟನ್‌ನ ಮಾಧ್ಯಮವೊಂದು ವರದಿ ಮಾಡಿದೆ. 2027-29ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅವಧಿಯಲ್ಲಿ ಈ ಯೋಜನೆಯನ್ನು ಆರಂಭಿಸಲು ಐಸಿಸಿ ತೀಮಾರ್ನಿಸಿದೆ ಎನ್ನಲಾಗಿದೆ.

ಇದೇ ವೇಳೆ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ತಂಡಗಳು ಸಂಪ್ರದಾಯಿಕವಾಗಿ 5 ದಿನಗಳ ಪಂದ್ಯಗಳನ್ನೇ ಆಡಿದರೆ ಟೆಸ್ಟ್‌ ಕ್ರಿಕೆಟ್‌ನ ಹಿತ ಕಾಯಲು ಸಾಧ್ಯ ಎನ್ನುವ ಸಲಹೆಯನ್ನು ಐಸಿಸಿ ನೀಡಿದೆ.

ಪಂದ್ಯಗಳನ್ನು ಒಂದು ದಿನ ಕಡಿತಗೊಳಿಸುವುದರಿಂದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿದ್ದು, ಸಣ್ಣ ಕ್ರಿಕೆಟಿಂಗ್‌ ರಾಷ್ಟ್ರಗಳು ಹೆಚ್ಚು ಟೆಸ್ಟ್‌ ಹಾಗೂ ಹೆಚ್ಚುವರಿ ಪಂದ್ಯಗಳನ್ನು ಒಳಗೊಂಡ ಸರಣಿಗಳನ್ನು ಆಡಲು ಅನುಕೂಲವಾಗಲಿದೆ.

ಕಳೆದ ವಾರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ವೇಳೆ ನಡೆದ ಸಭೆಯಲ್ಲಿ ಐಸಿಸಿ ಅಧ್ಯಕ್ಷ ಜಯ್‌ ಶಾ, 4 ದಿನಗಳ ಟೆಸ್ಟ್‌ ಆಯೋಜಿಸಲು ಅನುಮತಿ ಸೂಚಿಸಿದ್ದು, ಅನುಷ್ಠಾನಕ್ಕೆ ತರುವಂತೆ ಕರೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಭಾರತ, ಇಂಗ್ಲೆಂಡ್‌, ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಗಳು ಬಾರ್ಡರ್‌-ಗವಾಸ್ಕರ್‌, ತೆಂಡುಲ್ಕರ್‌-ಆ್ಯಂಡರ್‌ಸನ್‌, ಆ್ಯಷಸ್‌ನಂತಹ ಪ್ರತಿಷ್ಠಿತ, ಜನಪ್ರಿಯ ಸರಣಿಗಳಲ್ಲಿ ಈಗಿರುವಂತೆಯೇ 5 ಟೆಸ್ಟ್‌ಗಳನ್ನು ಆಯೋಜಿಸಲು ಐಸಿಸಿ ಅನುಮತಿ ನೀಡಿದೆ ಎಂದು ಗೊತ್ತಾಗಿದೆ.

2017ರಲ್ಲಿ ಐಸಿಸಿ ಮೊದಲ ಬಾರಿಗೆ 4 ದಿನಗಳ ಟೆಸ್ಟ್‌ ಆಯೋಜನೆಗೆ ಒಪ್ಪಿಗೆ ಸೂಚಿಸಿತ್ತು. ಇಂಗ್ಲೆಂಡ್‌ ತಂಡವು ಕಳೆದ ತಿಂಗಳು ಜಿಂಬಾಬ್ವೆ ವಿರುದ್ಧ 4 ದಿನಗಳ ಪಂದ್ಯವನ್ನು ಆಡಿತ್ತು. 2019 ಹಾಗೂ 2023ರಲ್ಲಿ ಇಂಗ್ಲೆಂಡ್‌ ಐರ್ಲೆಂಡ್‌ ವಿರುದ್ಧವೂ 4 ದಿನಗಳ ಪಂದ್ಯವನ್ನಾಡಿತ್ತು. ---

4 ದಿನಗಳ ಟೆಸ್ಟ್‌ ಏಕೆ?

* ಹೆಚ್ಚು ಸಮಯ, ಹಣಕಾಸಿನ ಅವಶ್ಯಕತಯಿಂದಾಗಿ ಜಿಂಬಾಬ್ವೆ, ಬಾಂಗ್ಲಾದೇಶ, ಐರ್ಲೆಂಡ್‌, ಅಫ್ಘಾನಿಸ್ತಾನದಂಥ ಸಣ್ಣ ಕ್ರಿಕೆಟಿಂಗ್‌ ರಾಷ್ಟ್ರಗಳು ಟೆಸ್ಟ್‌ಗಳನ್ನು ಆಯೋಜಿಸಲು ಹಿಂದೇಟು ಹಾಕುತ್ತವೆ.

* 4 ದಿನಗಳ ಟೆಸ್ಟ್‌ ಆಯೋಜನೆಯಿಂದ 3 ಪಂದ್ಯಗಳ ಸರಣಿಯನ್ನು ಕೇವಲ 3 ವಾರಗಳಲ್ಲಿ ಮುಗಿಸಲು ಸಾಧ್ಯವಿದೆ.

* ಪ್ರತಿ ದಿನ 90ರ ಬದಲು 98 ಓವರ್‌ ಆಟ ನಡೆಯಲಿದ್ದು, ಪಂದ್ಯದಲ್ಲಿ ಸ್ಪರ್ಧಾತ್ಮಕತೆ ಕಾಯ್ದುಕೊಳ್ಳಲು ಅನುಕೂಲವಾಗಲಿದೆ.

* ಆಟ ಒಂದು ದಿನ ಕಡಿತಗೊಳಿಸುವುದರಿಂದ ಪಂದ್ಯದಲ್ಲಿ ತಂಡಗಳ ನಡುವೆ ಗೆಲುವಿಗಾಗಿ ಪೈಪೋಟಿ ಹೆಚ್ಚಲಿದೆ. ಇದರಿಂದ ಹೆಚ್ಚು ಜನರನ್ನು ಕ್ರೀಡಾಂಗಣದತ್ತ ಆಕರ್ಷಿಸಬಹುದು ಎನ್ನುವುದು ಐಸಿಸಿ ನಂಬಿಕೆ.

* ಸಣ್ಣ ಕ್ರಿಕೆಟಿಂಗ್‌ ರಾಷ್ಟ್ರಗಳು ಹೆಚ್ಚು ಸರಣಿಗಳನ್ನು ಆಯೋಜಿಸುವಂತಾದರೆ ಆ ದೇಶಗಳ ನಡುವೆ ಹೆಚ್ಚು ಟೆಸ್ಟ್‌ಗಳು ನಡೆಯಲಿವೆ. ಇದರಿಂದ ಟೆಸ್ಟ್‌ ಕ್ರಿಕೆಟನ್ನು ಜೀವಂತವಾಗಿರಿಸಲು ಸಾಧ್ಯ.

Read more Articles on