ಪುದುಚೆರಿಯ ಏಕೈಕ ಮಹಿಳಾ ಸಚಿವೆ ರಾಜೀನಾಮೆ

KannadaprabhaNewsNetwork | Updated : Oct 11 2023, 10:38 AM IST

ಸಾರಾಂಶ

ತಾವು ಪಿತೂರಿ ಮತ್ತು ಹಣಬಲದ ರಾಜಕೀಯ, ಲಿಂಗಬೇಧ ಮತ್ತು ಜಾತೀಯತೆ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಆರೋಪಿಸಿ ಪುದುಚೆರಿಯ ಏಕೈಕ ಮಹಿಳಾ ಶಾಸಕಿ ಹಾಗೂ ಸಚಿವೆ ಎಸ್‌ ಚಂದಿರಾ ಪ್ರಿಯಾಂಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪುದುಚೆರಿ: ತಾವು ಪಿತೂರಿ ಮತ್ತು ಹಣಬಲದ ರಾಜಕೀಯ, ಲಿಂಗಬೇಧ ಮತ್ತು ಜಾತೀಯತೆ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಆರೋಪಿಸಿ ಪುದುಚೆರಿಯ ಏಕೈಕ ಮಹಿಳಾ ಶಾಸಕಿ ಹಾಗೂ ಸಚಿವೆ ಎಸ್‌ ಚಂದಿರಾ ಪ್ರಿಯಾಂಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

‘ನನ್ನ ಕ್ಷೇತ್ರದ ಜನರ ಪ್ರೀತಿಯಿಂದಾಗಿ ನಾನು ವಿಧಾನಸಭೆಗೆ ಪ್ರವೇಶಿಸಿದ್ದರೂ ಪಿತೂರಿಯ ರಾಜಕೀಯವನ್ನು ಜಯಿಸುವುದು ಅಷ್ಟು ಸುಲಭವಲ್ಲ. ಹಣಬಲದ ದೊಡ್ಡ ಭೂತದ ವಿರುದ್ಧ ನಾನು ಹೋರಾಡಲು ಸಾಧ್ಯವಿಲ್ಲ ಎಂದು ಅರಿತುಕೊಂಡಿದ್ದೇನೆ. ನಾನು ಜಾತೀಯತೆ ಮತ್ತು ಲಿಂಗ ಅಸಮಾನತೆಗೆ ತುತ್ತಾಗಿದ್ದೇನೆ. ನನ್ನ ನಿರಂತರವಾಗಿ ಗುರಿ ಮಾಡಲಾಗಿದೆ. ಪ್ರಬಲ ಶಕ್ತಿಗಳ ವಿರುದ್ಧ ಹೋರಾಡಲು ನನಗೆ ಸಾಧ್ಯವಿಲ್ಲ. ಹೀಗಾಗಿ ಸಚಿವ ಸ್ಥಾನ ತ್ಯಜಿಸಿದ್ದೇನೆ. 

ನನ್ನ ಕ್ಷೇತ್ರದ ಜನರಲ್ಲಿ ಕ್ಷಮೆಯಾಚಿಸುತ್ತೇನೆ ಮತ್ತು ಅವರಿಗೆ ಚಿರ ಋಣಿಯಾಗಿದ್ದೇನೆ’ ಎಂದು ಬೇಸರಿಸಿದ್ದಾರೆ. 40 ವರ್ಷಗಳ ಬಳಿಕ ಕೇಂದ್ರಾಡಳಿತ ಪ್ರದೇಶವೊಂದರಲ್ಲಿ ಸಚಿವರಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಹಿರಿಮೆಗೆ 2021ರಲ್ಲಿ ಪ್ರಿಯಾಂಗ ಪಾತ್ರರಾಗಿದ್ದರು. ಬಳಿಕ ಮುಖ್ಯಮಂತ್ರಿ ಎನ್‌ ರಂಗಸಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಾರಿಗೆ ಖಾತೆಯನ್ನು ಹೊಂದಿದ್ದರು.

Share this article