ಕನ್ನಡಪ್ರಭ ವಾರ್ತೆ ಬೆಂಗಳೂರು
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಅಳವಡಿಸಿಕೊಂಡು ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವಂತೆ ರಾಜ್ಯ ಸರ್ಕಾರ ಗುರುವಾರ ಎಲ್ಲಾ ಇಲಾಖೆ/ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆ ನೀಡಿದೆ.ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಪರಿಶಿಷ್ಟ ಜಾತಿ ಒಳಮೀಸಲು ಸಂಬಂಧ ಸರ್ಕಾರ ಈವರೆಗೆ ಹೊರಡಿಸಿರುವ ಎಲ್ಲ ಆದೇಶ/ಸುತ್ತೋಲೆ ಅನುಸರಿಸಿ ಸಿವಿಲ್ ಸೇವೆಯ ಹುದ್ದೆಗಳಿಗೆ ನೇರ ನೇಮಕಾತಿ ಆರಂಭಿಸಲು ಸೂಚಿಸಿದೆ. ತನ್ಮೂಲಕ ಒಳಮೀಸಲಾತಿ ಕಾರಣಕ್ಕೆ ಕಳೆದ ಒಂಬತ್ತು ತಿಂಗಳಿಂದ ತಡೆಹಿಡಿಯಲಾಗಿದ್ದ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಮರು ಚಾಲನೆ ದೊರೆತಂತಾಗಿದೆ.
ಪ.ಜಾತಿಯ 101 ಉಪಜಾತಿಗಳಿಗೆ ಒಳ ಮೀಸಲಾತಿ ಜಾರಿ ಹಿನ್ನೆಲೆಯಲ್ಲಿ ಪ.ಜಾತಿಗೆ ಇರುವ ಶೇ.17ರಷ್ಟು ಮೀಸಲಾತಿಯಲ್ಲಿ ಶೇ.6ರಷ್ಟು ಹುದ್ದೆಗಳು ಪ. ಜಾತಿ ‘ಪ್ರವರ್ಗ ಎ’ನಲ್ಲಿ ಗುರುತಿಸಿರುವ ಉಪಜಾತಿಗಳಿಗೆ, ಶೇ.6ರಷ್ಟು ಹುದ್ದೆಗಳು ‘ಪ್ರವರ್ಗ ಬಿ’ ಅಡಿ ಗುರುತಿಸಿರುವ ಉಪಜಾತಿಗಳಿಗೆ ಮತ್ತು ಉಳಿದ ಶೇ.5ರಷ್ಟು ಹುದ್ದೆಗಳು ‘ಪ್ರವರ್ಗ ಸಿ’ ಅಡಿ ಗುರುತಿಸಿರುವ ಎಸ್ಸಿ ಉಪಜಾತಿಗಳಿಗೆ ದೊರೆಯಲಿವೆ.ಉಳಿದಂತೆ ಇನ್ನುಳಿದ ಯಾವುದೇ ಸಮುದಾಯಗಳಿಗೆ ಈಗಿರುವ ಮೀಸಲಾತಿಯಲ್ಲಿ ಬದಲಾವಣೆ ಆಗುವುದಿಲ್ಲ. ಹಿಂದುಳಿದ ವರ್ಗದ ವಿವಿಧ ಪ್ರವರ್ಗದಲ್ಲಿ ಬರುವ ಲಿಂಗಾಯತ, ಒಕ್ಕಲಿಗ, ಕುರುಬ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಪಂಗಡ, ಸಾಮಾನ್ಯ ಅರ್ಹತೆಯಡಿಯ ಮೀಸಲಾತಿ ಇಲ್ಲಿಯವರೆಗೆ ಇದ್ದಂತೆಯೇ ಮುಂದುವರೆಯಲಿದೆ.
ಅದನ್ನು ನೋಡುವುದಾದರೆ ಪ್ರವರ್ಗ 1(ಶೇ.4), ಪ್ರವರ್ಗ 2ಎ(ಶೇ.15), ಪ್ರವರ್ಗ 2ಬಿ (ಶೇ.4), ಪ್ರವರ್ಗ 3 ಎ(ಶೇ.4), ಪ್ರವರ್ಗ 3 ಬಿ(ಶೇ.5), ಪರಿಶಿಷ್ಟ ಪಂಗಡ (ಶೇ.7), ಸಾಮಾನ್ಯ ಅರ್ಹತೆಯಡಿ (ಶೇ.44) ನಿಗದಿತ ಮೀಸಲು ಹುದ್ದೆಗಳು ಲಭಿಸಲಿವೆ. ಪ.ಜಾತಿಗೆ ಮೀಸಲಾದ ಶೇ.17ರಷ್ಟು ಮೀಸಲಾತಿ ಮಾತ್ರ ಒಳಮೀಸಲು ಮೂಲಕ ಪ.ಜಾತಿಯ ಪ್ರವರ್ಗ ಎ(ಶೇ.6), ಪ.ಜಾತಿ ಪ್ರವರ್ಗ ಬಿ(ಶೇ.6), ಪ.ಜಾತಿ ಪ್ರವರ್ಗ ಸಿ(ಶೇ.5)ಗೆ ರೋಸ್ಟರ್ ಬಿಂದು ಅನುಸಾರ ಹಂಚಿಕೆಯಾಗಲಿವೆ.ಪ.ಜಾತಿಗಳಿಗೆ ಒಳಮೀಸಲಾತಿ ಜಾರಿ ಸಂಬಂಧ ರಚಿಸಿದ್ದ ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನದಾಸ್ ಆಯೋಗ ಸಲ್ಲಿಸಿದ್ದ ವರದಿಯನ್ನು ಸಚಿವ ಸಂಪುಟದಲ್ಲಿ ಕೆಲ ಮಾರ್ಪಾಡುಗಳೊಂದಿಗೆ ಅಂಗೀಕರಿಸಿ ಅದರ ಜಾರಿಗೆ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು. ನಂತರ ಒಳಮೀಸಲು ಅನುಸಾರ ರೋಸ್ಟರ್ ಬಿಂದುಗಳನ್ನೂ ಪರಿಷ್ಕರಿಸಲಾಗಿತ್ತು.