ನವದೆಹಲಿ : ‘ಭಾರತದ ಸ್ಥಳೀಯ ಭಾಷೆಗಳ ಜೊತೆಗೆ ಹಿಂದಿ ಯಾವತ್ತೂ ಸ್ಪರ್ಧೆಗೆ ಇಳಿಯುವುದಿಲ್ಲ. ಏಕೆಂದರೆ ಅಧಿಕೃತ ಭಾಷೆಯಾದ ಹಿಂದಿ ಮತ್ತು ಇನ್ನಿತರ ಭಾಷೆಗಳು ಸ್ನೇಹಿತರಿದ್ದಂತೆ. ಅವು ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ಹಿಂದಿ ಹೇರಿಕೆ ನಡೆಯುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ಅವರ ಈ ಹೇಳಿಕೆ ಬಂದಿದೆ.
ಹಿಂದಿ ದಿನದಂದು ಅಖಿಲ ಭಾರತೀಯ ರಾಜಭಾಷಾ ಸಮ್ಮೇಳನದಲ್ಲಿ ಶನಿವಾರ ಮಾತನಾಡಿದ ಅವರು, ‘ಪ್ರಾದೇಶಿಕ ಭಾಷೆಗಳು ಶಕ್ತಿಯುತವಾಗುವವರೆಗೆ ಹಾಗೂ ಅವುಗಳ ಜೊತೆಗೆ ಹಿಂದಿಯು ಸಂವಾದ ನಡೆಸುವವರೆಗೆ ಅಧಿಕೃತ ಭಾಷೆಯಾದ ಹಿಂದಿಯ ಬೆಳವಣಿಗೆ ಸಾಧ್ಯವಿಲ್ಲ. ಹಿಂದಿ ಮತ್ತು ಇತರ ಭಾಷೆಗಳ ನಡುವೆ ಸ್ಪರ್ಧೆ ಇಲ್ಲ. ಹಿಂದಿಯು ಎಲ್ಲಾ ಸ್ಥಳೀಯ ಭಾಷೆಗಳ ಸ್ನೇಹಿತ. ಹೀಗಾಗಿ ಹಿಂದಿ ಮತ್ತು ಸ್ಥಳೀಯ ಭಾಷೆಗಳ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಾಗುವುದು ಎಂದು ಹೇಳಿದರು.
ಹಿಂದಿಯನ್ನು ಸಂವಹನದ ಭಾಷೆಯಾಗಿಸಲು, ದೇಶದಲ್ಲಿ ಸರ್ವೇಸಾಮಾನ್ಯವಾಗಿ ಬಳಸುವ ಭಾಷೆಯಾಗಿಸಲು, ತಾಂತ್ರಿಕ ಭಾಷೆಯಾಗಿಸಲು ಹಾಗೂ ಈಗ ಅಂತಾರಾಷ್ಟ್ರೀಯ ಭಾಷೆಯಾಗಿಸಲು ಹಿಂದಿ ದಿವಸದಂದು ನಾವು ಪಣ ತೊಡಗಬೇಕಿದೆ. ನಾವೀಗ ಹಿಂದಿಯನ್ನು ಅಧಿಕೃತವಾಗಿ ಸ್ವೀಕರಿಸಿ 75 ವರ್ಷ ಪೂರ್ಣಗೊಳಿಸುತ್ತಿದ್ದೇವೆ. ಹಿಂದಿ ಭಾಷೆ ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಹಿಂದಿಯ ಮೂಲಕ ಎಲ್ಲಾ ಸ್ಥಳೀಯ ಭಾಷೆಗಳ ನಡುವೆ ಸಂಪರ್ಕ ಸಾಧಿಸುತ್ತಾ ನಮ್ಮ ಸಂಸ್ಕೃತಿ, ಭಾಷೆ, ಸಾಹಿತ್ಯ, ಕಲೆ ಹಾಗೂ ವ್ಯಾಕರಣವನ್ನು ರಕ್ಷಿಸುತ್ತಿದ್ದೇವೆ ಎಂದು ತಿಳಿಸಿದರು.
‘ಹಿಂದಿಯೆಂಬುದು ಭೂ-ರಾಜಕೀಯ ಭಾಷೆಗಿಂತ ಹೆಚ್ಚಾಗಿ ಭೂ-ಸಾಂಸ್ಕೃತಿಕ ಭಾಷೆ. ನಾನು ಹೊಂದಿರುವ ಗೃಹ ಹಾಗೂ ಸಹಕಾರ ಎರಡೂ ಖಾತೆಗಳ ಎಲ್ಲಾ ಕಡತಗಳೂ ಹಿಂದಿಯಲ್ಲೇ ಸಿದ್ಧವಾಗುತ್ತವೆ. ಈ ಹಂತಕ್ಕೆ ತಲುಪಲು ನನಗೆ 3 ವರ್ಷ ಹಿಡಿಯಿತು. 1949ರ ಸೆಪ್ಟೆಂಬರ್ 14ರಂದು ಹಿಂದಿಯನ್ನು ನಮ್ಮ ಸಂವಿಧಾನ ರಚನಾ ಸಮಿತಿಯು ದೇಶದ ಅಧಿಕೃತ ಭಾಷೆಯೆಂದು ಸ್ವೀಕರಿಸಿದ್ದರ ಸ್ಮರಣಾರ್ಥ ಹಿಂದಿ ದಿನ ಆಚರಿಸಲಾಗುತ್ತಿದೆ’ ಎಂದು ಅಮಿತ್ ಶಾ ಹೇಳಿದರು.