ಮುಸ್ಲಿಂಗೆ ನಂ.1ಪಟ್ಟ ಕಟ್ಟಲು ‘ಕೈ’ಸಂಚು : ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್‌

KannadaprabhaNewsNetwork |  
Published : Apr 14, 2025, 01:23 AM ISTUpdated : Apr 14, 2025, 04:51 AM IST
R Ashok

ಸಾರಾಂಶ

‘ರಾಜ್ಯದಲ್ಲಿ ಮುಸ್ಲಿಮರೇ ಅತಿದೊಡ್ಡ ಜಾತಿ ಎಂದು ಜಾತಿಗಣತಿ ವರದಿ ನೀಡುವ ಹಿಂದೆ ಕುತಂತ್ರ ಅಡಗಿದೆ. ಮುಸ್ಲಿಂ ಎಂಬುದು ಒಂದು ಧರ್ಮ. ಆ ಧರ್ಮದಲ್ಲಿ ಬೇರೆ ಬೇರೆ ಜಾತಿ ಇದ್ದರೂ ಅವರನ್ನು ಯಾಕೆ ವಿಭಜಿಸಿಲ್ಲ?’ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್‌ ಹರಿಹಾಯ್ದಿದ್ದಾರೆ.

 ಬೆಂಗಳೂರು  : ‘ರಾಜ್ಯದಲ್ಲಿ ಮುಸ್ಲಿಮರೇ ಅತಿದೊಡ್ಡ ಜಾತಿ ಎಂದು ಜಾತಿಗಣತಿ ವರದಿ ನೀಡುವ ಹಿಂದೆ ಕುತಂತ್ರ ಅಡಗಿದೆ. ಮುಸ್ಲಿಂ ಎಂಬುದು ಒಂದು ಧರ್ಮ. ಆ ಧರ್ಮದಲ್ಲಿ ಬೇರೆ ಬೇರೆ ಜಾತಿ ಇದ್ದರೂ ಅವರನ್ನು ಯಾಕೆ ವಿಭಜಿಸಿಲ್ಲ?’ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್‌ ಹರಿಹಾಯ್ದಿದ್ದಾರೆ.ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಾತಿ ಮತ್ತು ಧರ್ಮಗಳನ್ನು ಒಡೆಯುತ್ತಿರುವ ಸಿದ್ದರಾಮಯ್ಯ ಅಧಿಕಾರದಲ್ಲಿದ್ದರೆ ಕರ್ನಾಟಕದಲ್ಲೂ ಮುಂದೆ ಮಿನಿ ಪಾಕಿಸ್ತಾನಗಳು ಉತ್ಪತ್ತಿಯಾಗಲು ಶುರುವಾಗುತ್ತವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಈ ಹಿಂದೆ ಲಿಂಗಾಯತರಿಗೆ ನಾಮ ಇಟ್ಟರು, ಈಗ ಒಕ್ಕಲಿಗರಿಗೆ ನಾಮ ಇಟ್ಟಿದ್ದಾರೆ. ಜಾತಿ ಜನಗಣತಿ ವರದಿಯಲ್ಲಿ ಮುಸ್ಲಿಮರೇ ನಂ.1 ಎಂದು ಬಿಂಬಿಸುವುದರಲ್ಲಿ ಸಾಕಷ್ಟು ಕುತಂತ್ರ ನಡೆಸಿದ್ದಾರೆ. ಟಿಪ್ಪು ಜಯಂತಿ ಮಾಡಿದರು, ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡುತ್ತೇನೆ ಅಂದರು. ಗುತ್ತಿಗೆಯಲ್ಲಿ ಶೇ.4 ಮೀಸಲಾತಿ ಕೊಟ್ಟರು. ಹೀಗೆ ಬಹುಮಾನಗಳ ಮೇಲೆ ಬಹುಮಾನಗಳನ್ನು ಕೊಟ್ಟಾಗಲೇ ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮೊದಲು ರಾಜ್ಯದಲ್ಲಿ ಅತಿ ದೊಡ್ಡ ಜಾತಿ ಲಿಂಗಾಯತರು, ಎರಡನೇ ಅತಿ ದೊಡ್ಡ ಜಾತಿ ಒಕ್ಕಲಿಗರು ಹಾಗೂ ಮೂರನೆಯವರು ದಲಿತರು ಎಂದಿತ್ತು. ಆದರೆ ಈಗ ಮುಸ್ಲಿಮರು ಅತಿ ದೊಡ್ಡ ಜಾತಿ ಎನ್ನಲಾಗಿದೆ. ಮುಸ್ಲಿಮರಲ್ಲೇ ವಿವಿಧ ಜಾತಿಗಳಿದ್ದು, ಅದನ್ನು ವಿಭಜಿಸಿಲ್ಲ. ಒಕ್ಕಲಿಗರಲ್ಲೇ ಕೆಲ ಜಾತಿಗಳನ್ನು ವಿಂಗಡಣೆ ಮಾಡಿದ್ದಾರೆ. ಕಾಂಗ್ರೆಸ್ ಗೆ ಹೆಚ್ಚು ಮತ ನೀಡುವವರ ಸಂಖ್ಯೆಯನ್ನು ಹೆಚ್ಚಾಗಿ ತೋರಿಸಲಾಗಿದೆ. ಈ ಮೂಲಕ ಒಕ್ಕಲಿಗರಿಗೆ, ಲಿಂಗಾಯತರಿಗೆ, ದಲಿತರಿಗೆ ನಾಮ ಹಾಕಿದ್ದಾರೆ.

 ನಿಮಗೆ ಯಾವ ಜಾತಿ ಬೇಕೋ, ಧರ್ಮ ಬೇಕೋ ಅವುಗಳನ್ನು ಒಗ್ಗೂಡಿಸೋದು. ಯಾರು ನಿಮಗೆ ಓಟು ಹಾಕುವುದಿಲ್ಲವೋ ಅವರನ್ನು ಇಬ್ಭಾಗ ಮಾಡುವುದು. ನಿಮ್ಮ ಈ ಕುತಂತ್ರ ನಮಗೆ ಅರ್ಥವಾಗುತ್ತಿದೆ’ ಎಂದು ಅಶೋಕ್ ಕಿಡಿಕಾರಿದರು.‘ಜಾತಿ ಜನಗಣತಿ ವರದಿಗೆ 150 ಕೋಟಿ ರು. ಖರ್ಚಾಗಿದೆ ಎನ್ನಲಾಗಿದೆ. ಅಧಿಕಾರಿ ಕಾಂತರಾಜು ಅವರನ್ನು ಮನೆಗೆ ಕರೆಸಿಕೊಂಡ ಸಿದ್ದರಾಮಯ್ಯ ಡಿಕ್ಟೇಶನ್ ಮಾಡಿಸಿ ವರದಿ ಬರೆಸಿದ್ದಾರೆ.

 ಬಳಿಕ ಕಾಂತರಾಜು ಸಹಿ ಹಾಕದೆ ಓಡಿಹೋಗಿದ್ದಾರೆ. ಗಣತಿ ವರದಿಗೆ ಖರ್ಚಾದ ಹಣವನ್ನು ಯಾರು ತಿಂದಿದ್ದಾರೆ ಎಂದು ತನಿಖೆ ಮಾಡಬೇಕಿದೆ. ಕೇವಲ ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿಕೊಳ್ಳಲು ವರದಿ ಸಿದ್ಧಪಡಿಸಲಾಗಿದೆ. ಈ ವರದಿಯನ್ನು ಹಿಂಪಡೆದು, ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ ವೈಜ್ಞಾನಿಕವಾಗಿ ವರದಿ ರೂಪಿಸಬೇಕು’ ಎಂದು ಆಗ್ರಹಿಸಿದರು.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ