;Resize=(412,232))
ಭುಬನೇಶ್ವರ್: ಒಡಿಶಾದ ಡಿಎಸ್ಪಿ ಹುದ್ದೆಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ತಲೆಗೂದಲಿಗೆ ಬಳಿದುಕೊಂಡ ಕೆಂಪು ಬಣ್ಣವೀಗ ತಲೆನೋವಾಗಿ ಪರಿಣಮಿಸಿದೆ. ಜಗತ್‌ಸಿಂಗ್ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಎಸ್‌ಪಿ ರಶ್ಮಿ ರಂಜನ್ ದಾಸ್ (49) ತಮ್ಮ ಕೂದಲಿಗೆ ಪೂರ್ತಿ ಕೆಂಪು ಬಣ್ಣ ಬಳಿದುಕೊಂಡವರು. ಇದು ಶಿಸ್ತಿನ ಉಲ್ಲಂಘನೆ ಎಂದಿರುವ ಪೊಲೀಸ್ ಇಲಾಖೆ, ಕೂದಲು ಕಪ್ಪು ಮಾಡಿಕೊಳ್ಳುವಂತೆ ಆದೇಶಿಸಿದೆ.
ಪೊಲೀಸ್ ಸಮವಸ್ತ್ರ ಧರಿಸಿರುವ ದಾಸ್‌ರ ತಲೆಯ ಮೇಲೆ ಕೆಂಪು ಟೊಪ್ಪಿಯಂತೆ ಕಾಣುವ ಬಣ್ಣದ ಕೂದಲಿನ ಫೋಟೋಗಳು ವೈರಲ್ ಆಗಿವೆ, ಜನರಿಂದ ತರಹೇವಾರಿ ಅಭಿಪ್ರಾಯಗಳು ಬರತೊಡಗಿವೆ.
‘ಪೊಲೀಸ್ ಅಧಿಕಾರಿಗೆ ಇದು ಶೋಭೆ ತರದು’ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನೊಂದಿಷ್ಟು ಮಂದಿ, ‘ಕೂದಲಿನ ಬಣ್ಣವನ್ನಾಧರಿಸಿ ಅವರ ವೃತ್ತಿಪರತೆಯನ್ನು ಪ್ರಶ್ನಿಸಲಾಗದು. ಭೂಗತಲೋಕದಲ್ಲಿ ನಡುಕ ಹುಟ್ಟಿಸಿರುವ ಅಧಿಕಾರಿ ಅವರು’ ಎನ್ನುತ್ತಿದ್ದಾರೆ.ಹೀಗಿರುವಾಗ ಐಜಿ ಸತ್ಯಜಿತ್ ನಾಯ್ಕ್ ಮಧ್ಯಪ್ರವೇಶ ಮಾಡಿದ್ದು, ‘ಪೊಲೀಸ್ ವೃತ್ತಿಯಲ್ಲಿರುವವರು ತಮ್ಮ ಸಮವಸ್ತ್ರವನ್ನು ಗೌರವಿಸಬೇಕು ಹಾಗೂ ಶಿಸ್ತಿಗೆ ಆದ್ಯತೆ ನೀಡಬೇಕು. ಅದ್ದರಿಂದ ಕೆಂಪಾಗಿರುವ ಕೂದಲಿನ ಬಣ್ಣವನ್ನು ಮೊದಲಿನಂತೆಯೇ ಕಪ್ಪು ಮಾಡಿಕೊಳ್ಳಿ’ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ದಾಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೊಲೀಸ್ ಕೈಪಿಡಿಯಲ್ಲಿ ಕೇಶವಿನ್ಯಾಸದ ಬಗ್ಗೆ ಯಾವುದೇ ನಿಯಮಗಳಿರದಿದ್ದರೂ ಅದು ಸರಳವಾಗಿರಬೇಕು ಎಂಬ ನಿಯಮವಿದೆ ಎಂಬುದು ಗಮನಾರ್ಹ.