ಉತ್ತರ ಕರ್ನಾಟಕಕ್ಕೆ ಈ ಬಾರಿ ಹೆಚ್ಚು ಉಷ್ಣ ಮಾರುತಗಳ ಭೀತಿ

KannadaprabhaNewsNetwork | Updated : Mar 02 2024, 08:11 AM IST

ಸಾರಾಂಶ

ಈ ವರ್ಷದ ಬೇಸಿಗೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಉಷ್ಣತೆಯಿರಲಿದ್ದು, ಉತ್ತರ ಕರ್ನಾಟಕದಲ್ಲಿ ಹಿಂದಿನ ವರ್ಷಗಳಿಗಿಂತ ಹೆಚ್ಚು ಉಷ್ಣ ಮಾರುತಗಳು ಕಾಣಿಸಿಕೊಳ್ಳಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಪಿಟಿಐ ನವದೆಹಲಿ

ಈ ವರ್ಷದ ಬೇಸಿಗೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಉಷ್ಣತೆಯಿರಲಿದ್ದು, ಉತ್ತರ ಕರ್ನಾಟಕದಲ್ಲಿ ಹಿಂದಿನ ವರ್ಷಗಳಿಗಿಂತ ಹೆಚ್ಚು ಉಷ್ಣ ಮಾರುತಗಳು ಕಾಣಿಸಿಕೊಳ್ಳಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಭಾರತದಲ್ಲಿ ಈ ಬಾರಿ ಬೇಸಿಗೆಯ ಆರಂಭದಲ್ಲೇ ಹೆಚ್ಚು ಉಷ್ಣಾಂಶ ಕಂಡುಬರಲಿದೆ. ಎಲ್‌ ನಿನೋ ಪರಿಣಾಮ ಬೇಸಿಗೆಯುದ್ದಕ್ಕೂ ಇರಲಿದೆ.

ತೆಲಂಗಾಣ, ಆಂಧ್ರಪ್ರದೇಶ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಹಾಗೂ ಮಹಾರಾಷ್ಟ್ರ ಮತ್ತು ಒಡಿಶಾದ ಕೆಲ ಪ್ರದೇಶಗಳಲ್ಲಿ ಹೆಚ್ಚು ಉಷ್ಣ ಮಾರುತಗಳು ಏಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮಾರ್ಚ್‌ ತಿಂಗಳಲ್ಲಿ ವಾಡಿಕೆಯ 29.9 ಮಿ.ಮೀ. ಬದಲು ಹೆಚ್ಚು ಮಳೆಯಾಗಲಿದೆ. ದೇಶಾದ್ಯಂತ ಈ ತಿಂಗಳಲ್ಲಿ ಶೇ.117ರಷ್ಟು ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. 

ಜೊತೆಗೆ, ಮಾರ್ಚ್‌ನಿಂದ ಮೇ ತಿಂಗಳ ಅವಧಿಯಲ್ಲಿ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ದಾಖಲಾಗಲಿದೆ. ಉತ್ತರ ಮತ್ತು ಮಧ್ಯ ಭಾರತದಲ್ಲಿ ಮಾರ್ಚ್‌ನಲ್ಲಿ ಉಷ್ಣ ಮಾರುತಗಳ ಆತಂಕ ಇಲ್ಲ ಎಂದು ತಿಳಿಸಿದೆ.

ಏಪ್ರಿಲ್‌-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಉಷ್ಣ ಮಾರುತಗಳ ಮುನ್ನೆಚ್ಚರಿಕೆ ಇನ್ನಷ್ಟು ಮಹತ್ವ ಪಡೆದಿದೆ.

ಮಧ್ಯ ಪೆಸಿಫಿಕ್‌ ಮಹಾಸಾಗರದಲ್ಲಿ ನಿರ್ದಿಷ್ಟ ಕಾಲದಲ್ಲಿ ನೀರಿನ ಉಷ್ಣಾಂಶ ಏರಿಕೆಯಾಗುವುದನ್ನು ಎಲ್ ನಿನೋ ಎನ್ನುತ್ತಾರೆ. ಈ ಬಾರಿ ಬೇಸಿಗೆಯುದ್ದಕ್ಕೂ ಇದೇ ಪರಿಸ್ಥಿತಿ ಇರುವ ಸಾಧ್ಯತೆಯಿರುವುದರಿಂದ ಉಷ್ಣ ಮಾರುತಗಳ ಸಂಖ್ಯೆ ಹೆಚ್ಚಲಿದೆ ಎನ್ನಲಾಗಿದೆ.

Share this article