ಇಂದು ಭಾರತಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌

KannadaprabhaNewsNetwork |  
Published : Dec 04, 2025, 01:05 AM ISTUpdated : Dec 04, 2025, 05:18 AM IST
Vladimir Putin

ಸಾರಾಂಶ

 ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಗುರುವಾರ 2 ದಿನಗಳ ಭೇಟಿಗೆ ದಿಲ್ಲಿಗೆ ಆಗಮಿಸಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ರಕ್ಷಣೆ, ಉಭಯ ದೇಶಗಳ ನಡುವಿನ ವ್ಯಾಪಾರ ಸೇರಿದಂತೆ ವಿವಿಧ ವಿಚಾರಗಳ ಕುರಿತು ಮಾತುಕತೆ 

 ನವದೆಹಲಿ: ಉಕ್ರೇನ್‌-ರಷ್ಯಾ ಸಮರ ವಿಶ್ವಾದ್ಯಂತ ಸುದ್ದಿ ಮಾಡುತ್ತಿರುವ ನಡುವೆಯೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಗುರುವಾರ 2 ದಿನಗಳ ಭೇಟಿಗೆ ದಿಲ್ಲಿಗೆ ಆಗಮಿಸಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ರಕ್ಷಣೆ, ಉಭಯ ದೇಶಗಳ ನಡುವಿನ ವ್ಯಾಪಾರ ಸೇರಿದಂತೆ ವಿವಿಧ ವಿಚಾರಗಳ ಕುರಿತು ಮಾತುಕತೆ ನಡೆಸಲಿದ್ದಾರೆ.ಉಕ್ರೇನ್‌-ರಷ್ಯಾ ಸಮರದ ಬಗ್ಗೆಯೂ ಕೂಡ ಈ ಮಾತುಕತೆ ವೇಳೆ ಪ್ರಸ್ತಾಪವಾಗುವ ಸಾಧ್ಯತೆ ಇದೆ.

ಏನೇನು ಕಾರ್ಯಕ್ರಮ?:

ಮೋದಿ ಅವರ ಆಹ್ವಾನದ ಹಿನ್ನೆಲೆಯಲ್ಲಿ ಪುಟಿನ್‌ ಅವರು ಗುರುವಾರ ಸಂಜೆ ಆಗಮಿಸಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಜತೆ 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಪುಟಿನ್‌ ಅವರಿಗೆ ವಿಶೇಷ ಔತಣಕೂಟ ಆಯೋಜಿಸಲಿದ್ದಾರೆ.

ಮೋದಿ-ಪುಟಿನ್‌ ಮಾತುಕತೆ ವೇಳೆ ಉಭಯ ನಾಯಕರು ರಕ್ಷಣೆ, ಭದ್ರತೆ, ವ್ಯಾಪಾರ ಮತ್ತು ನಾಗರಿಕ ಉದ್ದೇಶದ ಅಣು ಶಕ್ತಿ ಕ್ಷೇತ್ರಗಳಲ್ಲಿನ ಸಹಭಾಗಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದಾರೆ. ಕೃಷಿ, ವ್ಯಾಪಾರದ ಬಗ್ಗೆ ಒಪ್ಪಂದ ಸಾಧ್ಯತೆ ಇದೆ. ಉಕ್ರೇನ್‌ ಸಂಘರ್ಷದ ವಿಚಾರ ಕೂಡ ಮಾತುಕತೆ ವೇಳೆ ಚರ್ಚೆಗೆ ಬರುವ ನಿರೀಕ್ಷೆ ಇದೆ ಎಂದು ಸಚಿವಾಲಯ ತಿಳಿಸಿದೆ.

ಭಾರತವು ರಷ್ಯಾದಿಂದ ಮತ್ತಷ್ಟು ಎಸ್‌-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಗೆ ಆಸಕ್ತಿ ತೋರಿದೆ. ಇದಕ್ಕೆ ಕೂಡ ಸಹಿ ಬೀಳುವ ನಿರೀಕ್ಷೆ ಇದೆ. ಆಪರೇಷನ್‌ ಸಿಂದೂರ ಕಾರ್ಯಾಚರಣೆ ವೇಳೆ ಇದರ ಕಾರ್ಯವೈಖರಿ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಭೇಟಿ ಎರಡೂ ದೇಶಗಳ ನಡುವಿನ ವ್ಯೂಹಾತ್ಮಕ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಆಶಾವಾದವಿದೆ ಎಂದು ಸಚಿವಾಲಯ ಬಣ್ಣಿಸಿದೆ.

ವ್ಯಾಪಾರ ವೃದ್ಧಿ:

ಅಮೆರಿಕವು ರಷ್ಯಾದ 2 ಪ್ರಮುಖ ತೈಲ ಕಂಪನಿಗಳ ಮೇಲೆ ನಿರ್ಬಂಧ ಹೇರಿರುವ ಕಾರಣ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಮೂರನೇ ಒಂದು ಭಾಗದಷ್ಟು ತಗ್ಗಿಸಿದೆ. ಈ ಬಗ್ಗೆ ದ್ವಿಪಕ್ಷೀಯ ಮಾತುಕತೆ ವೇಳೆ ಮೋದಿ-ಪುಟಿನ್‌ ಪರಿಹಾರೋಪಾಯ ಕಂಡುಕೊಳ್ಳಬಹುದು ಎಂದು ಆಶಿಸಲಾಗಿದೆ.

ಮಂಗಳವಾರವಷ್ಟೇ ಪುಟಿನ್ ಮಾಸ್ಕೋದಲ್ಲಿ ಮಾತನಾಡಿ, ‘ಭಾರತದ ಜತೆಗಿನ ಆಮದು-ರಫ್ತು ಹೆಚ್ಚಿಸುವ ಉದ್ದೇಶವಿದೆ’ ಎಂದು ಹೇಳಿದ್ದು, ಈ ಬಗ್ಗೆ ಸುಳುಹು ನೀಡಿದ್ದಾರೆ.

ವಿದೇಶಾಂಗ ಇಲಾಖೆ ವಿಶ್ವಾಸ:

ಈ ಭೇಟಿ ಉಭಯ ದೇಶಗಳ ನಾಯಕತ್ವಕ್ಕೆ ದ್ವಿಪಕ್ಷೀಯ ಸಂಬಂಧದ ಪ್ರಗತಿಯನ್ನು ಮರುವಿಮರ್ಶೆಗೆ ವೇದಿಕೆ ಮಾಡಿಕೊಡಲಿದೆ. ವಿಶೇಷ ವ್ಯೂಹಾತ್ಮಕ ಸಹಭಾಗಿತ್ವವನ್ನು ಬಲಪಡಿಸಲಿದೆ ಮತ್ತು ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಕುರಿತು ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಪುಟಿನ್‌ ವಿರುದ್ಧ ಬ್ರಿಟನ್‌, ಫ್ರಾನ್ಸ್‌, ಜರ್ಮನಿ ದೂತರ ಲೇಖನ: ಭಾರತ ಕಿಡಿ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಡಿ.4ಕ್ಕೆ ಭಾರತಕ್ಕೆ ಆಗಮಿಸುತ್ತಿದ್ದಾರೆ. ಇದಕ್ಕೆ 2 ದಿನ ಮುನ್ನ ಭಾರತದಲ್ಲಿರುವ ಬ್ರಿಟನ್‌, ಜರ್ಮನಿ ಮತ್ತು ಫ್ರಾನ್ಸ್‌ ರಾಯಭಾರಿಗಳು ಪುಟಿನ್‌ ಯುದ್ಧೋತ್ಸಾಹ ಖಂಡಿಸಿ ಆಂಗ್ಲ ಪತ್ರಿಕೆಯಲ್ಲಿ ಜಂಟಿಯಾಗಿ ಲೇಖನ ಬರೆದಿದ್ದಾರೆ.ರಾಯಭಾರಿಗಳ ಲೇಖನಕ್ಕೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಇಲಾಖೆಯು ‘ಅತ್ಯಂತ ಅಸಹಜವಾಗಿದ್ದು’, ಲೇಖನ ‘ಸ್ವೀಕಾರಾರ್ಹವಲ್ಲ’ ಎಂದು ಕಿಡಿಕಾರಿದೆ.

ಲೇಖನದಲ್ಲೇನಿದೆ?:ಸೋಮವಾರ ಪ್ರಕಟವಾದ ಲೇಖನದಲ್ಲಿ ಮೂವರು ದೂತರು, ‘ರಷ್ಯಾ ಅಮಾನವೀಯವಾಗಿ ಉಕ್ರೇನ್‌ ಮೇಲೆ ದಾಳಿ ನಡೆಸಿ, ಸಾವಿರಾರು ಜನರ ಕಣ್ಣೀರಿಗೆ ಕಾರಣವಾಗಿದೆ. ಶಾಂತಿ ಮಾತುಕತೆ ಪ್ರಗತಿಯಲ್ಲಿದ್ದರೂ ಅತಿ ಭೀಕರ ವಾಯುದಾಳಿ ನಡೆಸಿ, ಕ್ರೌರ್ಯ ತೋರಿದೆ. ತನ್ನಲ್ಲಿನ ಹಣದುಬ್ಬರ, ಆರ್ಥಿಕ ಸಮಸ್ಯೆಗಳ ನಡುವೆಯೂ ಪುಟಿನ್‌, ಉಕ್ರೇನ್‌ನ ಭೂಮಿಯ ವಶಕ್ಕೆ ಮುಂದಾಗಿದ್ದಾರೆ. ಅದಕ್ಕಾಗಿ ಯುರೋಪ್‌ನ ವಾಯುಸೀಮೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಗ್ಯಾಸ್‌ ಮಾಸ್ಕ್‌ ಧರಿಸಿ ಅಧಿವೇಶನಕ್ಕೆ ಬಂದ ವಿಪಕ್ಷ ಸಂಸದರು!
ತನಗಿಂತಲೂ ಸುಂದರಿ ಎಂದು 6ರ ಬಾಲಕಿಯ ಕೊಂದ ಮಹಿಳೆ!