ಒಟ್ಟು 22217 ಚುನಾವಣಾ ಬಾಂಡ್‌ ಖರೀದಿ: ಎಸ್‌ಬಿಐ

KannadaprabhaNewsNetwork | Published : Mar 14, 2024 2:08 AM

ಸಾರಾಂಶ

2019ರ ಏ.1ರಿಂದ ಈ ವರ್ಷದ ಫೆ.15ರವರೆಗೆ ರಾಜಕೀಯ ಪಕ್ಷಗಳು ಒಟ್ಟು 22,217 ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ.

ಪಿಟಿಐ ನವದೆಹಲಿ

2019ರ ಏ.1ರಿಂದ ಈ ವರ್ಷದ ಫೆ.15ರವರೆಗೆ ರಾಜಕೀಯ ಪಕ್ಷಗಳು ಒಟ್ಟು 22,217 ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ. ಅವುಗಳ ಪೈಕಿ 22,030 ಬಾಂಡ್‌ಗಳನ್ನು ನಗದೀಕರಿಸಿಕೊಂಡಿವೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

ಸುಪ್ರೀಂಕೋರ್ಟ್‌ನ ಆದೇಶದಂತೆ ಬುಧವಾರ ಈ ಕುರಿತು ಅಫಿಡವಿಟ್‌ ಸಲ್ಲಿಸಿರುವ ಬ್ಯಾಂಕ್‌ನ ಚೇರ್ಮನ್‌ ದಿನೇಶ್‌ ಕುಮಾರ್‌ ಖಾರಾ, ‘ಇದೇ ವಿವರವನ್ನು ಮಾ.12ರ ವ್ಯವಹಾರದ ಅವಧಿ ಮುಗಿಯುವುದರೊಳಗೆ ಭಾರತೀಯ ಚುನಾವಣಾ ಆಯೋಗಕ್ಕೂ ಡಿಜಿಟಲ್‌ ರೂಪದಲ್ಲಿ (ಪಾಸ್‌ವರ್ಡ್‌ ಸಹಿತ) ಸಲ್ಲಿಸಲಾಗಿದೆ. ಪ್ರತಿ ಚುನಾವಣಾ ಬಾಂಡ್‌ ಅನ್ನು ಯಾವ ರಾಜಕೀಯ ಪಕ್ಷವು ಯಾವ ದಿನಾಂಕದಂದು ಖರೀದಿಸಿದೆ ಮತ್ತು ಅದರ ಮುಖಬೆಲೆ ಏನು ಎಂಬುದನ್ನು ಕೂಡ ತಿಳಿಸಲಾಗಿದೆ. ಅದೇ ರೀತಿ, ಯಾವ ದಿನಾಂಕದಂದು ಯಾವ ರಾಜಕೀಯ ಪಕ್ಷಗಳು ಎಷ್ಟು ಚುನಾವಣಾ ಬಾಂಡ್‌ಗಳನ್ನು ನಗದೀಕರಿಸಿಕೊಂಡಿವೆ ಎಂಬುದನ್ನೂ ತಿಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

2019ರ ಏ.1ರಿಂದ 2019ರ ಏ.11ರ ನಡುವೆ 3346 ಚುನಾವಣಾ ಬಾಂಡ್‌ಗಳನ್ನು ಖರೀದಿಸಲಾಗಿದ್ದು, 1609ನ್ನು ನಗದೀಕರಿಸಿಕೊಳ್ಳಲಾಗಿದೆ. 2019ರ ಏ.12ರಿಂದ ಈ ವರ್ಷದ ಫೆ.15ರ ನಡುವೆ ರಾಜಕೀಯ ಪಕ್ಷಗಳು 18,871 ಚುನಾವಣಾ ಬಾಂಡ್‌ಗಳನ್ನು ಖರೀದಿಸಿ, 20,421 ಬಾಂಡ್‌ಗಳನ್ನು ನಗದೀಕರಿಸಿಕೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಚುನಾವಣಾ ಬಾಂಡ್‌ಗಳನ್ನು ರದ್ದುಪಡಿಸಿದ್ದ ಸುಪ್ರೀಂಕೋರ್ಟ್‌, ಯಾವ ರಾಜಕೀಯ ಪಕ್ಷಗಳು ಎಷ್ಟು ಚುನಾವಣಾ ಬಾಂಡ್‌ ಖರೀದಿಸಿವೆ ಮತ್ತು ನಗದೀಕರಿಸಿಕೊಂಡಿವೆ ಎಂಬ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲು ಎಸ್‌ಬಿಐಗೆ ಸೂಚಿಸಿತ್ತು. ಅದಕ್ಕೆ ಎಸ್‌ಬಿಐ ಕಾಲಾವಕಾಶ ಕೇಳಿದಾಗ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟ್‌ ನೀಡಿದ್ದ ಗಡುವಾದ ಮಾ.12ರೊಳಗೆ ಚುನಾವಣಾ ಆಯೋಗಕ್ಕೆ ಎಸ್‌ಬಿಐ ಮಾಹಿತಿ ಸಲ್ಲಿಸಿ, ಮಾ.13ರಂದು ಆ ಕುರಿತು ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದೆ. ಸುಪ್ರೀಂಕೋರ್ಟ್‌ನ ಸೂಚನೆಯಂತೆ ಮಾ.15ರೊಳಗೆ ಚುನಾವಣಾ ಆಯೋಗವು ಈ ವಿವರಗಳನ್ನು ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಬೇಕಿದೆ.

Share this article