ಡೆಹ್ರಾಡೂನ್: ತ್ರಿಪುರ ರಾಜ್ಯದ ಇಬ್ಬರು ಯುವಕರನ್ನು ‘ಚೈನೀಸ್’ ಹಾಗೂ ‘ಮೊಮೊ’ ಎಂದು ಜರಿದ ಗುಂಪೊಂದು ಅವರನ್ನು ಹತ್ಯೆ ಮಾಡಿದ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದೆ. ಇದು ಜನಾಂಗೀಯ ಹತ್ಯೆ ಎಂದು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಇದೇ ವೇಳೆ ತ್ರಿಪುರ ಸರ್ಕಾರವು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕ್ಕೆ ಉತ್ತರಾಖಂಡ ಸಿಎಂಗೆ ಕೋರಿದೆ. ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಘಟನೆ ಖಂಡಿಸಿದ್ದಾರೆ. ತ್ರಿಪುರ ಮೂಲದ ಎಂಬಿಎ ವಿದ್ಯಾರ್ಥಿ ಏಂಜೆಲ್ ಚಕ್ಮಾ (24) ಮೃತ ವ್ಯಕ್ತಿ. ಡಿ.9ರಂದು ಈತ ಹಾಗೂ ಸೋದರ ಮೈಕೆಲ್ ಚಕ್ಮಾ ಡೆಹ್ರಾಡೂನ್‌ನ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದರು. ಆಗ ಮೂವರು ಬಂದು ಯಾವುದೋ ಕಾರಣಕ್ಕೆ ಸೋದರರ ಜತೆ ಜಗಳ ಮಾಡಿದ್ದಾರೆ.
‘ಚೈನೀಸ್’ ಹಾಗೂ ‘ಚೈನೀಸ್ ಮೊಮೊ’ ಎಂದು ಚಕ್ಮಾ ಸೋದರರ ಬಗ್ಗೆ ಲೇವಡಿ ಮಾಡಿದ್ದಾರೆ. ಆದರೂ ಸೋದರರು ತಾಳ್ಮೆಯಿಂದಿದ್ದು, ‘ನಾವು ಇಂಡಿಯನ್ಸ್’ ಎಂದಿದ್ದಾರೆ. ಆದರೂ ದುಷ್ಕರ್ಮಿಗಳು ಬ್ರೇಸ್‌ಲೆಟ್ ಹಾಗೂ ಚಾಕುವಿನಿಂದ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾರೆ. ತೀವ್ರ ಗಾಯಗೊಂಡ ಏಂಜೆಲ್ ಚಕ್ಮಾ ಡಿ.26ರಂದು ಸಾವನ್ನಪ್ಪಿದ್ದಾರೆ. ಹತ್ಯೆ ಮಾಡಿದ ಮೂವರನ್ನು ಬಂಧಿಸಲಾಗಿದೆ.