- ಅಮೆರಿಕದ ಅಂತಾರಾಷ್ಟ್ರೀಯ ಟ್ರೇಡ್ ಕೋರ್ಟ್ ಆದೇಶ
- ಇದೀಗ ಟ್ರೇಡ್ ಕೋರ್ಟಿಂದ ಹಣ ವಾಪಸ್ ನೀಡಲು ಸೂಚನೆ
ವಾಷಿಂಗ್ಟನ್: ಭಾರತವೂ ಸೇರಿ ವಿಶ್ವದ ಹಲವು ದೇಶಗಳ ಮೇಲೆ ಹೇರಲಾಗಿರುವ ಪ್ರತಿ ತೆರಿಗೆಯ ಆದೇಶ ರದ್ದಾದ ಬೆನ್ನಲ್ಲೇ, ಇದೀಗ ಅಮೆರಿಕದ ವ್ಯಾಪಾರ ನ್ಯಾಯಾಲಯವೊಂದು ಡೊನಾಲ್ಡ್ ಟ್ರಂಪ್ ಸರ್ಕಾರಕ್ಕೆ ಹೊಸ ಶಾಕ್ ನೀಡಿದೆ. ಸುಪ್ರೀಂ ಕೋರ್ಟ್ ರದ್ದು ಮಾಡಿರುವ ಪ್ರತಿ ತೆರಿಗೆ ಹೆಸರಿನಲ್ಲಿ ಆಮದುದಾರರಿಂದ ವಸೂಲಿ ಮಾಡಿರುವ 12 ಲಕ್ಷ ಕೋಟಿ ರು. ಅನ್ನು ಬಡ್ಡಿ ಸಮೇತ ವಾಪಸ್ ನೀಡುವ ಪ್ರಕ್ರಿಯೆ ಆರಂಭಿಸುವಂತೆ ಟ್ರಂಪ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.ಮ್ಯಾನ್‌ಹಟನ್‌ನಲ್ಲಿರುವ ಅಮೆರಿಕದ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂಧಿಸಿದ ನ್ಯಾಯಾಲಯದ ನ್ಯಾಯಮೂರ್ತಿ ರಿಚರ್ಡ್ ಈಟನ್ ಅವರು ಈ ಆದೇಶ ನೀಡಿದ್ದಾರೆ. ಅಮೆರಿಕಕ್ಕೆ ಆಮದು ಮಾಡಲಾಗಿರುವ ವಸ್ತುಗಳ ಮೇಲಿನ ಮೌಲ್ಯವನ್ನು ಲೆಕ್ಕಹಾಕಿ. ಆ ಬಳಿಕ ಪ್ರತಿ ತೆರಿಗೆ ಹೆಸರಲ್ಲಿ ಎಷ್ಟು ಹಣ ವಸೂಲಿ ಮಾಡಲಾಗಿದೆಯೋ ಆ ಹಣವನ್ನು ಬಡ್ಡಿ ಸಮೇತ ವಾಪಸ್ ನೀಡಲು ಕ್ರಮ ಕೈಗೊಳ್ಳಿ ಎಂದು ಕಸ್ಟಮ್ಸ್ ಇಲಾಖೆಗೆ ಸೂಚನೆ ನೀಡಿದೆ.
ಸುಮಾರು 3 ಲಕ್ಷ ಆಮದುದಾರರು ಅಮೆರಿಕದ ಪ್ರತಿ ತೆರಿಗೆಯ ಬಿಸಿ ಅನುಭವಿಸಿದ್ದಾರೆ. ಇದರಲ್ಲಿ ಹೆಚ್ಚಿನವರು ಸಣ್ಣ ಉದ್ದಿಮೆದಾರರು.
ಕಳೆದ ವರ್ಷ ಏಪ್ರಿಲ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ವಿಶೇಷ ಅಧಿಕಾರ ಬಳಸಿ ಭಾರತವೂ ಸೇರಿ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳ ಮೇಲೂ ಪ್ರತಿ ತೆರಿಗೆ ವಿಧಿಸಿದ್ದರು. ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಈ ವೇಳೆ ಅತಿ ಹೆಚ್ಚು ಅಂದರೆ ಶೇ.25ರಷ್ಟು ತೆರಿಗೆ ವಿಧಿಸಲಾಗಿತ್ತು.