ವಾಷಿಂಗ್ಟನ್: ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಚುನಾಯಿತ ಅಧ್ಯಕ್ಷ ಟ್ರಂಪ್ ಈಗಾಗಲೇ ತಮ್ಮ ಸರ್ಕಾರದಲ್ಲಿ ಯಾರು ಇರಬೇಕು ಎಂಬ ಪಟ್ಟಿ ಸಿದ್ಧಪಡಿಸಲು ಪ್ರಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ಕ್ಯಾಬಿನೆಟ್ ಹಾಗೂ ಆಪ್ತ ಸಲಹಾ ಮಂಡಳಿಯಲ್ಲಿ ಯಾರು ಇರಬೇಕು ಎಂಬ ಪಟ್ಟಿಯ ಸಿದ್ಧತೆಯಲ್ಲಿ ಅವರು ತೊಡಗಿದ್ದಾರೆ. ಈ ಹಿಂದೆ ಟ್ರಂಪ್ ವಿರುದ್ಧ ಸ್ಪರ್ಧಿಸಲು ಯತ್ನಿಸಿ ಹಿಂದೆ ಸರಿದಿದ್ದ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ, ಈ ಹಿಂದೆ ಸಚಿವೆ ಆಗಿದ್ದ ತುಳಸಿ ಗಬ್ಬಾರ್ಡ್ ಅವರು ಸಂಪುಟದಲ್ಲಿ ಸ್ಥಾನ ಪಡೆಯಬಹುದು. ಇದರ ಜತೆಗೆ ಟ್ರಂಪ್ ಗೆಲುವಿಗೆ ಶ್ರಮಿಸಿದ ವಿಶ್ವದ ನಂ.1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್‌ಗೂ ಯಾವುದಾದರೂ ಒಂದು ಸ್ಥಾನಮಾನ ದೊರಕಬಹುದು ಎಂದು ಮೂಲಗಳು ಹೇಳಿವೆ.
ವಿದೇಶಾಂಗ ಸಚಿವ ಹುದ್ದೆಗೆ ಸೆನೆಟರ್ ಮಾರ್ಕೊ ರೂಬಿಯೊ ಮತ್ತು ರಾಷ್ಟ್ರೀಯ ಗುಪ್ತಚರ ಮಾಜಿ ನಿರ್ದೇಶಕ ರಿಚರ್ಡ್ ಗ್ರೆನೆಲ್ ಅವರನ್ನು ಪರಿಗಣಿಸುತ್ತಿದೆ ಎಂದು ಮೂಲಗಳು ಹೇಳಿವೆ.
==
ಸೋಲೊಪ್ಪುವೆ, ಆದರೆ ಹೋರಾಟ ನಿಲ್ಲಿಸಲ್ಲ: ಕಮಲಾ
ವಾಷಿಂಗ್ಟನ್ : ಡೊನಾಲ್ಡ್ ಟ್ರಂಪ್ ಅವರ ಚುನಾವಣೆಯಲ್ಲಿ ಸೋಲನ್ನು ಒಪ್ಪಿಕೊಂಡ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮೊದಲ ಪ್ರತಿಕ್ರಿಯೆ ನೀಡಿದ್ದು, ‘ನಾನು ಚುನಾವಣೆಯಲ್ಲಿ ಆದ ಸೋಲು ಒಪ್ಪಿಕೊಳ್ಳುವೆ. ನನ್ನ ಹೋರಾಟಕ್ಕೆ ಸೋಲಾಗಿದೆ ಎಂಬುದನ್ನು ಒಪ್ಪಲ್ಲ. ಮುಂದೆಯೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಹೇಳಿದ್ದಾರೆ. ಈ ಮೂಲಕ ತಾವು ಟ್ರಂಪ್ ವಿರುದ್ಧ ಹೋರಾಟ ಮುಂದುವರಿಸುವ ಸುಳಿವು ನೀಡಿದ್ದಾರೆ.
ಬುಧವಾರ ರಾತ್ರಿ (ಭಾರತ ಕಾಲಮಾನ ಗುರುವಾರ) ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನನಗೆ ಹಾಗೂ ನಿಮಗೆ ನಿರಾಶೆ ಆಗಿದೆ ನಿಜ. ನಿಮ್ಮ ಬೆಂಬಲ ನೋಡಿ ನನಗೆ ಹೃದಯ ತುಂಬಿ ಬಂದಿದೆ. ಆದರೆ ಫಲಿತಾಂಶ ನಮ್ಮ ಅಪೇಕ್ಷೆಗೆ ತಕ್ಕಂತೆ ಬಂದಿಲ್ಲ. ಆದರೂ ಅದನ್ನು ನಾವು ಒಪ್ಪಿಕೊಳ್ಳಲೇಬೇಕು. ಟ್ರಂಪ್ ಅವರಿಗೆ ಶಾಂತ ರೀತಿಯಲ್ಲಿ ಅಧಿಕಾರ ಹಸ್ತಾಂತರ ಮಾಡುವುದಾಗಿ ನಾನು ಹೇಳಿದ್ದೇನೆ. ದೇಶದ ಸಂವಿಧಾನಕ್ಕೆ ನಾವು ಬದ್ಧರಾಗಿರಬೇಕು’ ಎಂದರು.‘ನಾನು ಚುನಾವಣೆಯಲ್ಲಿ ಸೋಲೊಪ್ಪಿರಬಹುದು. ಆದರೆ ಹೋರಾಟದಿಂದ ಹಿಂದೆ ಸರಿಯಲ್ಲ. ಚುನಾವಣೆ ವೇಳೆ ನಾನು ಮಾಡಿದ ಹೋರಾಟಕ್ಕೆ ಸೋಲಾಗಿದೆ ಎಂಬುದನ್ನು ನಾನು ಒಪ್ಪುವುದಿಲ್ಲ’ ಎಂದು ಭಾವುಕರಾಗಿ ಹೇಳಿದರು.
ಬೈಡೆನ್ ಪ್ರಶಂಸೆ : ಈ ನಡುವೆ, ಕಮಲಾ ಅತ್ಯಂತ ಕ್ಲಿಷ್ಟ ಸಂದರ್ಭದಲ್ಲಿ ಅಭ್ಯರ್ಥಿಯಾದರು ಹಾಗೂ ಉತ್ತಮವಾಗಿ ಹೋರಾಡಿದರು ಎಂದು ಅಧ್ಯಕ್ಷ ಜೋ ಬೈಡೆನ್ ಪ್ರಶಂಸಿಸಿದ್ದಾರೆ. ಬೈಡೆನ್ ಹಿಂದೆ ಸರಿದ ಕಾರಣ ಅವರ ಸ್ಥಾನದಲ್ಲಿ ಕಮಲಾ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಆಗಿದ್ದರು.
ಟ್ರಂಪ್‌ಗೆ ಬೈಡೆನ್, ಕಮಲಾ ಶುಭಾಶಯ: ಈ ನಡುವೆ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರತ್ಯೇಕವಾಗಿ ಫೋನ್ ಕರೆ ಮಾಡಿದ ಕಮಲಾ ಹ್ಯಾರಿಸ್ ಹಾಗೂ ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರು, ಗೆಲುವಿಗಾಗಿ ಅಭಿನಂದನೆ ಸಲ್ಲಿಸಿದರು. ಅಲ್ಲದೆ, ಬೈಡೆನ್ ಅವರು ಸುರಳೀತ ಅಧಿಕಾರ ಸಹ್ತಾಂತರದ ಭರವಸೆ ನೀಡಿದರು.