ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಇದೀಗ ಭಾರತವು ತೆರಿಗೆ ಕಡಿತಕ್ಕೆ ಒಪ್ಪಿಕೊಂಡಿದೆ’ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನ್ಯೂಯಾರ್ಕ್/ವಾಷಿಂಗ್ಟನ್: ‘ಅಮೆರಿಕದ ವಸ್ತುಗಳ ಮೇಲೆ ಭಾರಿ ತೆರಿಗೆ ಹೇರುತ್ತಿರುವ ಭಾರತದ ವಿರುದ್ಧ ನಾವೂ ಕ್ರಮ ಜರುಗಿಸುತ್ತೇವೆ. ಭಾರತದ ವಸ್ತುಗಳಿಗೆ ಏ.2ರಿಂದ ಹೆಚ್ಚಿನ ಪ್ರತಿತೆರಿಗೆ ಹೇರುತ್ತೇವೆ’ ಎಂದು ಇತ್ತೀಚೆಗೆ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಇದೀಗ ಭಾರತವು ತೆರಿಗೆ ಕಡಿತಕ್ಕೆ ಒಪ್ಪಿಕೊಂಡಿದೆ’ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಶುಕ್ರವಾರ ಮಾತನಾಡಿದ ಅವರು, ‘ಭಾರತವು ಅತಿ ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಕಾರಣ ನಮ್ಮ ವಸ್ತುಗಳನ್ನು ಮಾರಾಟ ಮಾಡುವುದೇ ಕಷ್ಟಕರವಾಗಿದೆ. ಆದರೆ ಇದೀಗ ಅವರು ತೆರಿಗೆ ಕಡಿತಕ್ಕೆ ಒಪ್ಪಿದ್ದಾರೆ. ಏಕೆಂದರೆ ಅವರ ಬಣ್ಣವನ್ನು ಯಾರೋ ಬಯಲು ಮಾಡಿದ್ದಾರೆ’ ಎಂದರು.
‘ಅಮೆರಿಕವು ಆರ್ಥಿಕ, ಹಣಕಾಸು ಮತ್ತು ವ್ಯಾಪಾರ ವಿಚಾರದಲ್ಲಿ ವಿಶ್ವದ ಎಲ್ಲಾ ದೇಶಗಳಿಂದಲೂ ಮೋಸಕ್ಕೊಳಗಾಗಿದೆ. ಕೆನಡಾ, ಮೆಕ್ಸಿಕೋ, ಭಾರತ ಹೀಗೆ ಹಲವು ದೇಶಗಳು ನಮ್ಮ ಮೇಲೆ ಭಾರೀ ತೆರಿಗೆ ವಿಧಿಸುತ್ತಿವೆ. ಭಾರತದಲ್ಲಿ ನಾವು ಯಾವುದೇ ಉತ್ಪನ್ನಗಳನ್ನು ಮಾರಾಟ ಮಾಡಲು ಆಗುತ್ತಿಲ್ಲ. ಭಾರತವು ಸಂಪೂರ್ಣವಾಗಿ ಆರ್ಥಿಕವಾಗಿ ನಿರ್ಬಂಧಿತ ದೇಶವಾಗಿದ್ದು, ಅದರೊಳಗೆ ನಮ್ಮ ವ್ಯಾಪಾರ ತೀರಾ ಕಡಿಮೆ ಇದೆ. ಆದರೆ ಅವರಿಗೀಗ ತೆರಿಗೆ ಕಡಿತಕ್ಕೆ ಒಪ್ಪಿಕೊಂಡಿದ್ದಾರೆ . ಏಕೆಂದರೆ, ಅವರು ಏನು ಮಾಡುತ್ತಿದ್ದಾರೆಂಬುದನ್ನು ಯಾರೋ ಒಬ್ಬರು ಬಯಲು ಮಾಡಿದ್ದಾರೆ’ ಎಂದು ಟ್ರಂಪ್ ಹೇಳಿದರು.
‘ಭಾರತ ಭಾರೀ ತೆರಿಗೆ ವಿಧಿಸುವ ದೇಶ’ ಎಂದು ಆರೋಪಿಸುತ್ತಿರುವುದು ಟ್ರಂಪ್ ಇದು ಮೂರನೇ ಬಾರಿ. ಭಾರತವೂ ಸೇರಿ ಅಮೆರಿಕದ ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ವಿಧಿಸುವ ದೇಶಗಳಿಗೆ ಏ.2ರಿಂದ ಪ್ರತಿ ತೆರಿಗೆ ವಿಧಿಸುವುದಾಗಿ ಟ್ರಂಪ್ ಈಗಾಗಲೇ ಘೋಷಿಸಿದ್ದಾರೆ.
ತೆರಿಗೆ ಕಡಿತ ವಿಚಾರದಲ್ಲಿ ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ : ಕಾಂಗ್ರೆಸ್
ನವದೆಹಲಿ: ಭಾರತವು ತೆರಿಗೆ ಕಡಿತಕ್ಕೆ ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಬೆನ್ನಲ್ಲೇ ಈ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಅವರು ವ್ಯಾಪಾರ ವಿಚಾರದ ಮಾತುಕತೆಗಾಗಿ ವಾಷಿಂಗ್ಟನ್‌ನಲ್ಲಿದ್ದಾರೆ. ಇದೇ ವೇಳೆ ಟ್ರಂಪ್ ಅವರು, ಭಾರತವು ತೆರಿಗೆ ಕಡಿತಕ್ಕೆ ಒಪ್ಪಿಕೊಂಡಿದೆ ಟ್ರಂಪ್ ಎಂದು ಹೇಳಿದ್ದಾರೆ. ಮೋದಿ ಸರ್ಕಾರ ಯಾವುದಕ್ಕೆಲ್ಲ ಒಪ್ಪಿಗೆ ಕೊಟ್ಟಿದೆ? ಭಾರತದ ರೈತರು ಮತ್ತು ಉತ್ಪಾದಕರ ಹಿತಾಸಕ್ತಿ ಬಲಿಕೊಡಲಾಗಿದೆಯೇ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ.
ಜತೆಗೆ ಮಾ.10ರಂದು ಅಧಿವೇಶನ ಪುನರ್ ಆರಂಭವಾಗಲಿದ್ದು, ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸುಂಕ ಕಡಿತಕ್ಕೆ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ?
ನವದೆಹಲಿ: ಭಾರತ-ಅಮೆರಿಕ ನಡುವೆ ಆಮದು ವಸ್ತುಗಳ ತೆರಿಗೆ ಸಂಘರ್ಷದ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವೆ, ತೆರಿಗೆ ಕಡಿಮೆ ಮಾಡುವ ಕುರಿತ ವ್ಯಾಪಾರ ಒಪ್ಪಂದ ನಡೆವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಈಗಾಗಲೇ ಆಸ್ಟ್ರೇಲಿಯಾ, ಯುಎಇ, ಸ್ವಿಟ್ಜರ್ಲೆಂಡ್, ನಾರ್ವೆ ಮುಂತಾದ ಪ್ರಮುಖ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಭಾರತವು ತನ್ನ ಸುಂಕ ಕಡಿಮೆ ಮಾಡಿದೆ. ಯುರೋಪಿಯನ್ ಒಕ್ಕೂಟ ಮತ್ತು ಬ್ರಿಟನ್ ಜತೆಗೂ ಇದೇ ರೀತಿಯ ಮಾತುಕತೆ ಪ್ರಸ್ತುತ ನಡೆಯುತ್ತಿದೆ. ಅದೇ ರೀತಿ ಅಮೆರಿಕದ ಜತೆಗೂ ಮಾತುಕತೆ ನಡೆಯಬಹುದು ಎಂದು ಮೂಲಗಳು ಹೇಳಿವೆ.