ವಾಷಿಂಗ್ಟನ್ : ಒಂದು ವೇಳೆ ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಭಾರತವು ಭಾರೀ ತೆರಿಗೆ ಪಾವತಿಸುವುದು ಅನಿವಾರ್ಯ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಎಚ್ಚರಿಸಿದ್ದಾರೆ.
ಇದೇ ವೇಳೆ ‘ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಭರವಸೆ ನೀಡಿದ್ದಾರೆ’ ಎಂದು ಟ್ರಂಪ್ 3ನೇ ಬಾರಿ ಹೇಳಿದ್ದಾರೆ. ಈ ರೀತಿ ಮೋದಿ ಹೇಳಿಲ್ಲ ಎಂದು ಕಳೆದ ವಾರ ಭಾರತ ಸರ್ಕಾರ ಸ್ಪಷ್ಟಪಡಿಸಿದರೂ ಅದೇ ಮಾತನ್ನು ಟ್ರಂಪ್ ಪುನರುಚ್ಚರಿಸಿದ್ದಾರೆ.
ಏರ್‌ಫೋರ್ಸ್ ಒನ್‌ರಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಪ್ರಧಾನಿ ಮೋದಿ ಅವರು ಭರವಸೆ ನೀಡಿದ್ದಾರೆ. ಒಂದು ವೇಳೆ ಅವರು ಆ ರೀತಿ ಮಾಡದಿದ್ದರೆ ಭಾರತಕ್ಕೆ ಭಾರೀ ತೆರಿಗೆ ಪಾವತಿಸುವುದು ಅನಿವಾರ್ಯ.’ ಎಂದರು.
‘ಮೋದಿ ಆ ರೀತಿ ಭರವಸೆ ನೀಡಿಲ್ಲವಂತೆ’ ಎಂಬ ಭಾರತದ ಸ್ಪಷ್ಟೀಕರಣದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ‘ಭಾರತ ಆ ರೀತಿ ಹೇಳಿದೆ ಎಂಬುದನ್ನು ನಾನು ನಂಬಲ್ಲ’ ಎಂದರು.
ಕಳೆದ ವಾರವಷ್ಟೇ ಟ್ರಂಪ್ ಅವರು ಭಾರತವು ರಷ್ಯಾದಿಂದ ತೈಲ ಖರೀದಿ ಸ್ಥಗಿತಗೊಳಿಸುವುದಾಗಿ ತಿಳಿಸಿದೆ ಎಂದು ಹೇಳಿಕೊಂಡಿದ್ದರು. ಆದರೆ, ಮೋದಿ ಮತ್ತು ಟ್ರಂಪ್ ನಡುವೆ ಯಾವುದೇ ದೂರವಾಣಿ ಕರೆ ನಡೆದಿರುವ ಕುರಿತು ಮಾಹಿತಿ ಇಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯವು ಸ್ಪಷ್ಟನೆ ನೀಡಿತ್ತು.
ಭಾರತ-ಪಾಕ್ ಸಮರ ನಿಲ್ಲಿಸಿದೆ: ಟ್ರಂಪ್ ಮತ್ತದೇ ರಾಗ
ವಾಷಿಂಗ್ಟನ್ : ಭಾರತ ಮತ್ತು ಪಾಕ್ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ. ಇಬ್ಬರೂ ಕಾದಾಡಿಕೊಂಡು 7 ವಿಮಾನ ಹೊಡೆದುರುಳಿಸಿದ್ದರು. ನಾನು ಹಾಕಿದ ಶೇ.200ರಷ್ಟು ತೆರಿಗೆ ಬೆದರಿಕೆಗೆ ಆ ಎರಡೂ ಅಣ್ವಸ್ತ್ರ ದೇಶಗಳು ಯುದ್ಧ ನಿಲ್ಲಿಸಿದವು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನಃ ಹೇಳಿದ್ದಾರೆ.
ಫಾಕ್ಸ್ ನ್ಯೂಸ್‌ಗೆ ಸಂದರ್ಶನ ನೀಡಿದ ಅವರು, ‘ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವೇಳೆ ಏಳು ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಅವರು ಅಣ್ವಸ್ತ್ರ ಯುದ್ಧದತ್ತ ಹೊರಳುತ್ತಿದ್ದರು. ಆದರೆ, ನಾನು ಎರಡೂ ದೇಶಗಳಿಗೆ ಹಾಕಿದ ಭಾರೀ ತೆರಿಗೆ ಬೆದರಿಕೆಯಿಂದಾಗಿ ಯುದ್ಧ ನಿಂತಿತು’ ಎಂದರು.‘ಒಂದು ವೇಳೆ ನೀವು ಯುದ್ಧ ಮುಂದುವರಿಸಿದರೆ ನಾನು ನಿಮ್ಮ ಜತೆ ವ್ಯಾಪಾರ ಮಾಡುವುದಿಲ್ಲ. ನಾವು ನಿಮ್ಮ ಮೇಲೆ ಶೇ.200ರಷ್ಟು ತೆರಿಗೆ ಹಾಕುತ್ತೇವೆ. ನೀವು ವ್ಯಾಪಾರ ಮಾಡುವುದನ್ನು ಅಸಾಧ್ಯವಾಗಿ ಮಾಡಿಬಿಡುತ್ತೇವೆ ಎಂದು ಎಚ್ಚರಿಸಿದ್ದೆ’ ಎಂದು ಟ್ರಂಪ್ ತಿಳಿಸಿದರು.
ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ತಾನೇ ನಿಲ್ಲಿಸಿದ್ದಾಗಿ ಟ್ರಂಪ್ ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ ಭಾರತ ಮಾತ್ರ ಪಾಕಿಸ್ತಾನ ಜತೆಗಿನ ಕದನ ವಿರಾಮದಲ್ಲಿ ಮೂರನೇ ರಾಷ್ಟ್ರದ ಪಾತ್ರ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
ಪುಟಿನ್ ಷರತ್ತಿಗೆ ಒಪ್ಪಿ, ಇಲ್ದಿದ್ರೆ ವಿನಾಶ: ಜೆಲೆನ್ಸ್ಕಿಗೆ ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನಿ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿನಡುವೆ ಅ.17ರಂದು ಶ್ವೇತಭವನದಲ್ಲಿ ನಡೆದ ಸಭೆಯು ಕೂಗಾಟದಲ್ಲಿ ಕೊನೆಗೊಂಡಿದೆ ಎಂಬ ಮಾಹಿತಿ ತಡವಾಗಿ ಲಭಿಸಿದೆ. ‘ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಕಿರುವ ಷರತ್ತುಗಳಿಗೆ ಒಪ್ಪಿ ಕದನವಿರಾಮ ಮಾಡಿಕೊಳ್ಳಿ. ಇಲ್ಲದಿದ್ದರೆ ಅವರು ಉಕ್ರೇನ್ ಅನ್ನು ನಾಶ ಮಾಡುತ್ತಾರೆ’ ಎಂದು ಜೆಲೆನ್ಸ್ಕಿಗೆ ಟ್ರಂಪ್ ಎಚ್ಚರಿಸಿದರು ಎಂದು ಗೊತ್ತಾಗಿದೆ.ಕಳೆದ ಫೆಬ್ರವರಿಯಲ್ಲೂ ಇದೇ ರೀತಿ ಉಭಯ ನಾಯಕರು ಶ್ವೇತಭವನದಲ್ಲಿ ಕೂಗಾಡಿಕೊಂಡಿದ್ದರು. ಅದು ಅ.17ರಂದು ನಡೆದ ರಹಸ್ಯ ಸಭೆಯಲ್ಲೂ ಪುನರಾವರ್ತನೆ ಆಗಿದೆ. ‘ಡಾನ್‌ಬಾಸ್ ಪ್ರದೇಶವನ್ನು ನೀವು ರಷ್ಯಾಗೆ ಬಿಟ್ಟುಕೊಡಬೇಕು. ರಷ್ಯಾದ ಕದನ ವಿರಾಮದ ಷರತ್ತುಗಳನ್ನು ನೀವು ಒಪ್ಪಿಕೊಳ್ಳಬೇಕು. ನೀವು ಅದಕ್ಕೆ ನಿರಾಕರಿಸಿದರೆ ನಿಮ್ಮನ್ನು ಪುಟಿನ್ ನಾಶಪಡಿಸುತ್ತಾರೆ ಎಂದು ಟ್ರಂಪ್ ಕೂಗಾಡಿದರು’ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.