ವಾಷಿಂಗ್ಟನ್: ಅಮೆರಿಕದ ಆರ್ಥಿಕ ತಜ್ಞ ರಿಚರ್ಡ್ ವೂಲ್ಫ್ ಅವರು ಭಾರತದ ಮೇಲಿನ ಅಮೆರಿಕದ ತೆರಿಗೆ ದಾಳಿಯನ್ನು ‘ಆನೆ ಮೇಲೆ ಇಲಿಯ ದಾಳಿ’ಗೆ ಹೋಲಿಸಿದ್ದಾರೆ. ಒಂದು ವೇಳೆ ಅಮೆರಿಕವು ಬಾಗಿಲು ಮುಚ್ಚಿದರೆ ಭಾರತವು ತನ್ನ ಉತ್ಪನ್ನಗಳನ್ನು ವಿಶ್ವದ ಬೇರಿನ್ಯಾವುದಾದರೂ ದೇಶಕ್ಕೆ ಮಾರಾಟ ಮಾಡುತ್ತದೆ. ಶೇ.50ರಷ್ಟು ತೆರಿಗೆಯಂಥ ಕ್ರಮಗಳು ಬ್ರಿಕ್ಸ್ ದೇಶಗಳನ್ನು ಮತ್ತಷ್ಟು ಬಲಪಡಿಸುತ್ತವಯೇ ಹೊರತು ಬೇರಿನ್ನೇನೂ ಅಲ್ಲ ಎಂದು ಎಚ್ಚರಿಸಿದ್ದಾರೆ.
ಭಾರತದ ಜತೆಗೆ ಅಮೆರಿಕವು ವಿಶ್ವದ ಕಠಿಣ ವ್ಯಕ್ತಿಯ ರೀತಿಯಲ್ಲಿ ವರ್ತನೆ ತೋರುತ್ತಿದೆ. ಆದರೆ ಈ ರೀತಿ ವರ್ತಿಸುವ ಮೂಲಕ ಅಮೆರಿಕ ತನ್ನ ಕಾಲ ಮೇಲೆ ತಾನೇ ಗುಂಡು ಹೊಡೆದುಕೊಳ್ಳುತ್ತಿದೆ. ಬ್ರಿಕ್ಸ್ ಸಂಘಟನೆಯನ್ನು ಪಶ್ಚಿಮದೇಶಗಳಿಗೆ ಪರ್ಯಾಯ ಆರ್ಥಿಕ ಶಕ್ತಿಯಾಗಿ ಬೆಳೆಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಸಂಸ್ಥೆ ಪ್ರಕಾರ ಭಾರತವು ವಿಶ್ವದ ಅತಿದೊಡ್ಡ ದೇಶಗಳಲ್ಲೊಂದು. ಇಂಥ ದೇಶಕ್ಕೆ ಏನು ಮಾಡಬೇಕೆಂದು ಅಮೆರಿಕ ನಿರ್ದೇಶನ ನೀಡುತ್ತಿರುವುದು ಒಂದು ರೀತಿಯಲ್ಲಿ ಇಲಿಯು ಆನೆಗೆ ಮುಷ್ಟಿಯಲ್ಲಿ ಗುದ್ದಿದಂತೆ ಎಂದು ಹೇಳಿದ್ದಾರೆ.
ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕಾಗಿ ಡೊನಾಲ್ಡ್ ಟ್ರಂಪ್ ಅವರು ಭಾರತದ ವಸ್ತುಗಳ ಮೇಲೆ ಶೇ.50ರಷ್ಟು ತೆರಿಗೆ ವಿಧಿಸುತ್ತಿದ್ದಾರೆ. ಭಾರತದ ಇಂಧನ ವ್ಯವಹಾರದ ಮೇಲೆ ಟ್ರಂಪ್ ಒತ್ತಡ ಹಾಕುತ್ತಿದ್ದಾರೆ. ಈ ಮೂಲಕ ರಷ್ಯಾ-ಉಕ್ರೇನ್ ಯುದ್ಧಕ್ಕೆ ಅಂತ್ಯ ಹಾಡಲು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಅಮೆರಿಕವು ಭಾರತದ ವಸ್ತುಗಳ ಮೇಲೆ ನಿರ್ಬಂಧವೇನಾದರೂ ಹೇರಿದರೆ ಅವರು ಬೇರೆ ದೇಶಗಳ ಕಡೆಗೆ ತಿರುಗುತ್ತಾರೆ. ಅಮೆರಿಕದ ಈ ರೀತಿಯ ಕ್ರಮಗಳು ಕೇವಲ ಬ್ರಿಕ್ಸ್ ದೇಶಗಳನ್ನಷ್ಟೇ ಬಲಪಡಿಸಲಿದೆ. ಸೋವಿಯತ್ ಒಕ್ಕೂಟದ ಕಾಲದಿಂದಲೂ ಭಾರತವು ಅಮೆರಿಕದ ಜತೆಗೆ ಸಂಬಂಧ ಕಾಯ್ದುಕೊಂಡು ಬಂದಿದೆ ಎಂದಿರುವ ವೂಲ್ಫ್ ಅವರು, ಅಮೆರಿಕದ ಆರ್ಥಿಕ ತಜ್ಞರಿಗೆ, ನೀವು ವಿಭಿನ್ನ ಎದುರಾಳಿಯ ಜತೆಗೆ ಆಟ ಆಡುತ್ತಿದ್ದೀರಿ ಎಂದು ಎಚ್ಚರಿಸಿದ್ದಾರೆ.