ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡು ತಯಾರಿಕೆಯಲ್ಲಿ ಕಳಪೆ ಗುಣಮಟ್ಟದ ತುಪ್ಪ ಬಳಕೆಯಾಗಿದೆ ಎಂದು ತಿರುಪತಿ ತಿರುಮಲ ದೇವಸ್ಥಾನ ಮಂಡಳಿ (ಟಿಟಿಡಿ) ಖಚಿತಪಡಿಸಿದೆ.
ತಿರುಮಲ: ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡು ಪ್ರಸಾದ ತಯಾರಿಕೆಗೆ ಕಳಪೆ ಗುಣಮಟ್ಟದ ತುಪ್ಪ ಬಳಕೆ ಮಾಡಿದ್ದು ನಿಜ ಎಂದು ದೇಗುಲದ ಉಸ್ತುವಾರಿ ಹೊತ್ತಿರುವ ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಖಚಿತಪಡಿಸಿದೆ.
ಗುರುವಾರ ಟಿಡಿಪಿ ನಾಯಕರು, ಗುಜರಾತ್‌ನ ಪ್ರಯೋಗಾಲಯದ ವರದಿ ಪ್ರಸ್ತಾಪಿಸಿ, ಹಿಂದಿನ ಜಗನ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆದರೆ ಇದೀಗ ಈ ವಿಷಯವನ್ನು ಸ್ವತಃ ಟಿಟಿಡಿ ಖಚಿತಪಡಿಸಿದೆ.
ಇನ್ನೊಂದೆಡೆ ದೇಗುಲದಲ್ಲಿ ಕಳಪೆ ಗುಣಮಟ್ಟದ ಪ್ರಸಾದ ತಯಾರಿ ಬಗ್ಗೆ ಹಿಂದಿನ ಟಿಟಿಡಿ ಮುಖ್ಯಸ್ಥರು ಮತ್ತು ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದೆ. ಆದರೆ ಅದು ಪ್ರಯೋಜನಕ್ಕೆ ಬಂದಿರಲಿಲ್ಲ. ಅದರ ಬದಲಾಗಿ ನನ್ನ ವಿರುದ್ಧವೇ ಸುಳ್ಳು ಆರೋಪ ಮಾಡಿ ಕೆಲಸದಿಂದ ಕಿತ್ತುಹಾಕಲಾಗಿತ್ತು ಎಂದು ತಿರುಪತಿ ದೇಗುಲದ ಮಾಜಿ ಮುಖ್ಯ ಅರ್ಚಕ ರಮಣ ದೀಕ್ಷಿತುಲು ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಕಳಪೆ ಗುಣಮಟ್ಟದ ವಸ್ತು ಬಳಸಿ ಲಡ್ಡು ತಯಾರಿಸಿದ್ದು ನಿಜ ಎಂದು ಹೇಳಿದ್ದಾರೆ.
ಕಳಪೆ ತುಪ್ಪ:
ಲಡ್ಡು ವಿವಾದದ ಕುರಿತು ಮೊದಲ ಬಾರಿ ಪ್ರತಿಕ್ರಿಯೆ ನೀಡಿರುವ ಟಿಟಿಡಿಯ ಕಾರ್ಯನಿರ್ವಹಣಾಧಿಕಾರಿ ಜೆ.ಶ್ಯಾಮಲ ರಾವ್ ‘ಪ್ರಸಾದದ ಮಾದರಿಯಲ್ಲಿ ಕಲಬೆರಕೆ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ದೇಗುಲದ ಸರಬರಾಜು ಮಾಡುತ್ತಿದ್ದ ತುಪ್ಪವನ್ನು ಪರೀಕ್ಷೆಗಾಗಿ ಗುಜರಾತ್‌ನ ಆನಂದ್‌ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ವೇಳೆ ತುಪ್ಪ ಸರಬರಾಜು ಮಾಡುತ್ತಿದ್ದ ನಾಲ್ಕು ಸಂಸ್ಥೆಗಳ ಪೈಕಿ ಒಂದು ಸಂಸ್ಥೆ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ’ ಎಂದು ಹೇಳಿದ್ದಾರೆ.ತುಪ್ಪ ಸರಬರಾಜು ಮಾಡುವ ತಮಿಳುನಾಡು ಮೂಲದ ರಾಜ್ ಮಿಲ್ಕ್- ಎ.ಆರ್. ಡೈರಿ ಫುಡ್ ಕಂಪನಿ ನಮ್ಮ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಕಂಪನಿಯ ನಾಲ್ಕು ಲಾರಿಗಳಲ್ಲಿನ ತುಪ್ಪ ಕಲಬೆರಕೆಯಾಗಿದ್ದು ದೃಢಪಟ್ಟಿದೆ. ಶೀಘ್ರವೇ ನಾವು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಿದ್ದೇವೆ’ ಎಂದು ರಾವ್ ಹೇಳಿದ್ದಾರೆ.
ಪರಿಶೀಲನೆಗೆ ಸಮಿತಿ:ಲಡ್ಡು ತಯಾರಿಕೆಗೆ ಬಳಸಿದ ತುಪ್ಪದಲ್ಲಿ ದನ ಹಾಗೂ ಹಂದಿಯ ಕೊಬ್ಬು ಹಾಕಲಾಗಿತ್ತು ಎಂದು ವರದಿ ಬೆನ್ನಲ್ಲೇ ಲಡ್ಡು ತಯಾರಿಕೆಗೆ ಬಳಸಲಾಗುವ ತುಪ್ಪದ ಪರಿಶೀಲನೆಗೆ ಟಿಟಿಡಿ ಸಮಿತಿ ರಚನೆ ಮಾಡಿದೆ. ಈ ಸಮಿತಿ ಲಡ್ಡುವಿಗೆ ಬಳಸುವ ತುಪ್ಪದ ಪರಿಶೀಲನೆ ನಡೆಸಲಿದೆ. ಹಾಗೂ ಟೆಂಡರ್ ವೇಳೆ ಭಾಗವಹಿಸುವ ಕಂಪನಿಗಳು ಯಾವ ಗುಣಮಟ್ಟದ ತುಪ್ಪ ನೀಡಬೇಕು ಎಂಬ ಷರತ್ತುಗಳನ್ನು ವಿಧಿಸಲಿದೆ. ಸಮಿತಿಯಲ್ಲಿ ಡೇರಿ ತಜ್ಞರಾದ ಡಾ। ಸುರೇಂದ್ರನಾಥ, ಡಾ। ವಿಜಯಬಾಸ್ಕರ ರೆಡ್ಡಿ, ಡಾ।ಸ್ವರ್ಣಲತಾ ಡಾ। ಇರಲಿದ್ದಾರೆ. ಮೊದಲ ಹಂತದಲ್ಲಿ ಇದು, ಈಗಾಗಲೇ ಟಿಟಿಡಿ ಖರೀದಿ ಮಾಡಿ ದಾಸ್ತಾನು ಇಟ್ಟಿರುವ ತುಪ್ಪದ ಗುಣಮಟ್ಟ ಹೇಗಿದೆ ಎಂಬುದನ್ನು ಪರಿಶೀಲಿಸಲಿದೆ ಹಾಗೂ 1 ವಾರದಲ್ಲಿ ವರದಿ ಸಲ್ಲಿಸಲಿದೆ.
ವರದಿಗೆ ನಾಯ್ಡು ಸೂಚನೆ:
ಈ ನಡುವೆ ಗುರುವಾರ ಟಿಟಿಡಿ ಅಧಿಕಾರಿಗಳು ಮತ್ತು ಹಿರಿಯ ಸಚಿವರ ಜೊತೆ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕಲಬೆರಕೆ ಪ್ರಕರಣದ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಟಿಟಿಡಿಗೆ ಸೂಚಿಸಿದ್ದಾರೆ.
ಕರ್ನಾಟಕದ ಎಲ್ಲಾ ದೇಗುಲದಲ್ಲಿ ನಂದಿನಿ ತುಪ್ಪವನ್ನೇ ಬಳಸಲು ಸರ್ಕಾರದ ಸೂಚನೆಕನ್ನಡಪ್ರಭ ವಾರ್ತೆ
ಬೆಂಗಳೂರು
ಆಂಧ್ರಪ್ರದೇಶದ ತಿರುಪತಿಯಲ್ಲಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗುತ್ತಿತ್ತು ಎಂಬ ವಿಚಾರ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಬೆನ್ನಲ್ಲೇ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳ ಎಲ್ಲ ಸೇವೆಗಳಿಗೂ ನಂದಿನಿ ತುಪ್ಪವನ್ನೇ ಬಳಸುವಂತೆ ಸೂಚಿಸಿದೆ.ರಾಜ್ಯದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಎಲ್ಲಾ 34,500ಕ್ಕೂ ಹೆಚ್ಚು ದೇವಾಲಯಗಳಲ್ಲೂ ಮಂಗಳಾರತಿಗೆ ಬೇಳಗುವ ದೀಪದಿಂದ ಹಿಡಿದು ಪ್ರಸಾದ, ದಾಸೋಹ ತಯಾರಿಕೆವರೆಗಿನ ಎಲ್ಲಾ ಸೇವೆಗಳಿಗೂ ನಂದಿನಿ ತುಪ್ಪವನ್ನು ಮಾತ್ರವೇ ಬಳಸಬೇಕೆಂದು ಸರ್ಕಾರ ಶುಕ್ರವಾರ ಸೂಚನೆ ನೀಡಿದೆ.
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಇಲಾಖಾ ಆಯುಕ್ತರು, ಇಲಾಖಾ ವ್ಯಾಪ್ತಿಯ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ದೀಪಗಳಿಗೆ, ವಿವಿಧ ಪ್ರಸಾದ ತಯಾರಿಕೆಗೆ ಹಾಗೂ ದಾಸೋಹ ಭವನದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನು ಮಾತ್ರ ಬಳಸಬೇಕು. ದೇವಾಲಯಗಳಲ್ಲಿ ತಯಾರಿಸುವ ಎಲ್ಲಾ ಪ್ರಸಾದ, ದಾಸೋಹದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ.ರಾಜ್ಯದಲ್ಲಿ ಎ, ಬಿ ಮತ್ತು ಸಿ ವರ್ಗದ ಒಟ್ಟು 34,563 ದೇವಾಲಯಗಳು ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುತ್ತವೆ. ಇದರಲ್ಲಿ ಎ ವರ್ಗದಲ್ಲಿ ಬರುವ ವಾರ್ಷಿಕ 25 ಲಕ್ಷ ರು. ಗಳಿಗೂ ಹೆಚ್ಚಿನ ವರದಮಾನವಿರುವ 205 ದೇವಾಲಯಗಳು, ಬಿ ವರ್ಗಕ್ಕೆ ಸೇರಿದ ಐದು ಲಕ್ಷದಿಂದ 25 ಲಕ್ಷ ರು.ಗಿಂತ ಕಡಿಮೆ ವರಮಾನವಿರುವ 193 ದೇವಾಲಯಗಳು ಮತ್ತು ಸಿ ವರ್ಗದಕ್ಕೆ ಒಳಪಟ್ಟ ವರಮಾನ 5 ಲಕ್ಷ ರು.ಗಿಂತ ಕಡಿಮೆ ಇರುವ 34,165 ದೇವಾಲಯಗಳಿವೆ.
ಕರ್ನಾಟಕದ ಎಲ್ಲಾ ದೇಗುಲಗಳ ಪ್ರಸಾದ ಪರೀಕ್ಷೆಗೆ ಒಳಪಡಿಸಿ: ಕೇಂದ್ರ ಸಚಿವ ಜೋಶಿ
ನವದೆಹಲಿತಿರುಪತಿ ಲಡ್ಡು ವಿವಾದದ ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲಾ ಪವಿತ್ರ ಧಾರ್ಮಿಕ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೊಳಪಡಿಸಲು ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಿರುಪತಿ ಪ್ರಸಾದಕ್ಕೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದರು.ತಿರುಪತಿ ಪ್ರಸಾದಕ್ಕೆ ಬಳಸಿರುವ ತುಪ್ಪದಲ್ಲಿ ಜಾನುವಾರುಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಪತ್ತೆಯಾಗಿರುವ ಸಂಗತಿ ಹಿಂದೂ ಸಮಾಜವನ್ನು ಚಿಂತೆಗೀಡು ಮಾಡಿದೆ. ಆಂಧ್ರಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಆಡಳಿತ ಈ ರೀತಿ ಹಲವು ಹಿಂದೂ ವಿರೋಧಿ ಕ್ರಮಗಳಿಗೆ ಬೆಂಬಲವಾಗಿ ನಿಂತಿರುವುದು ಅಕ್ಷಮ್ಯ ಅಪರಾಧ. ಅಲ್ಲದೆ, ತಿರುಮಲ ತಿರುಪತಿ ಟ್ರಸ್ಟ್‌ನಲ್ಲಿ ಹಿಂದೂಯೇತರರನ್ನೂ ಸದಸ್ಯರನ್ನಾಗಿ ಜಗನ್ ನೇಮಿಸಿದ್ದರು. ಆಂಧ್ರಪ್ರದೇಶದಲ್ಲಿ ಮತ್ತೆ ಇಂಥ ಅವಘಡಗಳು ಮರುಕಳಿಸದಂತೆ ನೂತನ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.