ವಿಜಯ್‌ ಚುನಾವಣಾ ರಣಕಹಳೆ - ಇಲ್ಲಿ ಶುರುವಾದ ರಾಜಕೀಯ ಕಾರ್ಯಕ್ಕೆ ಮಹಾ ತಿರುವು

KannadaprabhaNewsNetwork |  
Published : Sep 14, 2025, 01:04 AM IST
ವಿಜಯ್‌ | Kannada Prabha

ಸಾರಾಂಶ

 ಭಾರೀ ಜನಪ್ರಿಯತೆ ಗಳಿಸಿರುವ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್‌ ಅಧಿಕೃತವಾಗಿ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ತಾವು ಸ್ಪರ್ಧಿಸಲು ಉದ್ದೇಶಿಸಿರುವ 2026ರ ಮೊದಲ ವಿಧಾನಸಭೆ ಚುನಾವಣೆಯಲ್ಲೇ, ರಾಜ್ಯದಲ್ಲಿ 70 ದಶಕಗಳಿಂದ ಬೇರೂರಿರುವ ಡಿಎಂಕೆ ಪಕ್ಷಕ್ಕೆ ನೇರಾನೇರ ಸವಾಲೆಸೆದಿದ್ದಾರೆ.

  ತಿರುಚಿರಾಪಳ್ಳಿ :  ನಟನಾಗಿ ಭಾರೀ ಜನಪ್ರಿಯತೆ ಗಳಿಸಿರುವ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್‌ ಅಧಿಕೃತವಾಗಿ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ತಾವು ಸ್ಪರ್ಧಿಸಲು ಉದ್ದೇಶಿಸಿರುವ 2026ರ ಮೊದಲ ವಿಧಾನಸಭೆ ಚುನಾವಣೆಯಲ್ಲೇ, ರಾಜ್ಯದಲ್ಲಿ 70 ದಶಕಗಳಿಂದ ಬೇರೂರಿರುವ ಡಿಎಂಕೆ ಪಕ್ಷಕ್ಕೆ ನೇರಾನೇರ ಸವಾಲೆಸೆದಿದ್ದಾರೆ. ಮುಂದಿನ ವರ್ಷ ಏಪ್ರಿಲ್‌-ಮೇನಲ್ಲಿ ನಡೆಯಲಿರುವ ಚುನಾವಣೆಗೆ ತಮ್ಮ ಪ್ರಚಾರ ಆರಂಭಿಸಿರುವ ವಿಜಯ್‌, ಅದಕ್ಕಾಗಿ ತಿರುಚಿರಾಪಳ್ಳಿಯನ್ನೇ ಆರಿಸಿಕೊಂಡಿರುವುದರ ಹಿಂದಿರು ಕಾರಣವನ್ನೂ ಈ ವೇಳೆ ತಿಳಿಸಿದರು.

‘ದ್ರಾವಿಡತೆಯ ಐಕಾನ್ ಆಗಿರುವ ಡಿಎಂಕೆ ಸಂಸ್ಥಾಪಕ ಸಿ.ಎನ್. ಅಣ್ಣಾದೊರೈ ಅವರು 1956ರಲ್ಲಿ ಚುನಾವಣಾ ಸ್ಪರ್ಧೆಗೆ ಪ್ರವೇಶಿಸಲು ಇಲ್ಲೇ ನಿರ್ಧರಿಸಿದ್ದರು. ಅಣ್ಣಾ ಡಿಎಂಕೆ ಸ್ಥಾಪಕ ಎಂ.ಜಿ. ರಾಮಚಂದ್ರನ್‌ ತಮ್ಮ ಪಕ್ಷವನ್ನು ಘೋಷಿಸಿದ ಬಳಿಕ 1974ರಲ್ಲಿ ಮೊದಲ ಮೊದಲ ರಾಜ್ಯ ಸಮ್ಮೇಳನವನ್ನು ಇಲ್ಲೇ ನಡೆಸಿದ್ದರು. ಆದ್ದರಿಂದ ನಾನು ಇಲ್ಲಿಂದಲೇ ಪ್ರಚಾರಕ್ಕೆ ಚಾಲನೆ ನೀಡಿದ್ದೇನೆ’ ಎಂದರು.

ಜತೆಗೆ, ‘ತಿರುಚಿರಾಪಳ್ಳಿಯಲ್ಲಿ ಶುರುವಾಗಿರುವ ಯಾವುದೇ ರಾಜಕೀಯ ಚಟುವಟಿಕೆ ಮುಂದೆ ಮಹತ್ವದ ತಿರುವು ಪಡೆಯಲಿದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ವಿಜಯ್‌, ಪರೋಕ್ಷವಾಗಿ ರಾಜ್ಯದ ಚುಕ್ಕಾಣಿ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದರು. 

ಡಿಎಂಕೆ ವಿರುದ್ಧ ವಾಗ್ದಾಳಿ:

ಪ್ರಚಾರದ ವೇಳೆ ಆಡಳಿತಾರೂಢ ಡಿಎಂಕೆ ವಿರುದ್ಧ ಕಟು ವಾಗ್ದಾಳಿ ನಡೆಸಿದ ವಿಜಯ್‌, ‘2021ರ ವಿಧಾನಸಭೆ ಚುನಾವಣೆಗೂ ಮುನ್ನ ಡಿಎಂಕೆ ನೀಡಿದ್ದ ಭರವಸೆಗಳನ್ನು ಅದು ಈಡೇರಿಸಿಲ್ಲ. ಈ ಪಕ್ಷದ ಆಡಳಿತಾವಧಿಯಲ್ಲಿ ಅಕ್ರಮ ಕಿಡ್ನಿ ಮಾರಾಟದ ದಂಧೆಯೂ ನಡೆಯುತ್ತಿದೆ’ ಎಂದು ಆರೋಪಿಸಿದರು.

 ಕೈಕೊಟ್ಟ ಧ್ವನಿವರ್ಧಕ:

ಪ್ರಚಾರ ವಾಹನದ ಮೇಲೆ ಹತ್ತಿ ವಿಜಯ್‌ 20 ನಿಮಿಷ ಅತ್ಯುತ್ಸಾಹದಲ್ಲಿ ಮಾತಾಡಿದರೂ, ಅದು ನೆರೆದಿದ್ದವರಿಗೆ ಕೇಳಿಸಿದ್ದು ಕೇವಲ 1-2 ನಿಮಿಷ. ಧ್ವನಿವರ್ಧಕಗಳಲ್ಲಿ ಕಾಣಿಸಿಕೊಂಡ ಸಮಸ್ಯೆಯೇ ಇದಕ್ಕೆ ಕಾರಣ. ಅವರ ಮಾತು ಕೇಳದಾದಾಗ ಸೇರಿದ್ದ ಅಭಿಮಾನಿಗಳೆಲ್ಲಾ, ‘ವಿಜಯ್‌.. ವಿಜಯ್‌..’ ಎಂದು ಘೋಷಣೆ ಕೂಗಲಾರಂಭಿಸಿದರು.

PREV
Read more Articles on

Recommended Stories

ನನಗೆ ಏಡ್ಸ್‌ ಬಂದಿಲ್ಲ: ಉಗ್ರ ಇಸ್ಲಾಂಮತ ಪ್ರಚಾರಕ ಝಾಕಿರ್‌ ನಾಯ್ಕ್‌
ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ ಜನ ಏಕೆ ಮತಾಂತರಗೊಳ್ಳುತ್ತಿದ್ದರು? : ಸಿದ್ದರಾಮಯ್ಯ