ಕರೂರು/ಚೆನ್ನೈ: ತಮಿಳಿಗ ವೆಟ್ರಿ ಕಳಗಂ ಚುನಾವಣಾ ರ್‍ಯಾಲಿ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತ ಸಂಬಂಧ ಪಕ್ಷದ ಅಧ್ಯಕ್ಷ ವಿಜಯ್ ಪಕ್ಷದ ಇಬ್ಬರು ಹಿರಿಯ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನೊಂದೆಡೆ ಘಟನೆಯಲ್ಲಿ ಗಾಯಗೊಂಡಿದ್ದ ಇನ್ನಿಬ್ಬರು ಸಾವನ್ನಪ್ಪುವುದರೊಂದಿಗೆ ಮೃತರ ಸಂಖ್ಯೆ 40ಕ್ಕೆ ಏರಿದೆ. ಸದ್ಯ ಆಸ್ಪತ್ರೆಯಲ್ಲಿ 67 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಇದೆ ವೇಳೆ ಮುಖ್ಯಮಂತ್ರಿ ಸ್ಟಾಲಿನ್ ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ಭಾನುವಾರ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಬಳಿಕ ಮೃತಪಟ್ಟವರಿಗೆ ಪುಷ್ಪನಮನ ಸಲ್ಲಿಸಿ, ಅವರ ಕುಟುಂಬದವರಿಗೆ ಸಾಂತ್ವನ ನೀಡಿದರು.
ಕೇಸು:
ಕಾಲ್ತುಳಿತ ಪ್ರಕರಣದಲ್ಲಿ ಟಿವಿಕೆ ಪಕ್ಷದ ಕರೂರು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎನ್. ಆನಂದ್ ಹಾಗೂ ಜಂಟಿ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರ ವಿರುದ್ಧ ಉದ್ದೇಶಪೂರ್ವಕವಲ್ಲದ ಕೊಲೆ, ತಮಿಳುನಾಡು ಸಾರ್ವಜನಿಕ ಆಸ್ತಿ (ಹಾನಿ ಮತ್ತು ನಷ್ಟ ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.ಈ ನಡುವೆ ಶನಿವಾರದ ಘಟನೆ ಹಿನ್ನೆಲೆಯಲ್ಲಿ ಚೆನ್ನೈನಲ್ಲಿರುವ ವಿಜಯ್ ನಿವಾಸ ಮತ್ತು ರಾಜ್ಯಾದ್ಯಂತ ಇರುವ ಟಿವಿಕೆ ಪಕ್ಷದ ನಾಯಕರ ಮನೆಗೆ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.
ವಿಜಯ್ ಪ್ರತಿಕ್ರಿಯೆ:
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯ್, ‘ನನಗಾಗುತ್ತಿರುವ ನೋವನ್ನು ವಿವರಿಸಲೂ ಆಗುತ್ತಿಲ್ಲ. ನನ್ನ ಕಣ್ಣು ಮತ್ತು ಮನಸ್ಸು ದುಃಖದಿಂದ ಮಸುಕಾಗಿವೆ. ರ್‍ಯಾಲಿ ವೇಳೆ ಕಂಡ ಮುಖಗಳೆಲ್ಲಾ ಕಣ್ಮುಂದೆ ಹಾದು ಹೋಗುತ್ತಿವೆ. ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ನಮ್ಮಿಂದ ಸಾಧ್ಯವಾದಷ್ಟು ನೆರವಾಗುತ್ತೇವೆ’ ಎಂದು ಭರವಸೆ ನೀಡಿದ್ದಾರೆ.
ನ್ಯಾಯಾಂಗ ತನಿಖೆ:
ಕಾಲ್ತುಳಿತದ ಕಾರಣ ಸೇರಿದಂತೆ ಇಡೀ ಪ್ರಕರಣದ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಶನ್ ಅವರ ನೇತೃತ್ವದಲ್ಲಿ ಆಯೋಗ ರಚಿಸಲಾಗಿದ್ದು, ಅದು ಭಾನುವಾರ ಕರೂರಿಗೆ ತೆರಳಿ ತನಿಖೆ ಆರಂಭಿಸಿದೆ.
₹20 ಲಕ್ಷ ಪರಿಹಾರ:
ಕಾಲ್ತುಳಿತಕ್ಕೆ ಬಲಿಯಾದವರ ಕುಟುಂಬಗಳಿಗೆ ವಿಜಯ್ ತಲಾ 20 ಲಕ್ಷ ರು. ಮತ್ತು ಗಾಯಗೊಂಡವರಿಗೆ ತಲಾ 2 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ವಿಜಯ್ ತಡವಾಗಿ ಆಗಮಿಸಿದ್ದೇ ಕಾಲ್ತುಳಿತಕ್ಕೆ ಕಾರಣ: ಪೊಲೀಸ್
ಚೆನ್ನೈ: ಶನಿವಾರ ಕರೂರಿನಲ್ಲಿ ಟಿವಿಕೆ ರ್‍ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದ ಘಟನೆಗೆ ನಟ ವಿಜಯ್ ಹೇಳಿದ ಸಮಯಕ್ಕಿಂತ ಭಾರೀ ವಿಳಂಬವಾಗಿ ಆಗಮಿಸಿದ್ದು, ಜೊತೆಗೆ ಆಯೋಜಕರು ನಿಯಮ ಉಲ್ಲಂಘಿಸಿದ್ದು ಕಾರಣ ಎಂದು ಪೊಲೀಸರು ಹೇಳಿದ್ದಾರೆ.
40 ಜನರನ್ನು ಬಲಿಪಡೆದ ಘಟನೆ ಬಗ್ಗೆ ಭಾನುವಾರ ಇಲ್ಲಿ ಮಾಹಿತಿ ನೀಡಿದ ತಮಿಳುನಾಡು ಡಿಜಿಪಿ ಜಿ.ವೆಂಕಟರಮಣನ್,‘ವಿಜಯ್ ಪಕ್ಷದ ಪ್ರಚಾರ ಸಭೆಗೆ ಮಧ್ಯಾಹ್ನ 3ರಿಂದ ರಾತ್ರಿ 10ರ ವರೆಗೆ ಅನುಮತಿ ಕೋರಲಾಗಿತ್ತು. ಪಕ್ಷದ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಜಯ್ ಮಧ್ಯಾಹ್ನ 12 ಗಂಟೆಗೇ ಆಗಮಿಸಲಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು. ಇದರಿಂದಾಗಿ ಮಧ್ಯಾಹ್ನ 11 ಗಂಟೆಯಿಂದಲೇ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಆದರೆ ವಿಜಯ್ ಆಗಮಿಸಿದ್ದು ರಾತ್ರಿ 7.40ಕ್ಕೆ. ಬಹಳ ಸಮಯದಿಂದ ಹೀಗೆ ಕಾದಿದ್ದ ಅಭಿಮಾನಿಗಳು ಏಕಾಏಕಿ ಅವರನ್ನು ನೋಡಲು ನುಗ್ಗಿದಾಗ ಕಾಲ್ತುಳಿತ’ ಆಗಿದೆ ಎಂದು ಹೇಳಿದ್ದಾರೆ.
ವ್ಯವಸ್ಥೆ ಇಲ್ಲ : ವಿಜಯ್ ನೋಡಲು ಭಾರೀ ಜನಸ್ತೋಮ ಸೇರಿದ್ದರೂ ಅವರಿಗೆ ಆಹಾರ, ನೀರಿನಂಥ ಸೌಲಭ್ಯಗಳನ್ನೂ ಕಲ್ಪಿಸಿರಲಿಲ್ಲ. ಸಂಘಟಕರು 10 ಸಾವಿರ ಮಂದಿ ಸೇರಬಹುದೆಂದು ಹೇಳಿದರೂ 27 ಸಾವಿರ ಮಂದಿ ಅಲ್ಲಿ ನೆರೆದಿದ್ದರು. 20,000 ಮಂದಿ ಸೇರಬಹುದು ಎಂಬ ಅಂದಾಜಿನ ಮೇಲೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಹೀಗೆ ನಿರೀಕ್ಷೆಗೆ ಮೀರಿ ಜನರ ಆಗಮನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿತು ಎಂದು ಡಿಜಿಪಿ ಹೇಳಿದ್ದಾರೆ.
ಇದೇ ವೇಳೆ ಬಂದೋಬಸ್ತ್‌ಗೆ ಕೇವಲ 500 ಪೊಲೀಸರ ನಿಯೋಜನೆ ಕುರಿತು ಪ್ರತಿಕ್ರಿಯಿಸಿದ ಡಿಜಿಪಿ, ಸಭೆಯು ರಸ್ತೆಯಲ್ಲಿ ಆಯೋಜಿಸಲಾಗಿತ್ತು. ಹೆಚ್ಚಿನ ಪೊಲೀಸರನ್ನು ನಿಯೋಜಿಸಿದ್ದರೆ ಸಾರ್ವಜನಿಕರಿಗೆ ಸ್ಥಳ ಸಿಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಹೀರೋ ನೋಡಲು ಹೋದ ಅಕ್ಕ ಹೆಣವಾಗಿ ಮನೆಗೆ ಮರಳಿದಳು
ಕರೂರು: ‘ನನ್ನ ಸೋದರಿ ನಟ ವಿಜಯ್ ಕಟ್ಟಾ ಅಭಿಮಾನಿಯಾಗಿದ್ದಳು. ಆತನನ್ನು ನೋಡಲೆಂದೇ ಸಮಾವೇಶಕ್ಕೆ ಹೋಗಿದ್ದಳು’ ಎಂದು ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆಯೊಬ್ಬರ ಸೋದರ ಹೇಳಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಜಯಾ (55) ಎಂಬ ಮಹಿಳೆಯ ಸೋದರ ಮಾತನಾಡಿದ್ದು, ‘ಜಯಾ ಮತ್ತು ಆಕೆಯ ಪುತ್ರ ಮುರುಗನ್ ಸಮಾವೇಶಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಗೊತ್ತಿರಲಿಲ್ಲ. ಸುದ್ದಿ ಬರುತ್ತಿದ್ದಂತೆ ನನ್ನ ಮನೆಯವರು ವಿಷಯ ತಿಳಿಸಿದರು. ಇಬ್ಬರೂ ವಿಜಯ್ ಕಟ್ಟಾ ಅಭಿಮಾನಿಗಳಾಗಿದ್ದರು. ಘಟನೆ ನಡೆದ ಬಳಿಕ ನಾವಲ್ಲಿಗೆ ಹೋದಾಗ ಜಯಾ ದೇಹ ಸಿಕ್ಕಿತು. ಮುರುಗನ್‌ನನ್ನು ಐಸಿಯುನಲ್ಲಿ ದಾಖಲಿಸಲಾಗಿದ್ದು, ಆತ ಉಸಿರಾಡಲು ಕಷ್ಟಪಡುತ್ತಿದ್ದಾನೆ’ ಎಂದು ಅಳಲು ತೋಡಿಕೊಂಡಿದ್ದಾರೆ.
20 ಲಕ್ಷ ಹಣ ಬೇಡ, ನನ್ನ ಸೋದರಿ ಮರಳಿಸಿ
ಚೆನ್ನೈ: ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆಯ ಸೋದರಿಯೊಬ್ಬರು ‘ನಮಗೆ ವಿಜಯ್ ಕೊಡುವ 20 ಲಕ್ಷ ರು. ಹಣ ಬೇಡ, ನನ್ನ ಸೋದರಿಯನ್ನು ಮರಳಿಸಿ’ ಎಂದು ಗೋಗರೆದಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಬೃಂದಾ ಎಂಬ 22 ವರ್ಷದ ಮಹಿಳೆಯ ಸೋದರಿ ಮಾತನಾಡಿ, ‘ಬೃಂದಾ ತನ್ನ 2 ವರ್ಷದ ಮಗುವನ್ನು ನನ್ನ ಬಳಿ ಕೊಟ್ಟು, ವಿಜಯ್ ಸಮಾವೇಶಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವಳು, ಮರಳಲೇ ಇಲ್ಲ. ಸಂಜೆ 4ರಿಂದ ಕರೆ ಮಾಡಿದರೂ ಪ್ರತಿಕ್ರಿಯೆ ಇರಲಿಲ್ಲ. ಭಾನುವಾರ ಬೆಳಗ್ಗೆ ಆಕೆ ಮೃತಪಟ್ಟಿರುವ ಸುದ್ದಿ ತಿಳಿಯಿತು. ನಮಗೆ ನೀವು ಕೊಡುವ ಹಣ ಬೇಡ. ನನ್ನ ಸೋದರಿ ಬೇಕು’ ಎಂದು ಆಗ್ರಹಿಸಿದ್ದಾರೆ.
ದಾಳಿಗೆ ಹೆದರಿ ಆಸ್ಪತ್ರೆಗೆ ಹೋಗದ ವಿಜಯ್!
ಚೆನ್ನೈ: ಕಾಲ್ತುಳಿತ ನಡೆದ ಬಳಿಕ ನಟ ವಿಜಯ್, ಯಾವುದೇ ಪ್ರತಿಕ್ರಿಯೆ ನೀಡದೆ ಕರೂರು ಬಿಟ್ಟಿದ್ದಕ್ಕೆ ಪೊಲೀಸರು ದಾಳಿ ನಡೆಯಬಹುದು ಎಂಬ ಎಚ್ಚರಿಕೆ ನೀಡಿದ್ದೇ ಕಾರಣ ಎನ್ನಲಾಗಿದೆ. ಘಟನೆ ನಡೆದ ಬಳಿಕ ವಿಜಯ್ ಆಸ್ಪತ್ರೆಗೆ ಹೋಗಲು ಸಿದ್ಧರಾಗಿದ್ದರು. ಆದರೆ ಈ ವೇಳೆ ಪೊಲೀಸ್ ಅಧಿಕಾರಿಗಳು ವಿಜಯ್ ಅವರನ್ನು ತಡೆದಿದ್ದರು. ‘ಜನರು ಈಗಾಗಲೇ ನಿಮ್ಮ ವಿರುದ್ಧ ತೀವ್ರವಾಗಿ ಆಕ್ರೋಶಗೊಂಡಿದ್ದಾರೆ. ಒಂದು ವೇಳೆ ನೀವು ಆಸ್ಪತ್ರೆಗೆ ಹೋದರೆ, ಅವರು ನಿಮ್ಮ ವಿರುದ್ಧ ಮುಗಿಬೀಳಬಹುದು. ದಾಳಿ ಮಾಡಬಹುದು’ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು. ಹೀಗಾಗಿ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡದೆ ನೇರವಾಗಿ ಚೆನ್ನೈಗೆ ತೆರಳಿದರು ಎನ್ನಲಾಗಿದೆ.