ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆಗೆ ಕರ್ನಾಟಕ ಮಾದರಿ

KannadaprabhaNewsNetwork |  
Published : Jun 26, 2025, 01:32 AM ISTUpdated : Jun 26, 2025, 04:30 AM IST
ಪರೀಕ್ಷೆ | Kannada Prabha

ಸಾರಾಂಶ

  ಮುಂದಿನ ಶೈಕ್ಷಣಿಕ ವರ್ಷದಿಂದ (2026) 10ನೇ ತರಗತಿಯ ವಿದ್ಯಾರ್ಥಿಗಳಿಗೆ ವರ್ಷದಲ್ಲಿ 2 ಬಾರಿ ಅಂತಿಮ ಪರೀಕ್ಷೆ ನಡೆಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಿರ್ಧರಿಸಿದೆ.

ನವದೆಹಲಿ: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಅಂಕ ಉತ್ತಮಪಡಿಸಿಕೊಳ್ಳಲು ಕರ್ನಾಟಕದಲ್ಲಿ ಈಗಾಗಲೇ 3 ಪರೀಕ್ಷೆಗಳು ಉಂಟು. ಈಗ ಇದೇ ಮಾದರಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ (2026) 10ನೇ ತರಗತಿಯ ವಿದ್ಯಾರ್ಥಿಗಳಿಗೆ ವರ್ಷದಲ್ಲಿ 2 ಬಾರಿ ಅಂತಿಮ ಪರೀಕ್ಷೆ ನಡೆಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಿರ್ಧರಿಸಿದೆ. ಅನುತ್ತೀರ್ಣರಾದವರು ತೇರ್ಗಡೆಯಾಗಲು ಹಾಗೂ ಕಮ್ಮಿ ಫಲಿತಾಂಶ ಪಡೆದವರು ಅಂಕ ಉತ್ತಮಪಡಿಸಿಕೊಳ್ಳಲು ಇವು ಸಹಕಾರಿಯಾಗಲಿವೆ.

ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸಂಯಮ್‌ ಭಾರದ್ವಾಜ್‌ ಮಾತನಾಡಿ, ‘ಇದರಡಿ ಮೊದಲ ಪರೀಕ್ಷೆ ಬರೆಯುವುದು ಕಡ್ಡಾಯವಾಗಿದ್ದು, 2ನೇ ಪರೀಕ್ಷೆ ಐಚ್ಛಿಕವಾಗಿದೆ. ಮೊದಲ ಹಂತದ ಪರೀಕ್ಷೆಯನ್ನು ಫೆಬ್ರವರಿಯಲ್ಲಿ ನಡೆಸಲಾಗುತ್ತದೆ. ಏಪ್ರಿಲ್‌ನಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ. 2ನೇ ಹಂತದ ಪರೀಕ್ಷೆ ಮೇ ತಿಂಗಳಲ್ಲಿ ಇರುತ್ತದೆ. ಫಲಿತಾಂಶ ಜೂನ್‌ನಲ್ಲಿ ಘೋಷಿಸಲಾಗುವುದು. ವಿದ್ಯಾರ್ಥಿಗಳು 2ನೇ ಹಂತದಲ್ಲಿ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಭಾಷೆ ವಿಷಯಗಳ ಪರೀಕ್ಷೆ ಬರೆದು ತಮ್ಮ ಅಂಕ ಉತ್ತಮಗೊಳಿಸಿಕೊಳ್ಳಬಹುದು’ ಎಂದು ಹೇಳಿದರು. ಆದರೆ, ಇಡೀ ಶೈಕ್ಷಣಿಕ ಅವಧಿಯಲ್ಲಿ ಒಮ್ಮೆ ಮಾತ್ರ ಆಂತರಿಕ ಮೌಲ್ಯಮಾಪನ ನಡೆಸಲಾಗುತ್ತದೆ. ಶೀತ ಪ್ರದೇಶಗಳಲ್ಲಿರುವ ಶಾಲೆಗಳ ಮಕ್ಕಳು ಹಾಗೂ ಕ್ರೀಡಾ ಕೆಟಗರಿಯಲ್ಲಿರುವ ಮಕ್ಕಳು ಯಾವ ಹಂತದ ಪರೀಕ್ಷೆಯನ್ನಾದರೂ ಬರೆಯಬಹುದಾಗಿದೆ.

ಆದರೆ ಒಂದು ವೇಳೆ ಮೊದಲ ಹಂತದಲ್ಲಿ 3 ಅಥವಾ 3ಕ್ಕಿಂತ ಹೆಚ್ಚು ಪರೀಕ್ಷೆಗೆ ಗೈರಾದರೆ ಅವರಿಗೆ 2ನೇ ಹಂತದ ಪರೀಕ್ಷೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿ ಸೂಚಿಸಲಾಗಿರುವಂತೆ, 2 ಪರೀಕ್ಷೆಗಳನ್ನು ನಡೆಸುವ ಸಂಬಂಧ ಸಿಬಿಎಸ್‌ಇ ನಿಯಮಾವಳಿಗಳನ್ನು ಸಿದ್ಧಪಡಿಸಿ ಅನುಮೋದಿಸಿದೆ. ಈ ಪರೀಕ್ಷಾ ವ್ಯವಸ್ಥೆಯ ಮಾನದಂಡಗಳ ಕರಡನ್ನು ಸಿಬಿಎಸ್‌ಇ ಫೆಬ್ರವರಿಯಲ್ಲಿ ಘೋಷಿಸಿದ್ದು, ಸಂಬಂಧಿಸಿದವರ ಪ್ರತಿಕ್ರಿಯೆಗಾಗಿ ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿತ್ತು.

- ಮುಂದಿನ ವರ್ಷದಿಂದ ನಡೆಯಲಿವೆ 2 ಬೋರ್ಡ್‌ ಪರೀಕ್ಷೆ- ಮೊದಲ ಪರೀಕ್ಷೆ ಕಡ್ಡಾಯ, 2ನೇಯದ್ದು ಐಚ್ಛಿಕ

- ಅನುತ್ತೀರ್ಣರಾದವರು ತೇರ್ಗಡೆಯಾಗಲು, ಪಾಸಾದವರು ಅಂಕ ವೃದ್ಧಿಸಿಕೊಳ್ಳಲೆಂದು 2 ಪರೀಕ್ಷೆ

- ಫೆಬ್ರವರಿಯಲ್ಲಿ ಮೊದಲ ಪರೀಕ್ಷೆ, ಏಪ್ರಿಲ್‌ನಲ್ಲಿ ಫಲಿತಾಂಶ. ಮೇಗೆ 2ನೇ ಪರೀಕ್ಷೆ, ಜೂನ್‌ಗೆ ರಿಸಲ್ಟ್‌

- ಮೊದಲ ಹಂತದ ಪರೀಕ್ಷೆ ಬರೆದವರಿಗೆ ಮಾತ್ರ ಎರಡನೇ ಹಂತದ ಪರೀಕ್ಷೆ ಬರೆಯಲು ಅವಕಾಶ

- ಮೊದಲ ಹಂತದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಪರೀಕ್ಷೆಗೆ ಗೈರಾದವರಿಗೆ ಎರಡನೇ ಪರೀಕ್ಷೆ ಇಲ್ಲ

- ಕರ್ನಾಟಕದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ 3 ಪರೀಕ್ಷೆ ನಡೆಯುತ್ತಿವೆ. ಇದು ಅದೇ ಮಾದರಿ

PREV
Read more Articles on

Recommended Stories

ಭಾರತದಲ್ಲಿನ ಶೇ.10 ಸಿಬ್ಬಂದಿಗೆ ಒರಾಕಲ್‌ ಕಂಪನಿ ಗೇಟ್‌ಪಾಸ್‌
ಇನ್ನು ರೈಲುಗಳಲ್ಲೂ ವಿಮಾನದ ಮಾದರಿ ಲಗೇಜ್‌ ತೂಕಕ್ಕೆ ಮಿತಿ!