ನಟ ಸೈಫ್ ಮೇಲಿನ ಚಾಕು ಇರಿತ ಪ್ರಕರಣಕ್ಕೆ ಹೊಸ ತಿರುವು: ಸಂಗ್ರಹಿಸಿದ್ದಕ್ಕೂ ಬಂಧಿತನ ಬೆರಳಚ್ಚಿಗೂ ತಾಳೆ ಇಲ್ಲ!

KannadaprabhaNewsNetwork |  
Published : Jan 27, 2025, 12:46 AM ISTUpdated : Jan 27, 2025, 05:28 AM IST
ಸೈಫ್ ಅಲಿ ಖಾನ್ ಕೇಸ್ | Kannada Prabha

ಸಾರಾಂಶ

ನಟ ಸೈಫ್ ಮೇಲಿನ ಚಾಕು ಇರಿತ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ. ಬಂಧಿತ ಶೆಹಜಾದ್‌ನ ಬೆರಳಚ್ಚು ಮಾದರಿಗೂ ಸೈಫ್ ನಿವಾಸದಲ್ಲಿ ಪತ್ತೆಯಾದ ಬೆರಳಚ್ಚಿಗೂ ಹೊಂದಿಕೆಯಾಗುತ್ತಿಲ್ಲ ಎಂದು ವರದಿಯೊಂದು ತಿಳಿಸಿದೆ.

ಮುಂಬೈ: ನಟ ಸೈಫ್ ಮೇಲಿನ ಚಾಕು ಇರಿತ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ. ಬಂಧಿತ ಶೆಹಜಾದ್‌ನ ಬೆರಳಚ್ಚು ಮಾದರಿಗೂ ಸೈಫ್ ನಿವಾಸದಲ್ಲಿ ಪತ್ತೆಯಾದ ಬೆರಳಚ್ಚಿಗೂ ಹೊಂದಿಕೆಯಾಗುತ್ತಿಲ್ಲ ಎಂದು ವರದಿಯೊಂದು ತಿಳಿಸಿದೆ.

ಶೆಹಜಾದ್‌ ಬೆರಳಚ್ಚು ಮಾದರಿಗಳ ಬಗ್ಗೆ ನಕಾರಾತ್ಮಕ ವರದಿಗಳನ್ನು ಸಲ್ಲಿಸಿದ ಸಿಐಡಿ ಈ ವಿಷಯವನ್ನು ಬಹಿರಂಗಪಡಿಸಿದೆ. ತಪ್ಪಾದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂಬ ಸಾಮಾಜಿಕ ಮಾಧ್ಯಮಗಳ ಕೂಗಿನ ನಡುವೆ ಈ ಬೆಳವಣಿಗೆ ನಡೆದಿದೆ.

ಮುಂಬೈ ಪೊಲೀಸರು ಮತ್ತು ಅಪರಾಧ ವಿಭಾಗದ 40 ತಂಡಗಳ 3 ದಿನಗಳ ಹುಡುಕಾಟದ ಬಳಿಕ ಶೆಹಜಾದ್‌ ಅವರನ್ನು ಥಾಣೆಯಲ್ಲಿ ಬಂಧಿಸಲಾಗಿತ್ತು. ಸಿಸಿಟೀವಿಯಲ್ಲಿ ಸೆರೆಯಾದ ವ್ಯಕ್ತಿಗೂ ಬಂಧಿತನಿಗೂ ಸಾಮ್ಯತೆಯಿಲ್ಲ ಎಂದು ಹಲವರು ಸಂಶಯ ವ್ಯಕ್ತಪಡಿಸಿದ್ದರು. ಸೈಫ್ ಮನೆಯಲ್ಲಿ ಒಟ್ಟು 19 ಬೆರಳಚ್ಚು ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಆದರೆ ಯಾವೊಂದು ಮಾದರಿಯೂ ಬಂಧಿತ ಶೆಹಜಾದ್‌ನ ಬೆರಳಚ್ಚು ಮಾದರಿಯೊಂದಿಗೆ ತಾಳೆಯಾಗುತ್ತಿಲ್ಲ. ಇದರಿಂದ ಮುಂಬೈ ಪೊಲೀಸರಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ವರದಿ ತಿಳಿಸಿದೆ.

ಪೊಲೀಸ್‌ ಎಡವಟ್ಟು: ಶಂಕಿತ ಸೈಫ್‌

ದಾಳಿಕೋರನ ಬದುಕೇ ಹಾಳಾಯ್ತು

ಕೆಲಸ ಕಟ್‌, ಮದುವೆ ಬ್ರೇಕ್‌, ಕಳಂಕ 

ಮುಂಬೈ: ನಟ ಸೈಫ್ ಆಲಿ ಖಾನ್‌ಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿ ಶಂಕೆ ಆಧಾರದಲ್ಲಿ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದ ಛತ್ತೀಸ್‌ಗಢ ಮೂಲದ ವ್ಯಕ್ತಿ ಜೀವನವೇ ಇದೀಗ ಕೊಚ್ಚಿ ಹೋಗಿದೆ.

ಸೈಫ್‌ಗೆ ಚಾಕು ಇರಿತ ಕೇಸಿನ ಆರೋಪಿಯ ಚಹರೆಗೆ ಹೋಲಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಛತ್ತೀಸ್‌ಗಡದಲ್ಲಿ ಚಾಲಕ ಅಕ್ಷಯ್‌ ಕನೋಜಿಯಾ (31)ನನ್ನು ಮುಂಬೈ ಪೊಲೀಸರ ಸುಳಿವಿನ ಮೇರೆಗೆ ಛತ್ತೀಸ್‌ಗಢ ಪೊಲೀಸರು ವಶಕ್ಕೆ ಪಡೆದು ನಂತರ ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದರು. ಪೊಲೀಸರು ವಶಕ್ಕೆ ಪಡೆದ ಬಳಿಕ ನನ್ನ ಫೋಟೋ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಇದರಿಂದ ನನ್ನ ಜೀವನವೇ ಬದಲಾಯಿತು. ಇದ್ದ ಕೆಲಸ ಕಳೆದುಕೊಳ್ಳಬೇಕಾಯಿತು, ಮಾಲೀಕನಿಗೆ ಎಷ್ಟೇ ಸಮುಜಾಯಿಶಿ ನೀಡಿದರೂ ಆತ ಕೇಳುತ್ತಿಲ್ಲ. ಮದುವೆ ಮಾತುಕತೆಯೂ ಮುರಿದುಬಿತ್ತು ಮತ್ತು ತನ್ನ ಕುಟುಂಬ ಸಂಕಷ್ಟ ಎದುರಿಸಬೇಕಾಯಿತು ಎಂದು ಆಕಾಶ್‌ ಅವಲತ್ತುಕೊಂಡಿದ್ದಾರೆ.

ಸೈಫ್‌ಗೆ ವಿಮಾ ಸಂಸ್ಥೆ ಆದ್ಯತೆ: ವೈದ್ಯ ಸಂಘಟನೆ ವಿರೋಧ

ವಿಮೆಗೆ ಸಾಮಾಜಿಕ ಸ್ಥಿತಿಗತಿ ಪರಿಗಣನೆ ಆರೋಪ 

ಮುಂಬೈ: ನಟ ಸೈಫ್‌ ಅಲಿ ಖಾನ್‌ ಮೇಲೆ ನಡೆದ ಹಲ್ಲೆಯ ಚಿಕಿತ್ಸೆಗಾಗಿ ಕ್ಲೇಂ ಮಾಡಿದ್ದ ವೈದ್ಯಕೀಯ ವಿಮೆಯನ್ನು ಮಂಜೂರು ಮಾಡುವ ಮೂಲಕ ಅವರಿಗೆ ‘ವಿಶೇಷ ಆದ್ಯತೆ’ ನೀಡಲಾಗಿದೆ ಎಂದು ಆರೋಪಿಸಿ ವೃತ್ತಿಪರ ವೈದ್ಯರ ಸಂಘಟನೆ, ವಿಮಾ ನಿಯಂತ್ರಕ ಸಂಸ್ಥೆ ಐಆರ್‌ಡಿಎಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದೆ.

ನಟನ 5 ದಿನದ ಆರೈಕೆಗಾಗಿ 36 ಲಕ್ಷ ರು. ನಗದುರಹಿತ ಚಿಕಿತ್ಸೆಗೆ ಮನವಿ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ 25 ಲಕ್ಷ ವಿಮೆ ಮಂಜೂರು ಮಾಡಲಾಗಿತ್ತು. ಇದನ್ನು ವಿಮಾ ಸಂಸ್ಥೆ ನಿವಾ ಭೂಪಾ ಧೃಡಪಡಿಸಿ, ಮುಂದಿನ ಕ್ಲೇಂ ಅನ್ನು ಮಾರ್ಗಸೂಚಿಯನುಸಾರ ನೀಡಲಾಗುವುದು ಎಂದು ಹೇಳಿತ್ತು.ಇದರ ವಿರುದ್ಧ ಐಆರ್‌ಡಿಎಗೆ ಪತ್ರ ಬರೆದಿರುವ 18000ಕ್ಕೂ ಹೆಚ್ಚು ವೈದ್ಯರನ್ನು ಒಳಗೊಂಡ ಮುಂಬೈನ ವೈದ್ಯಕೀಯ ಸಲಹಾ ಸಂಘಟನೆ, ‘ಖಾನ್‌ರ ನಗದು ರಹಿತ ಚಿಕಿತ್ಸೆಗೆ 25 ಲಕ್ಷ ರು. ಮಂಜೂರು ಸರಿಯಲ್ಲ. ಸಾಮಾನ್ಯ ವಿಮಾದಾರರಿಗಿಂತ ಖಾನ್‌ರಿಗೆ ಅಧಿಕ ಆದ್ಯತೆ ನೀಡಿದಂತಿದೆ. ಹೀಗೇ ಆದರೆ ಪ್ರಭಾವಿಗಳು ನಗದು ರಹಿತ ಚಿಕಿತ್ಸೆ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯುತ್ತಿರುತ್ತಾರೆ. ಆದರೆ ಸಾಮಾನ್ಯರು ಕಡಿಮೆ ಕವರೇಜ್‌ ಹಾಗೂ ಮರುಪಾವತಿಯ ಸಮಸ್ಯೆ ಎದುರಿಸುತ್ತಾರೆ. ಇದು ಅನ್ಯಾಯ. ವಿಮೆ ಸಾಮಾಜಿಕ ಸ್ಥಿತಿಗತಿಗಳನ್ನು ಪರಿಗಣಿಸದೆ ಎಲ್ಲರಿಗೂ ಸಮಾನವಾಗಿ ದೊರಕಬೇಕು’ ಎಂದು ಆಗ್ರಹಿಸಲಾಗಿದೆ. ಜತೆಗೆ, ಈ ಕುರಿತು ತನಿಖೆ ನಡೆಸಲೂ ಕೋರಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ