ಶ್ರೀನಗರ : ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಶನಿವಾರ ಉಗ್ರರ ಜತೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ .ದಕ್ಷಿಣ ಕಾಶ್ಮೀರ ಜಿಲ್ಲೆಯ ಕೊಕರ್ನಾಗ್ ಪ್ರದೇಶದ ಅಹ್ಲಾನ್ ಗಗರ್ಮಂಡು ಅರಣ್ಯದಲ್ಲಿ ಉಗ್ರರು ಇದ್ದ ಬಗ್ಗೆ ಮಾಹಿತಿ ಲಭಿಸಿದ ನಂತರ ಸೇನೆ ಅಲ್ಲಿ ತೆರಳಿತ್ತು.
ಆಗ ಅರಣ್ಯದಲ್ಲಿ ಅಡಗಿಕೊಂಡಿದ್ದ ಉಗ್ರರು ಶೋಧ ತಂಡಗಳನ್ನು ಗಮನಿಸಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ತೀವ್ರ ಗುಂಡಿನ ಕಾಳಗಕ್ಕೆ ಕಾರಣವಾಯಿತು. ಆಗಯ ಉಗ್ರರ ಗುಂಡಿನ ದಾಳಿಯಲ್ಲಿ ಐವರು ಸೇನಾ ಸಿಬ್ಬಂದಿ ಗಾಯಗೊಂಡರು. ಆಸ್ಪತ್ರೆಗೆ ದಾಖಲಿಸಿದ ಬಳಿಕ ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.ಸ್ಥಳಕ್ಕೆ ಹೆಚ್ಚಿನ ಸೇನಾ ಸಿಬ್ಬಂದಿಯನ್ನು ಕಳಿಸಲಾಗಿದ್ದು, ಉಗ್ರರಿಗೆ ಶೋಧ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ ಜುಲೈ 8ರಂದೂ ಕಠುವಾದಲ್ಲಿ ನಡೆದ ಹೊಂಚು ದಾಳಿಯಲ್ಲಿ ಐವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು.
ಯೋಧರ ಕೊಂದ 4 ಉಗ್ರರ ರೇಖಾಚಿತ್ರ ಬಿಡುಗಡೆ: ಮಾಹಿತಿಗೆ ₹20 ಲಕ್ಷ
ಜಮ್ಮು : ಕಳೆದ ತಿಂಗಳು ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ಯೋಧರ ಮೇಲೆ ಹೊಂಚು ದಾಳಿ ಮಾಡಿದ್ದ ನಾಲ್ವರು ಉಗ್ರರ ರೇಖಾ ಚಿತ್ರಗಳನ್ನು ಇಲ್ಲಿಯ ಪೊಲೀಸರು ಶನಿವಾರ ಬಿಡುಗಡೆ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಠುವಾ ಜಿಲ್ಲೆಯ ಅರಣ್ಯ ಪ್ರದೇಶವೊಂದರಲ್ಲಿನ ಮಣ್ಣಿನ ಮನೆಗಳಲ್ಲಿ ಈ ಭಯೋತ್ಪಾದಕರು ಅಡಗಿರುವುದಾಗಿ ಪತ್ತೆ ಹಚ್ಚಲಾಗಿದ್ದು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಅಲ್ಲದೆ ಈ ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದಲ್ಲಿ 20 ಲಕ್ಷ ರು. ಬಹುಮಾನ ಘೋಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಕಠುವಾದ ಮಲ್ಹಾರ್, ಬಾನಿ ಮತ್ತು ಸಿಯೋಜಧರ್ ಅರಣ್ಯಗಳಲ್ಲಿ ಕಂಡು ಬಂದಿರುವ ನಾಲ್ಕು ಉಗ್ರರ ರೇಖಾಚಿತ್ರಗಳನ್ನು ಜಮ್ಮ-ಕಾಶ್ಮೀರ ಪೊಲೀಸರು ಅಧಿಕೃತ ಎಕ್ಸ್ ಖಾತೆಯಲ್ಲಿ ಬಿಡುಗಡೆ ಮಾಡಿದ್ದಾರೆ.
‘ಕಾರ್ಯಸಾಧ್ಯವಾಗುವ ಖಚಿತ ಮಾಹಿತಿಗೆ ನಾಲ್ವರು ಉಗ್ರರಿಗೆ ತಲಾ 5 ಲಕ್ಷ ರು., ಉಗ್ರರ ಬಗೆಗಿನ ವಿಶ್ವಾಸಾರ್ಹ ಮಾಹಿತಿಗೂ ಸೂಕ್ತ ಬಹುಮಾನ ನೀಡಲಾಗುವುದು. ಮಾಹಿತಿದಾರರ ಹೆಸರು ಗೌಪ್ಯವಾಗಿಡಲಾಗುವುದು’ ಎಂದು ಕಥುವಾ ಪೊಲೀಸರು ಎಕ್ಸ್‌ನಲ್ಲಿ ಹೇಳಿದ್ದಾರೆ.ಮಚೇಡಿ ಪ್ರದೇಶದ ಅರಣ್ಯ ಭಾಗದಲ್ಲಿ ಜು.8 ರಂದು ಗಸ್ತು ತಿರುಗುತ್ತಿದ್ದ ಯೋಧರ ಮೇಲೆ ಉಗ್ರರು ನಡೆಸಿದ ಹೊಂಚುದಾಳಿಯಲ್ಲಿ ಕಿರಿಯ ನಿಯೋಜಿತ ಅಧಿಕಾರಿ (ಜೆಸಿಒ) ಸೇರಿ ಐವರು ಯೋಧರು ಹುತಾತ್ಮರಾಗಿದ್ದರು.