ಉಡುಪಿ : ದುಬೈನ ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್ ಸಂಸ್ಥೆಗೆ ₹2.50 ಕೋಟಿಗೂ ಅಧಿಕ ವಂಚನೆ ಆರೋಪ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಡುಪಿ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾರ್ಕೂರು ಮೂಲದ ನಾಗೇಶ್ ಪೂಜಾರಿ (31) ಬಂಧಿತ. ಆರೋಪಿಯು ಅನಿವಾಸಿ ಭಾರತೀಯ. ಉಡುಪಿ ತಾಲೂಕಿನ ವಕ್ವಾಡಿ ಮೂಲದ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ಆಡಳಿತ ನಿರ್ದೇಶಕರಾಗಿರುವ ದುಬೈನ ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್ ಸಂಸ್ಥೆಗೆ ಸೇರುವ ಹೋಟೆಲ್‌ವೊಂದಕ್ಕೆ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿ ವಿವಿಧ ಹಂತಗಳಲ್ಲಿ ₹2.50 ಕೋಟಿಗೂ ಅಧಿಕ ವಂಚಿಸಿದ್ದ.
ಆರೋಪಿಯು ಜೆಎಂಎಫ್‌ಸಿ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ. ಬಳಿಕ ಜಿಲ್ಲಾ ಸೆಷನ್ಸ್ ಹಾಗೂ ಹೈಕೋರ್ಟ್‌ನಲ್ಲಿ ಜಾಮೀನು ರದ್ದಾದ ಬೆನ್ನಲ್ಲೇ ತಲೆ ಮರೆಸಿಕೊಂಡಿದ್ದ. ಹೀಗಾಗಿ ಉಡುಪಿ ಸೆನ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೈಸೂರು ಜಿಲ್ಲೆ ನಂಜನಗೂಡು ಬಳಿ ಆರೋಪಿಯನ್ನು ಬಂಧಿಸಿದ್ದಾರೆ. ನ್ಯಾಯಾಲಯವು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ಘಟನೆ ಹಿನ್ನೆಲೆ:
ದುಬೈನ ಫಾರ್ಚ್ಯೂನ್ ಗ್ರೂಫ್ ಆಫ್ ಹೋಟೆಲ್ಸ್‌ನ ಹೋಟೆಲೊಂದಕ್ಕೆ ಉದ್ಯೋಗಕ್ಕೆ ಸೇರಿದ್ದ ನಾಗೇಶ್ ಪೂಜಾರಿಯು ₹2.50 ಕೋಟಿಗೂ ಅಧಿಕ ವಂಚಿಸಿದ್ದ. ಈ ಬಗ್ಗೆ ಹೋಟೆಲ್ ಮ್ಯಾನೇಜರ್ ಸುನೀಲ್ ಕುಮಾರ್ ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ಆರೋಪಿ ನಾಗೇಶ್ ಪೂಜಾರಿ ತನ್ನ ಮೇಲಿನ ಎಫ್‌ಐಆರ್ ರದ್ದು ಕೋರಿ 2023ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿ ವಜಾಗೊಂಡಿತ್ತು. ನಂತರ ಆರೋಪಿಯು ಕುಂದಾಪುರದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ, ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಕೋರ್ಟ್ ಆದೇಶ ಮರೆಮಾಚಿ ಜಾಮೀನು ಪಡೆದಿದ್ದ:
ಈ ನಡುವೆ ಆರೋಪಿಯು ಹೈಕೋರ್ಟ್ ಮತ್ತು ಸೆಷನ್ಸ್ ಕೋರ್ಟ್‌ಗಳ ಆದೇಶ ಮರೆಮಾಚಿ ಬ್ರಹ್ಮಾವರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶರಣಾಗಿ 2023ರ ಆಗಸ್ಟ್‌ನಲ್ಲಿ ಜಾಮೀನು ಪಡೆದುಕೊಂಡಿದ್ದ. ಈ ಜಾಮೀನು ಆದೇಶವನ್ನು ಪ್ರಶ್ನಿಸಿ ಪೊಲೀಸರು ಜಿಲ್ಲಾ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೆಎಂಎಫ್‌ಸಿ ನ್ಯಾಯಾಲಯ ನೀಡಿದ್ದ ಜಾಮೀನು ರದ್ದುಗೊಳಿಸಿ ಆದೇಶಿಸಿತ್ತು.
ಈ ತೀರ್ಪಿನ ಬಳಿಕ ಆರೋಪಿ ತನ್ನ ಪರ ವಕೀಲರ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಜಾಮೀನು ರದ್ದುಗೊಳಿಸಿತ್ತು. ಫಾರ್ಚೂನ್ ಗ್ರೂಫ್ ಪರ ಹೈಕೋರ್ಟ್ ನ್ಯಾಯವಾದಿ ಪ್ರಸನ್ನ ಶೆಟ್ಟಿ.ಕೆರೆಬೆಟ್ಟು ವಾದಿಸಿದ್ದರು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? ಫಾರ್ಚ್ಯೂನ್ ಗ್ರೂಪ್ ಮತ್ತು ಭಾರತದ ಆಡಳಿತ ನಿರ್ದೇಶಕ ವಿ. ಪ್ರವೀಣ್ ಕುಮಾರ್ ಶೆಟ್ಟಿ ಅವರು ಕಳೆದ 8 ವರ್ಷಗಳ ಹಿಂದೆ ಆರೋಪಿ ನಾಗೇಶ್ ಪೂಜಾರಿಯನ್ನು ಸಂದರ್ಶನ ನಡೆಸಿ ದುಬೈನ ಹೋಟೆಲ್‌ಗೆ ಅಕೌಂಟೆಂಟ್ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದರು. 2022 ಮುಖ್ಯ ಅಕೌಂಟೆಂಟ್ ಆಗಿ ಬಡ್ತಿ ಪಡೆದಿದ್ದ ನಾಗೇಶ್ ಪೂಜಾರಿ 2023ರಲ್ಲಿ ತನ್ನ ಮದುವೆಯ ಹಿನ್ನೆಲೆ 3 ತಿಂಗಳು ರಜೆ ಪಡೆದು ದುಬೈನಿಂದ ಊರಿಗೆ ಬಂದಿದ್ದ. ಬಳಿಕ 15 ದಿನ ಹೆಚ್ಚುವರಿ ರಜೆಗೆ ಮನವಿ ಮಾಡಿದ್ದ. ದುಬೈನಲ್ಲಿ ಕೆಲಸದ ಒತ್ತಡ ಹೆಚ್ಚಿದ್ದರಿಂದ ರಜೆ ನಿರಾಕರಿಸಲಾಗಿತ್ತು.
ಬಳಿಕ ಆರೋಪಿಯು ಇ-ಮೇಲ್ ಮುಖಾಂತರ ಎಚ್‌ಆರ್‌ಗೆ ರಾಜೀನಾಮೆ ಪತ್ರ ಕಳುಹಿಸಿದ್ದ. ಈತನ ಅಸಹಜ ವರ್ತನೆಯಿಂದ ಅನುಮಾನಗೊಂಡು ಆತನ ಕೆಲಸ ಮಾಡುತ್ತಿದ್ದ ಹೋಟೆಲ್‌ನ ಲೆಕ್ಕ ಪುಸ್ತಕಗಳು ಹಾಗೂ ನಗದು ವಹಿವಾಟುಗಳು ಮತ್ತು ಬ್ಯಾಂಕ್ ಸ್ಟೇಟೆಮೆಂಟ್ ಜತೆಗೆ ಹೋಲಿಕೆ ಮಾಡಿದಾಗ ಆದಾಯ ಹೊರತಾಗಿ ದೊಡ್ಡ ಪ್ರಮಾಣದ ನಗದು ಕಾಣಯಾಗಿರುವುದು ಗೊತ್ತಾಗಿತ್ತು. ಆರೋಪಿಯು ಹೋಟೆಲ್ ಆದಾಯದಲ್ಲಿ ಬಂದ ನಗದನ್ನು ಹೋಟೆಲ್ ಬ್ಯಾಂಕ್ ಖಾತೆಗೆ ಜಮೆ ಮಾಡದೆ, ಭಾರತದಲ್ಲಿನ ತನ್ನ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು.