ಕೇಂದ್ರ ಬಜೆಟ್‌ನಿಂದ ಬಿಹಾರದ ಬೆಳವಣಿಗೆಗೆ ವೇಗ : ಮುಖ್ಯ ಮಂತ್ರಿ ನಿತೀಶ್‌ ಕುಮಾರ್‌

KannadaprabhaNewsNetwork | Updated : Feb 02 2025, 04:39 AM IST

ಸಾರಾಂಶ

 ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಹಾರದ ಮುಖ್ಯಮಂತ್ರಿ, ಜೆಡಿಯು ಪಕ್ಷದ ನಾಯಕ ನಿತೀಶ್‌ ಕುಮಾರ್‌ ಕೇಂದ್ರದ ಬಜೆಟ್‌ನಿಂದಾಗಿ ಬಿಹಾರದ ಅಭಿವೃದ್ಧಿಗೆ ವೇಗ ನೀಡಲು ಸಹಕಾರಿಯಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪಟನಾ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಹಾರದ ಮುಖ್ಯಮಂತ್ರಿ, ಜೆಡಿಯು ಪಕ್ಷದ ನಾಯಕ ನಿತೀಶ್‌ ಕುಮಾರ್‌ ಕೇಂದ್ರದ ಬಜೆಟ್‌ನಿಂದಾಗಿ ಬಿಹಾರದ ಅಭಿವೃದ್ಧಿಗೆ ವೇಗ ನೀಡಲು ಸಹಕಾರಿಯಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಬಜೆಟ್‌ ಬಗ್ಗೆ ಮಾತನಾಡಿದ ಅವರು, ಮಖನಾ ಮಂಡಳಿ ಸ್ಥಾಪನೆ, ಗ್ರೀನ್‌ಫೀಲ್ಡ್‌ ಏರ್ಪೋರ್ಟ್‌ಗಳು ಬಿಹಾರದ ಭವಿಷ್ಯದ ಅವಶ್ಯಕತೆಯನ್ನು ಪೂರೈಸಿ ಅಂತಾರಾಷ್ಟ್ರೀಯ ವಿಮಾನಗಳ ಆಗಮನಕ್ಕೆ ಸಹಕಾರಿಯಾಗಲಿದೆ. ಐಐಟಿ ಪಟನಾದ ಸಾಮರ್ಥ್ಯ ಹೆಚ್ಚಳವು ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣವನ್ನು ಹೆಚ್ಚಿಸುತ್ತದೆ. ಇದು ಪ್ರಗತಿಶೀಲ ಮತ್ತು ಭವಿಷ್ಯಮುಖಿಯಾಗಿದ್ದು, ರಾಜ್ಯದ ಬೆಳವಣಿಗೆಯನ್ನು ಇಮ್ಮಡಿಗೊಳಿಸುತ್ತದೆ ಎಂದರು.

12 ಲಕ್ಷ ಆದಾಯಕ್ಕೆ ಶೂನ್ಯ ತೆರಿಗೆ ಬಗ್ಗೆ ಮಾತನಾಡಿದ ನಿತೀಶ್‌, ಆದಾಯ ತೆರಿಗೆಯಲ್ಲಿನ ಬದಲಾವಣೆಯು ಮಧ್ಯಮ ವರ್ಗಕ್ಕೆ ಸಹಕಾರಿಯಾಗಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಬಿಹಾರದ ಜನತೆ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದರು.

ಬಜೆಟ್‌ನಲ್ಲಿ ಬಿಹಾರಕ್ಕೆ ಬಂಪರ್‌ ಅನುದಾನ! 

2025ರ ಕೇಂದ್ರ ಬಜೆಟ್‌ನಲ್ಲಿ ಹೆಚ್ಚು ಅನುದಾನ ಬಾಚಿಕೊಂಡಿದ್ದು ಬಿಹಾರ. ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದ್ದು, ಈ ವರ್ಷಾಂತ್ಯಕ್ಕೆ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಭರ್ಜರಿ ಅನುದಾನ ಘೋಷಿಸುವ ಮೂಲಕ ಆ ರಾಜ್ಯದ ಮತದಾರರನ್ನು ಸೆಳೆಯಲು ಕೇಂದ್ರ ರಣತಂತ್ರ ಹೂಡಿದೆ. ಮತ್ತೊಂದು ಪ್ರಮುಖ ಕಾರಣವೆಂದರೆ ಮುನಿಸಿಕೊಂಡಿರುವ ಬಿಜೆಪಿಯ ಮಿತ್ರ ಪಕ್ಷ ಜೆಡಿಯುನ ಮುಖಂಡ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ರ ಮನವೊಲಿಕೆಯ ಯತ್ನ.

ಇತ್ತೀಚೆಗಷ್ಟೇ ಮಣಿಪುರ ಚುನಾವಣೆಯಲ್ಲಿ ಜೆಡಿಯು, ಬಿಜೆಪಿಗೆ ಬೆಂಬಲಿಸುವುದಿಲ್ಲ ಎಂದು ನಿತೀಶ್‌ ಸ್ಪಷ್ಟಪಡಿಸಿದ್ದರು. ಹೀಗಾಗಿ, ಬಿಹಾರ ಚುನಾವಣೆಯಲ್ಲೂ ಬಿಜೆಪಿಗೆ ಹಿನ್ನಡೆ ಉಂಟಾಗಬಾರದು ಎನ್ನುವ ಮುಂದಾಲೋಚನೆಯಿಂದ ಬಿಹಾರಕ್ಕೆ ಹೆಚ್ಚಿನ ಅನುದಾನ ಘೋಷಣೆ ಮಾಡಲಾಗಿದೆ.ಕಳೆದ ವರ್ಷ ಕೇಂದ್ರದಲ್ಲಿ 3ನೇ ಬಾರಿಗೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರಲು ನೆರವಾಗಿದ್ದ ಚಂದ್ರಬಾಬು ನಾಯ್ಡು ಹಾಗೂ ನಿತೀಶ್‌ ಕುಮಾರ್‌ರ ಆಂಧ್ರ ಪ್ರದೇಶ ಹಾಗೂ ಬಿಹಾರ ರಾಜ್ಯಗಳಿಗೆ ಭಾರೀ ನೆರವು ಘೋಷಿಸಲಾಗಿತ್ತು. ಈ ಬಾರಿಯೂ ದೊಡ್ಡ ಪ್ರಮಾಣದಲ್ಲಿ ಅನುದಾನ ಗಿಟ್ಟಿಸಿಕೊಳ್ಳುವಲ್ಲಿ ನಿತೀಶ್‌ ಯಶಸ್ವಿಯಾಗಿದ್ದಾರೆ.

ಬಿಹಾರದ ಮಧುಬಾನಿ ಸೀರೆಯುಟ್ಟುನಿರ್ಮಲಾ ಬಜೆಟ್ ಮಂಡನೆ!ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಬಜೆಟ್‌ ಮಂಡನೆಗೆ ಬಿಹಾರದ ಮಧುಬಾನಿ ಸೀರೆಯನ್ನುಟ್ಟು ಬಂದಿದ್ದರು. ಇದು ಬಿಹಾರದ ಜನರ ಮನಸೆಳೆಯುವ ಪ್ರಯತ್ನವೂ ಆಗಿರಬಹುದು ಎಂದು ಸಾಮಾಜಿಕ ತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.ಎಲ್‌ಜೆಪಿ, ಜೆಡಿಯು ಮೆಚ್ಚುಗೆಬಿಹಾರಕ್ಕೆ ಭರ್ಜರಿ ಅನುದಾನ ನೀಡಿದ್ದನ್ನು ಲೋಕ ಜನ ಶಕ್ತಿ ಪಾರ್ಟಿ (ರಾಮ್‌ವಿಲಾನ್‌ ಪಾಸ್ವಾನ್‌) ನಾಯಕ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ ಸ್ವಾಗತಿಸಿದ್ದಾರೆ. ‘ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಹಾಗೂ ನಿರ್ವಹಣೆ ಕೇಂದ್ರವನ್ನು ಬಿಹಾರದಲ್ಲಿ ಸ್ಥಾಪನೆ ಮಾಡುವುದರಿಂದ ರಾಜ್ಯದ ಪಶ್ಚಿಮ ಭಾಗಕ್ಕೆ ಅನುಕೂಲವಾಗಲಿದೆ. ರೈತರಿಗೆ ತಮ್ಮ ಬೆಳೆಗಳಿಗೆ ಉತ್ತಮ ಬೆಲೆ ಸಿಗಲಿದ್ದು, ಉತ್ಪಾದನೆಯ ಗುಣಮಟ್ಟವೂ ಹೆಚ್ಚಲಿದೆ’ ಎಂದಿದ್ದಾರೆ.ಜೆಡಿಯು ಕಾರ್ಯಾಧ್ಯಕ್ಷ ಸಂಜಯ್‌ ಝಾ, ಬಿಹಾರದಲ್ಲಿ ಮಖಾನಾ ಮಂಡಳಿ ಸ್ತಾಪನೆ ಮಾಡುವುದಾಗಿ ಕೇಂದ್ರ ಘೋಷಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ರೈತರು ಹಾಗೂ ಉದ್ಯಮಿಗಳಿಗೆ ಹೊಸ ಅವಕಾಶಗಳು ಸಿಗಲಿವೆ ಎಂದಿದ್ದಾರೆ.ಬಾಕ್ಸ್

ಬಿಹಾರಕ್ಕೆ ಸಿಕ್ಕಿದ್ದೇನು?

ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಬಿಹಾರದಲ್ಲಿ ಮಖಾನಾ (ತಾವರೆ ಬೀಜ) ಮಂಡಳಿ ಸ್ತಾಪನೆ ಮಾಡುವುದಾಗಿ ಘೋಷಿಸಿದ್ದಾರೆ. ಪಶ್ಚಿಮ ಕೋಸಿ ನಾಲೆಗೆ ವಿಶೇಷ ಅನುದಾನ ಹಾಗೂ ಪಾಟ್ನಾ ಐಐಟಿ ಅಭಿವೃದ್ಧಿಗೂ ನೆರವು ಘೋಷಣೆ ಮಾಡಲಾಗಿದೆ.ಬಿಹಾರಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಕೇಂದ್ರ ಸ್ಥಾಪಿಸುವುದಾಗಿ ಘೋಷಿಸಿದ ನಿರ್ಮಲಾ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ವಿಮಾನ ನಿಲ್ದಾಣಗಳನ್ನು ನಿರ್ಮಿಸುವುದಾಗಿಯೂ ತಿಳಿಸಿದರು.

‘ಬಿಹಾರದಲ್ಲಿ ಮಖಾನಾ ಮಂಡಳಿ ಸ್ಥಾಪನೆ ಮಾಡುವುದರಿಂದ, ರಾಜ್ಯದಲ್ಲಿ ಅದರ ಉತ್ಪನ್ನ ಹಾಗೂ ಸಂಸ್ಕರಣೆಗೆ ಅನುಕೂಲವಾಗಲಿದೆ. ಪಶ್ಚಿಮ ಕೋಸಿ ನಾಲೆಗೆ ಕೇಂದ್ರವು ಆರ್ಥಿಕ ನೆರವು ಒದಗಿಸಲಿದ್ದು, ಇದರಿಂದ ಮಿಥಿಲಾಂಚಲ ಪ್ರಾಂತ್ಯದಲ್ಲಿ ಸುಮಾರು 50000 ಹೆಕ್ಟೇರ್‌ ಪ್ರದೇಶದ ರೈತರಿಗೆ ಸಹಕಾರಿಯಾಗಲಿದೆ’ ಎಂದು ನಿರ್ಮಲಾ ಹೇಳಿದರು.

Share this article