ಮಹಿಳೆ ಸಾವಿಗೆ ತೆಲುಗು ನಟ, ಪುಷ್ಪ- 2 ಖ್ಯಾತಿಯ ಅಲ್ಲು ಅರ್ಜುನ್ ಬಂಧನ : ವ್ಯಾಪಕ ಜನಾಕ್ರೋಶ

KannadaprabhaNewsNetwork |  
Published : Dec 14, 2024, 12:45 AM ISTUpdated : Dec 14, 2024, 04:57 AM IST
ಅಲ್ಲು ಅರ್ಜುನ್ | Kannada Prabha

ಸಾರಾಂಶ

ತೆಲುಗು ನಟ, ಪುಷ್ಪ- 2 ಖ್ಯಾತಿಯ ಅಲ್ಲು ಅರ್ಜುನ್ ಬಂಧನವನ್ನು ಚಿತ್ರರಂಗದವರು, ರಾಜಕೀಯ ನಾಯಕರು ಖಂಡಿಸಿದ್ದಾರೆ.

ಹೈದರಾಬಾದ್‌: ತೆಲುಗು ನಟ, ಪುಷ್ಪ- 2 ಖ್ಯಾತಿಯ ಅಲ್ಲು ಅರ್ಜುನ್ ಬಂಧನವನ್ನು ಚಿತ್ರರಂಗದವರು, ರಾಜಕೀಯ ನಾಯಕರು ಖಂಡಿಸಿದ್ದಾರೆ.

ಆಂಧ್ರ ಮಾಜಿ ಸಿಎಂ ಜಗನ್ಮೋಹನ ರೆಡ್ಡಿ ಟ್ವೀಟ್ ಮಾಡಿ, ‘ಕಾಲ್ತುಳಿತಕ್ಕಾಗಿ ಅವರನ್ನು ದೂಷಿಸುವುದು, ಕ್ರಿಮಿನಲ್ ಕೇಸು ಹಾಕುವುದು, ಬಂಧಿಸುವುದು ನ್ಯಾಯಯುತ ಅಥವಾ ಸ್ವೀಕಾರಾರ್ಹವಲ್ಲ, ಏಕೆಂದರೆ ಅವರು ದುರಂತ ಘಟನೆಯಲ್ಲಿ ಭಾಗಿಯಲ್ಲ’ ಎಂದಿದ್ದಾರೆ.ಕೇಂದ್ರ ಸಚಿವ ಬಂಡಿ ಸಂಜಯ್‌ ಕುಮಾರ್‌, ‘ ಭಾರತೀಯ ಚಿತ್ರರಂಗಕ್ಕೆ ಜಾಗತಿಕ ಮನ್ನಣೆಯನ್ನು ತೆಗೆದುಕೊಂಡ ನಾಯಕನನ್ನು ಇದಕ್ಕಿಂತ ಉತ್ತಮವಾಗಿ ನಡೆಸಿಕೊಳ್ಳಬಹುದಿತ್ತು. ಈ ನಿರ್ಲಕ್ಷ್ಯ ಮತ್ತು ಅಸಮರ್ಪಕ ನಿರ್ವಹಣೆ ಸ್ವೀಕಾರ್ಹವಲ್ಲ’ ಎಂದಿದ್ದಾರೆ.

ಬಿಆರ್‌ಎಸ್‌ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್, ‘ಅಲ್ಲು ಅರ್ಜುನ್ ಅವರನ್ನು ಸಾಮಾನ್ಯ ಅಪರಾಧಿಯಂತೆ ನಡೆಸಿಕೊಳ್ಳುವುದು ಆಕ್ಷೇಪಾರ್ಹವಾದುದು ಎಂದಿದ್ದಾರೆ.ಹಿರಿಯ ನಟ ಎನ್. ಬಾಲಕೃಷ್ಣ, ಬಿಜೆಪಿ ನಾಯಕ ಟಿ. ರಾಜಾ ಸಿಂಗ್, ‘ಈ ಘಟನೆ ಅನ್ಯಾಯ. ಇದಕ್ಕೆ ಸಿಎಂ ಹೊಣೆ’ ಎಂದಿದ್ದು, ಅಲ್ಲು ಅರ್ಜುನ್ ಪರ ನಿಲ್ಲುವುದಾಗಿ ಹೇಳಿದ್ದಾರೆ. ಅಲ್ಲು ಅರ್ಜುನ್ ಬಂಧನಕ್ಕೆ ಬಾಲಿವುಡ್‌ ನಟ ವರುಣ್ ಧವನ್ ಕೂಡ ಪ್ರತಿಕ್ರಿಯಿಸಿದ್ದು, ‘ ಸುರಕ್ಷತಾ ಪ್ರೋಟೋಕಾಲ್‌ಗಳು ಒಬ್ಬ ನಟ ಸ್ವತಃ ತೆಗೆದುಕೊಳ್ಳಬಹುದಾದ ವಿಷಯವಲ್ಲ. ಈ ದುರದೃಷ್ಟಕರ ಘಟನೆಗೆ ನಟನನ್ನು ಮಾತ್ರ ದೂಷಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

ಅಲ್ಲು ಅರ್ಜುನ್‌ ಬಂಧನ ಸರಿ: ಸಿಎಂ ರೇವಂತ ರೆಡ್ಡಿ 

ಹೈದರಾಬಾದ್: ನಟ ಅಲ್ಲು ಅರ್ಜುನ್‌ ಬಂಧಿಸಿದ್ದಕ್ಕೆ ಟೀಕೆಗೆ ಒಳಗಾಗಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಮೌನ ಮುರಿದಿದ್ದು, ಬಂಧನವನ್ನು ಸಮರ್ಥಿಸಿದ್ದಾರೆ.ಶುಕ್ರವಾರ ತಮ್ಮ ವಿರುದ್ಧ ಕೇಳಿಬಂದ ಟೀಕೆಗೆ ಪ್ರತಿಕ್ರಿಯಿಸಿರುವ ಅವರು, ‘ಈ ಹಿಂದೆ ಸಲ್ಮಾನ್‌ ಖಾನ್‌, ಸಂಜಯ ದತ್ ಬಂಧನ ಆಗಿರಲಿಲ್ಲವೇ? ಅಲ್ಲು ಜನರನ್ನು ಹುಚ್ಚೆಬ್ಬಿಸುವ ವ್ಯಕ್ತಿ, ಅನುಮತಿ ಇಲ್ಲದೇ ಅಲ್ಲು ಬಂದಿದ್ದರಿಂದ 1 ಸಾವಾಗಿದೆ. ಅನೇಕರಿಗೆ ತೊಂದರೆಯಾಗಿದೆ. ಅದಕ್ಕೆ ಕೇಸು ದಾಖಲಿಸಲೇಬಾರದೇ? ಜನಸಾಮಾಣ್ಯನಾದರೆ ಒಂದೇ ದಿನದಲ್ಲಿ ಬಂಧಿತನಾಗುತ್ತಿದ್ದ. ಸೆಲೆಬ್ರಿಟಿಗಳಿಗೆ ಬೇರೆ ಕಾನೂನು ಇಲ್ಲ. ಎಲ್ಲರಿಗೂ ಕಾನೂನು ಒಂದೇ’ ಎಂದರು.‘ಕಾನೂನು ತನ್ನದೇ ಆದ ಪ್ರಕ್ರಿಯೆ ನಡೆಸುತ್ತದೆ ಮತ್ತು ಪ್ರಕರಣದ ತನಿಖೆಯಲ್ಲಿ ಯಾರೂ ಮಧ್ಯಪ್ರವೇಶಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಅಲ್ಲು ಆಗಮನಕ್ಕೆ ಪೊಲೀಸರ ಅನುಮತಿ ಕೇಳಿದ್ದೆವು: ಥೇಟರ್‌ ವಾದ

ಹೈದರಾಬಾದ್‌: ‘ಪುಷ್ಪ-2’ ಸಿನಿಮಾದ ಪ್ರೀಮಿಯರ್‌ ಪ್ರದರ್ಶನದ ವೇಳೆ ಅಲ್ಲು ಅರ್ಜುನ್‌ರ ಅನಿರೀಕ್ಷಿತ ಆಗಮನದಿಂದ ಉಂಟಾದ ನೂಕುನುಗ್ಗಲಲ್ಲಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡ ಸಂಬಂಧ ನಟನನ್ನು ಬಂಧಿಸಲಾಗಿದೆ. ಅದರ ಬೆನ್ನಲ್ಲೇ ಮಾತನಾಡಿದ ಹೈದರಾಬಾದ್‌ ಪೊಲೀಸರು, ‘ಅಲ್ಲು ಅರ್ಜುನ್‌ ಬರುತ್ತಿರುವ ಬಗ್ಗೆ ಅವರಾಗಲೀ, ಥೇಟರ್‌ನವರಾಗಲಿ ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ’ ಎಂದು ಹೇಳಿದ್ದರು.ಆದರೆ ಇದೀಗ ಪ್ರೀಮಿಯರ್‌ ಪ್ರದರ್ಶನವಿದ್ದ ಸಂಧ್ಯಾ 70ಎಂಎಂ ಥೇಟರ್‌ನವರು ಡಿ.2ರಂದೇ ಪೊಲೀಸರಿಗೆ ಬರೆದಿದ್ದ ಪತ್ರವೊಂದು ಇದೀಗ ಬಹಿಂಗವಾಗಿದೆ. ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಹಾಗೂ ಚಿತ್ರತಂಡ ಆಗಮಿಸುತ್ತಿರುವ ಕಾರಣ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಮಾಡುವಂತೆ ಅದರಲ್ಲಿ ಕೋರಲಾಗಿತ್ತು ಎಂದು ಥೇಟರ್‌ ಹೇಳಿದೆ.

ಅಲ್ಲು ವಿರುದ್ಧದ ಕೇಸು ಕೈಬಿಡಲು ಸಿದ್ಧ: ಕಾಲ್ತುಳಿತ ಸಂತ್ರಸ್ತೆ ಪತಿ ಹೇಳಿಕೆ

ಹೈದರಾಬಾದ್‌: ಪುಷ್ಪ-2 ಸಿನಿಮಾದ ಪ್ರದರ್ಶನದ ವೇಳೆ ಕಾಲ್ತುಳಿತಕ್ಕೆ ಮಹಿಳೆ ಸಾವನ್ನಪ್ಪಿದ್ದ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅವರ ಬಂಧನದ ಬಗ್ಗೆ ಮೃತ ಮಹಿಳೆ ರೇವತಿ ಅವರ ಪತಿ ಭಾಸ್ಕರ್ ಪ್ರತಿಕ್ರಿಯಿಸಿದ್ದು ‘ನಟನ ಬಂಧನದ ಬಗ್ಗೆ ತಿಳಿದಿರಲಿಲ್ಲ. ಪ್ರಕರಣವನ್ನು ಕೈ ಬಿಡಲು ಸಿದ್ಧರಾಗಿದ್ದೇವೆ’ ಎಂದಿದ್ದಾರೆ.ಶುಕ್ರವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ‘ ನಾನು ಪ್ರಕರಣವನ್ನು ಹಿಂಪಡೆಯಲು ಸಿದ್ಧನಿದ್ದೇನೆ. ಅಲ್ಲು ಅರ್ಜುನ್ ಅವರ ಬಂಧನದ ಬಗ್ಗೆ ತಿಳಿದಿರಲಿಲ್ಲ. ನನ್ನ ಪತ್ನಿಯ ಸಾವಿಗೂ ಮತ್ತು ನಟನಿಗೂ ಯಾವುದೇ ಸಂಬಂಧವಿಲ್ಲ’ ಎಂದಿದ್ದಾರೆ.ಈ ಮುಂಚೆ ಅಲ್ಲು ಅರ್ಜುನ್‌ ಅವರು ನಿರ್ಲಕ್ಷ್ಯ ವಹಿಸಿ ಥೇಟರ್‌ಗೆ ಬಂದಿದ್ದರಿಂದ ಕಾಲ್ತುಳಿತ ಸಂಭವಿಸಿ ತಮ್ಮ ಪತ್ನಿ ಸಾವಿಗೀಡಾದರು ಎಂದು ಭಾಸ್ಕರ್‌ ದೂರಿದ್ದರು.

ಅಲ್ಲು ಅರ್ಜುನ್‌ ಮನೆಗೆ ಚಿರಂಜೀವಿ ಭೇಟಿ

ಹೈದರಾಬಾದ್‌: ಅಲ್ಲು ಅರ್ಜುನ್‌ ಬಂಧನದ ಬಳಿಕ ನಟ ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ಅವರು ಅರ್ಜುನ್‌ ಮನೆಗೆ ಭೇಟಿ ನೀಡಿದರು ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಅಲ್ಲು ಬಂಧನ ಹೃದಯವಿದ್ರಾವಕ: ರಶ್ಮಿಕಾ ಮಂದಣ್ಣ

ನವದೆಹಲಿ: ಪುಷ್ಪ-2 ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆ ಸಾವಿನ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಬಂಧನಕ್ಕೆ ಪುಷ್ಪ-2 ಸಿನಿಮಾದ ನಟಿ ರಶ್ಮಿಕಾ ಮಂದಣ್ಣ ಆಘಾತ ವ್ಯಕ್ತಪಡಿಸಿದ್ದಾರೆ.‘ಸದ್ಯ ನಾನು ಏನು ನೋಡುತ್ತಿದ್ದೇನೋ ಅದನ್ನು ನನಗೆ ನಂಬಲಾಗುತ್ತಿಲ್ಲ. ಘಟನೆ ನಡೆದಿರುವುದು ದುರಾದೃಷ್ಟಕರ ಮತ್ತು ದುಃಖಕರ ಸಂಗತಿ. ಆದರೆ ಎಲ್ಲವನ್ನೂ ಒಬ್ಬ ವ್ಯಕ್ತಿಯ ಮೇಲೆ ಆರೋಪಿಸುವುದು ಬೇಸರದ ಸಂಗತಿದೆ. ಈ ಪರಿಸ್ಥಿತಿಯು ನಂಬಲಾಗದಂತಿದೆ ಮತ್ತು ಹೃದಯವಿದ್ರಾವಕವಾಗಿದೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಧಿಕಾರಕ್ಕಾಗಿ ಅಪವಿತ್ರ ರಾಜಕೀಯ ಮೈತ್ರಿ - ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೈರಿಗಳ ಮಿಲನ
ಭಾನುವಾರವೇ ಕೇಂದ್ರ ಬಜೆಟ್‌ ಮಂಡನೆ ನಿಗದಿ