ನವದೆಹಲಿ: ಅನಿಯಂತ್ರಿತ ಆನ್ಲೈನ್ ಗೇಮಿಂಗ್ ಆ್ಯಪ್‌ಗಳು ಉಗ್ರರಿಗೆ ಧನಸಹಾಯ, ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆಯಂತಹ ಕೃತ್ಯಗಳೊಂದಿಗೆ ನಂಟು ಹೊಂದಿವೆ. ಹಾಗಾಗಿ ಅವುಗಳ ನಿಯಂತ್ರಣಕ್ಕೆ ಕಠಿಣ ಕಾನೂನಿನ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ಈ ಮೂಲಕ ಕಠಿಣ ಕಾನೂನು ಜಾರಿಯ ತನ್ನ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದೆ.
ಈ ಕುರಿತು ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್ ಅನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ.
‘ಆನ್ಲೈನ್ ಗೇಮಿಂಗ್‌ಗಳು ಆರ್ಥಿಕ ವಂಚನೆ, ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ಮತ್ತು ಉಗ್ರರಿಗೆ ಧನಸಹಾಯದಂತಹ ಚಟುವಟಿಕೆಗಳಿಗೆ ನಂಟು ಹೊಂದಿರುವುದು ತಿಳಿದುಬಂದಿದೆ. ಇದರಿಂದ ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ವ್ಯವಸ್ಥೆ ಹಾಗೂ ದೇಶದ ಸಮಗ್ರತೆಗೆ ಬೆದರಿಕೆ ಉಂಟಾಗುತ್ತಿದೆ. ವ್ಯಾಪಕ ಜಾಹೀರಾತುಗಳು, ಸೆಲೆಬ್ರಿಟಿ ಮತ್ತು ಪ್ರಭಾವಿಗಳ ಪ್ರಚಾರಗಳ ಮೂಲಕ ಇವುಗಳಿಗೆ ಭರ್ಜರಿ ಮಾರುಕಟ್ಟೆ ದೊರೆಯುತ್ತಿದೆ. ಇದರಿಂದ ಯುವಜನತೆ ಮತ್ತು ದುರ್ಬಲ ವರ್ಗಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ’ ಎಂದು ಕೇಂದ್ರ ಅಫಿಡವಿಟ್‌ನಲ್ಲಿ ತಿಳಿಸಿದೆ.
2023ರ ಜನವರಿಯಿಂದ 2025ರ ಜುಲೈ ಅವಧಿಯಲ್ಲಿ ಆನ್ಲೈನ್ ಗೇಮಿಂಗ್ ಆ್ಯಪ್‌ಗಳ ಕಾರಣದಿಂದ ಕರ್ನಾಟಕದ 32 ಜನ ಆತ್ಮ*ತ್ಯೆಗೆ ಶರಣಾಗಿದ್ದಾರೆ. ತೆಲಂಗಾಣದಲ್ಲಿ 27, ತಮಿಳುನಾಡಿನಲ್ಲಿ 30 ಪ್ರಕರಣಗಳು ವರದಿಯಾಗಿವೆ. ಪ್ರತಿ ರಾಜ್ಯದ ವರದಿ ಮಾಡಿದರೆ ಈ ಸಂಖ್ಯೆ ಆಘಾತಕಾರಿಯಾಗಿರುತ್ತದೆ. ಈ ಆ್ಯಪ್‌ಗಳಿಂದ ದುಡ್ಡು ಕಳೆದುಕೊಳ್ಳುವುದು ದೇಶಾದ್ಯಂತ ಆತ್ಮ*ತ್ಯೆಗಳಿಗೆ ಪ್ರಮುಖ ಕಾರಣ ಎಂದು ಕೇಂದ್ರ ಕಳವಳ ವ್ಯಕ್ತಪಡಿಸಿದೆ.