ಉತ್ತರ ಪ್ರದೇಶದ ಸಂಭಲ್‌ ನಗರದ ಮಸೀದಿ ಸರ್ವೇ ವೇಳೆ ಹಿಂಸೆ : ಗೋಲಿಬಾರ್‌ಗೆ 3 ಬಲಿ

KannadaprabhaNewsNetwork | Updated : Nov 25 2024, 04:38 AM IST

ಸಾರಾಂಶ

ಉತ್ತರ ಪ್ರದೇಶದ ಸಂಭಲ್‌ ನಗರದ ಮುಘಲರ ಕಾಲದ ಮಸೀದಿಯೊಂದರ ಸರ್ವೆ ವಿಚಾರ ಭಾರಿ ಹಿಂಸಾಚಾರಕ್ಕೆ ತಿರುಗಿದ್ದು, ಭಾನುವಾರ ಸಂಭವಿಸಿದ ಗೋಲಿಬಾರ್‌ನಲ್ಲಿ ಮೂವರು ಸಾವನ್ನಪ್ಪಿದ್ದಾರೆ.

 ಸಂಭಲ್ : ಉತ್ತರ ಪ್ರದೇಶದ ಸಂಭಲ್‌ ನಗರದ ಮುಘಲರ ಕಾಲದ ಮಸೀದಿಯೊಂದರ ಸರ್ವೆ ವಿಚಾರ ಭಾರಿ ಹಿಂಸಾಚಾರಕ್ಕೆ ತಿರುಗಿದ್ದು, ಭಾನುವಾರ ಸಂಭವಿಸಿದ ಗೋಲಿಬಾರ್‌ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. 

ಇದೇ ವೇಳೆ ಭಾರಿ ಕಲ್ಲು ತೂರಾಟ, ಗುಂಡಿನ ದಾಳಿ ಹಾಗೂ ಬೆಂಕಿ ಹಚ್ಚುವಿಕೆ ಘಟನೆಗಳು ನಡೆದಿದ್ದು, 3 ಕಾರುಗಳು ಮತ್ತು 3 ಬೈಕ್‌ಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಘಟನೆ ಸಂಬಂಧ 15 ಮಂದಿಯನ್ನು ಬಂಧಿಸಲಾಗಿದೆ.‘ಮಸೀದಿಯು ಈ ಹಿಂದೆ ಹರಿಹರೇಶ್ವರ ದೇವಸ್ಥಾನವಾಗಿತ್ತು. 1529ರಲ್ಲಿ ಅದನ್ನು ಮುಘಲರ ಅರಸ ಬಾಬರ್‌ ಬೀಳಿಸಿದ ಹಾಗೂ ‘ಶಾಹಿ ಜಾಮಾ ಮಸೀದಿ’ ನಿರ್ಮಿಸಿದ್ದ. ಈ ಬಗ್ಗೆ ಮಸೀದಿಯಲ್ಲಿರುವ ಶಾಸನ, ಐನ್‌- ಎ-ಅಕ್ಬರಿ ಹಾಗೂ, ಬಾಬರ್‌ನಾಮಾದಲ್ಲೇ ಬರೆಯಲಾಗಿದೆ’ ಎಂದು ಆರೋಪಿಸಿ ಖ್ಯಾತ ವಕೀಲ ವಿಷ್ಣುಶಂಕರ ಜೈನ್‌ ಹಾಗೂ ಇತರರು ಕೋರ್ಟ್‌ ಮೊರೆ ಹೋಗಿದ್ದರು. ಹೀಗಾಗಿ ಕಾಶಿ ಜ್ಞಾನವಾಪಿ ಮಸೀದಿ ಮಾದರಿಯಲ್ಲೇ ಇದರ ಸಮೀಕ್ಷೆಗೆ ಉತ್ತರ ಪ್ರದೇಶ ಕೋರ್ಟ್‌ ಅನುಮತಿಸಿತ್ತು. 

ಈ ಸಂಬಂಧ ಮೊದಲ ಸಮೀಕ್ಷೆ ಕಳೆದ ವಾರ ನಡದಿತ್ತು. ಭಾನುವಾರ ಕೋರ್ಟ್‌ ಸೂಚನೆ ಮೇರೆಗೆ ‘ಅಡ್ವೋಕೇಟ್‌ ಕಮಿಶ್ನರ್‌’ ಅವರಿಂದ 2ನೇ ಸರ್ವೇ ಆರಂಭವಾಗಿತ್ತು. ಸರ್ವೇಯಲ್ಲಿ ವಕೀಲ ಜೈನ್‌ ಕೂಡ ಪಾಲ್ಗೊಂಡಿದ್ದರು.ಆದರೆ ಭಾನುವಾರ ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಸರ್ವೇ ವಿರೋಧಿಸಿ ವಕೀಲ ಜೈನ್‌ ಹಾಗೂ ಸಮೀಕ್ಷಾ ತಂಡದವರ ಮೇಲೆ ಭಾರಿ ಸಂಖ್ಯೆಯ ಉದ್ರಿಕ್ತರು ಕಲ್ಲು ತೂರಾಟದಲ್ಲಿ ತೊಡಗಿದರು. 

ಆವರಿಗೆ ಆಗ ಪೊಲೀಸರು ರಕ್ಷಣೆ ನೀಡಿ, ಲಘು ಲಾಠಿಪ್ರಹಾರ ನಡೆಸಿದರು ಹಾಗೂ ಅಶ್ರುವಾಯು ಸಿಡಿಸಿದರು. ಉದ್ರಿಕ್ತರು ಅಷ್ಟಕ್ಕೇ ಸುಮ್ಮನಾಗದೇ 3 ಬೈಕ್‌ ಹಾಗೂ 3 ಕಾರಿಗೆ ಬೆಂಕಿ ಹಚ್ಚಿದ್ದಾರೆ. ಕೆಲ ಉದ್ರಿಕ್ತರು, ಗನ್‌ಗಳನ್ನು ತಂದು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.‘ಆಗ ನಡೆದ ಘರ್ಷಣೆಯಲ್ಲಿ ನಯೀಮ್, ಬಿಲಾಲ್ ಮತ್ತು ನಿಮಾನ್ ಎಂಬ ಮೂವರು ಸಾವನ್ನಪ್ಪಿದ್ದಾರೆ.

 ಅಧಿಕಾರಿಗಳು ಸೇರಿದಂತೆ 20 ರಿಂದ 22 ಪೊಲೀಸರು ಗಾಯಗೊಂಡಿದ್ದಾರೆ. ಕೆಲವು ಪೊಲೀಸರಿಗೆ ಉದ್ರಿಕ್ತರು ನಡೆಸಿದ ಗುಂಡು ತಾಗಿವೆ. ಈ ಸಂಬಂಧ 15 ಜನರನ್ನು ಬಂಧಿಸಲಾಗಿದೆ’ ಎಂದು ಮೊರಾದಾಬಾದ್ ವಿಭಾಗೀಯ ಆಯುಕ್ತ ಅನನ್ಯ ಕುಮಾರ್‌ ತಿಳಿಸಿದ್ದಾರೆ. ಅಲ್ಲದೆ, ಉದ್ರಿಕ್ತರ ಬಳಿ ಗನ್‌ ಹೇಗೆ ಬಂದವು ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.

ಅಖಿಲೇಶ್ ಕಿಡಿ:ಸಂಭಲ್‌ ಗಲಭೆ ಉತ್ತರ ಪ್ರದೇಶ ಸರ್ಕಾರ ಪೋಷಿತ ಘಟನೆ. ರಾಜ್ಯದ ಉಪಚುನಾವಣೆಯಲ್ಲಿ ಬಿಜೆಪಿ ಅಕ್ರಮ ನಡೆಸಿ ಗೆದ್ದಿದೆ. ಈ ವಿಷಯ ಮುಚ್ಚಿಹಾಕಲು ಗಲಾಟೆಗೆ ಕುಮ್ಮಕ್ಕು ನೀಡಿದೆ ಎಂದು ಎಸ್ಪಿ ನೇತಾರ ಅಖಿಲೇಶ ಯಾದವ್ ಆರೋಪಿಸಿದ್ದಾರೆ.

Share this article