;Resize=(412,232))
ನವದೆಹಲಿ: ಇಷ್ಟು ದಿನ ಉಚಿತವಾಗಿದ್ದ ಯುಪಿಐ ಪಾವತಿಗಳ ಮೇಲೆ ಶುಲ್ಕ ವಿಧಿಸುವತ್ತ ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ. ಇದರನ್ವಯ 2000 ರು.ಗಿಂತ ಹೆಚ್ಚಿನ ಮೊತ್ತದ ವಹಿವಾಟಿಗೆ ಶುಲ್ಕ ವಿಧಿಸುವ ಸಾಧ್ಯತೆ ಇದೆ. ಈ ಶುಲ್ಕದ ಪ್ರಮಾಣ ಶೇ.0.25ರಿಂದ 0.4ರಷ್ಟಿರಲಿದೆ ಎನ್ನಲಾಗಿದೆ. ಆದರೆ ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ ಯುಪಿಐ ಪಾವತಿಗೆ ಯಾವುದೇ ಶುಲ್ಕ ಇರದು.
ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಮಸೂದೆಯನ್ವಯ ಝೀರೋ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ರದ್ದಾಗಲಿದೆ. ಅಂದರೆ ಯುಪಿಐ ಪಾವತಿ ಮೇಲೆ ಶುಲ್ಕ ವಿಧಿಸುವ ಅಧಿಕಾರ ಬ್ಯಾಂಕ್‌ಗಳಿಗೆ ಸಿಗಲಿದೆ. ಸದ್ಯ ಸರ್ಕಾರದ ಮುಂದಿರುವ ಪ್ರಸ್ತಾಪಗಳ ವಾರ್ಷಿಕ 1.5 ಕೋಟಿ ರು.ಗಿಂತ ಹೆಚ್ಚಿನ ವಹಿವಾಟು ನಡೆಸುವ ವ್ಯಾಪಾರಸ್ಥರ ಮೇಲೆ ಶುಲ್ಕ ಹೇರಲು ನಿರ್ಧರಿಸಲಾಗಿದೆ.
ಸದ್ಯ ದೇಶದಲ್ಲಾಗುತ್ತಿರುವ ಡಿಜಿಟಲ್ ಪಾವತಿಗಳ ಪೈಕಿ ಶೇ.5ರಷ್ಟು ಮಾತ್ರ 2 ಸಾವಿರ ರು. ಅಥವಾ ಅದಕ್ಕಿಂತ ದೊಡ್ಡ ಮೊತ್ತದ್ದಾಗಿದೆ. ಆದರೆ ಒಟ್ಟು ಪಾವತಿಗಳ ಮೊತ್ತಕ್ಕೆ ಹೋಲಿಸಿದರೆ 2 ಸಾವಿರ ರು.ಗಿಂತ ಹೆಚ್ಚಿನವುಗಳ ಮೌಲ್ಯ ಶೇ.65ರಷ್ಟು ಇದೆ.
ಈ ನಡುವೆ ವ್ಯಾಪಾರಿಗಳಿಗೆ ಮಾಡಲಾಗುವ 2 ಸಾವಿರ ರು.ಗಿಂತ ಹೆಚ್ಚಿನ ಪಾವತಿಗಳ ಮೇಲೆ ತೆರಿಗೆ ಹೇರಲು ಅವಕಾಶ ನೀಡುವ ಕಾನೂನು ತಿದ್ದುಪಡಿಯ ಬಗ್ಗೆ ಮಾತನಾಡಿರುವ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ‘ಯಾರಾದರೂ ಒಬ್ಬರು ಶುಲ್ಕ ಪಾವತಿಸಲೇಬೇಕು’ ಎಂದಿದ್ದಾರೆ.
‘ಸರ್ಕಾರ ಇನ್ನೂ ತಿದ್ದುಪಡಿ ತರುತ್ತಿದೆ. ಈ ಸಾರ್ವಜನಿಕ ಮೂಲಸೌಕರ್ಯದ (ಡಿಜಿಟಲ್ ಪಾವತಿ ವ್ಯವಸ್ಥೆ) ಬಲವರ್ಧನೆ ಮುಂದುವರಿಯಬೇಕು. ಇದಕ್ಕೆ ಖರ್ಚಾಗುತ್ತದೆ ಹಾಗೂ ಅದನ್ನು ಯಾರಾದರೂ ಭರಿಸಲೇಬೇಕು. ಇದರರ್ಥ ಬಳಕೆದಾರರಿಗೆ ಶುಲ್ಕ ವಿಧಿಸಲಾಗುವುದು ಎಂದಲ್ಲ. ಆ ಬಗ್ಗೆ ಚಿಂತನೆ ನಡೆಯುತ್ತಿದೆ’ ಎಂದು ಮಲ್ಹೋತ್ರಾ ಹೇಳಿದರು.
ಯುಪಿಎ ಮೂಲಕ ಪ್ರತಿ ತಿಂಗಳು 2300 ಕೋಟಿ ವಹಿವಾಟು ನಡೆಯುತ್ತಿದೆ. ಇಂಥ ವಹಿವಾಟಿನ ಮೊತ್ತ 30 ಲಕ್ಷ ಕೋಟಿ ರು.ನಷ್ಟಿದೆ. ಬ್ಯಾಂಕ್‌ಗಳು ಇಂಥ ಪಾವತಿ ವ್ಯವಸ್ಥೆ ಹೊಂದಿರುವುದಕ್ಕೆ ಸಾಕಷ್ಟು ಹಣ ವೆಚ್ಚ ಮಾಡುತ್ತಿವೆ. ಆದರೆ ಇದರಿಂದ ಅವುಗಳಿಗೆ ಯಾವುದೇ ಲಾಭ ಆಗುತ್ತಿಲ್ಲ. ಹೀಗಾಗಿ ಇದೇ ಸ್ಥಿತಿಯಲ್ಲಿ ಮುಂದುವರೆಯುವುದು ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂಬ ವಾದವಿದೆ. ಜೊತೆಗೆ ಆರ್ಥಿಕವಾಗಿ ಆದಾಯ ಲಭ್ಯವಾದರೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬಹುದು ಎಂಬುದು ಅವುಗಳ ವಾದ. ಹೀಗಾಗಿ ಅವುಗಳಿಗೆ ಅವಕಾಶ ಕಲ್ಪಿಸಲು ಈ ಮಸೂದೆ ಮಂಡನೆ ಮಾಡಲಾಗುತ್ತಿದೆ.
ಯಾವೆಲ್ಲ ವಹಿವಾಟಿಗೆ ಶುಲ್ಕ ಅನ್ವಯ?
- ವಾರ್ಷಿಕ 1.5 ಕೋಟಿ ರು.ಗಿಂತ ಹೆಚ್ಚಿನ ವಹಿವಾಟು ನಡೆಸುವ ವ್ಯಾಪಾರಸ್ಥರ ಮೇಲೆ ಶುಲ್ಕ
- ಅರ್ಥಾತ್ 1.5 ಕೋಟಿ ರು.ಗಿಂತ ಕಡಿಮೆ ವಹಿವಾಟು ನಡೆಸುವವರಿಗೆ ಶುಲ್ಕ ಅನ್ವಯ ಆಗಲ್ಲ
- ವ್ಯಕ್ತಿಯಿಂದ ವ್ಯಕ್ತಿಗೆ ಹಣ ಕಳಿಸಿದರೂ ಈ ಹಿಂದಿನಂತೆ ಯಾವುದೇ ಶುಲ್ಕ ತೆರಬೇಕಾಗಿಲ್ಲ
- ಸಂಸತ್ತಿನಲ್ಲಿ ಈ ಬಗ್ಗೆ ಮಸೂದೆ ಮಂಡನೆ । ಆದರೆ ಸರ್ಕಾರದ ಪ್ರಸ್ತಾಪಕ್ಕೆ ವಿಪಕ್ಷ ವಿರೋಧ
- ಜನರಿಗೆ ಯುಪಿಐ ಅವಲಂಬನೆ/ಗೀಳು ಹತ್ತಿಸಿ ಈ ರೀತಿ ಶುಲ್ಕ ಹೇರಿಕೆ ಸರಿಯಲ್ಲ: ವಿಪಕ್ಷ