ಲಖನೌ: ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ಎಸಗಿದ ವ್ಯಕ್ತಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 1 ಕೋಟಿ ರು. ದಂಡ ವಿಧಿಸುವ ಉತ್ತರ ಪ್ರದೇಶ ಸಾರ್ವಜನಿಕ ಪರೀಕ್ಷಾ ಅಕ್ರಮಗಳ ತಡೆ ಸುಗ್ರೀವಾಜ್ಞೆ-2024ಕ್ಕೆ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ.
ಸರ್ಕಾರ ನಡೆಸುವ ಸಾರ್ವಜನಿಕ ಪರೀಕ್ಷೆಯಲ್ಲಿ ನಕಲಿ ಪ್ರಶ್ನೆಪತ್ರಿಕೆಗಳನ್ನು ಹರಿಬಿಡುವುದು, ನಕಲಿ ಜಾಲತಾಣಗಳ ಮೂಲಕ ಸರ್ಕಾರಿ ಉದ್ಯೋಗದ ಜಾಹೀರಾತು ನೀಡುವುದನ್ನೂ ಸಹ ಪರೀಕ್ಷಾ ಅಕ್ರಮದ ವ್ಯಾಪ್ತಿಗೆ ತರಲಾಗಿದೆ. ಈ ಮೂಲಕ ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆ ತರಲು ಯತ್ನಿಸುವ ವ್ಯಕ್ತಿಗಳಿಗೆ ಜಾಮೀನು ಸಿಗದ ರೀತಿಯಲ್ಲಿ ಕಠಿಣ ಕಾನೂನುಗಳನ್ನು ಬಳಸಿ ಪ್ರಕರಣ ದಾಖಲಿಸಲು ಅವಕಾಶ ನೀಡಲಾಗಿದೆ.
ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ರದ್ದು ಮಾಡಲಾಗಿತ್ತು. ಹಾಗಾಗಿ ಚುನಾವಣೆ ಮುಗಿದ ಕೂಡಲೇ ಯೋಗಿ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.ಮುಂದಿನ ತಿಂಗಳು ಅಧಿವೇಶನದಲ್ಲಿ ಈ ಸುಗ್ರೀವಾಜ್ಞೆಯನ್ನು ಮಸೂದೆ ರೂಪದಲ್ಲಿ ಮಂಡಿಸಿ ಶಾಶ್ವತ ಕಾಯ್ದೆ ಮಾಡುವ ಉದ್ದೇಶವಿದೆ.