ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಮುಂದಾಗಿರುವ ಉತ್ತರಾಖಂಡ ಸರ್ಕಾರ ಶನಿವಾರ ಸಂಪುಟ ಸಭೆಯಲ್ಲಿ ಸಂಹಿತೆ ಬಗ್ಗೆ ಚರ್ಚಿಸಿದೆ.
ಡೆಹ್ರಾಡೂನ್: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಮುಂದಾಗಿರುವ ಉತ್ತರಾಖಂಡ ಸರ್ಕಾರ ಶನಿವಾರ ಸಂಪುಟ ಸಭೆಯಲ್ಲಿ ಸಂಹಿತೆ ಬಗ್ಗೆ ಚರ್ಚಿಸಿದೆ.
ಆದರೆ ಸಂಹಿತೆಗೆ ಅಂತಿಮ ರೂಪ ನೀಡಲು ಇನ್ನಷ್ಟು ಚರ್ಚೆಗಳು ಅಗತ್ಯ ಇರುವ ಕಾರಣ, ಮತ್ತೊಂದು ಸಂಪುಟ ಸಭೆ ಕರೆದು ಅಂಗೀಕರಿಸಲು ನಿರ್ಧರಿಸಿದೆ.
ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ‘ಸಂಹಿತೆಯ ಬಗ್ಗೆ ಇನ್ನಷ್ಟು ಚರ್ಚೆಯ ಅಗತ್ಯವಿದೆ.
ಹೀಗಾಗಿ ಇಂದಿನ ಸಭೆಯಲ್ಲಿ ಯಾವುದೇ ನಿರ್ಣಯ ಮಾಡದೇ, ಮತ್ತೊಂದು ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದಿದ್ದಾರೆ.
ಸೋಮವಾರ ರಾಜ್ಯ ವಿಧಾನಸಭೆಯ 4 ದಿನದ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಫೆ.6ರಂದು ಮಸೂದೆ ಮಂಡನೆ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.
ಇದು ಜಾರಿಯಾದರೆ ರಾಜ್ಯದ ಎಲ್ಲ ಜನರಿಗೆ ಮದುವೆ, ಆಸ್ತಿ ಹಂಚಿಕೆ ಮೊದಲಾದ ವಿಷಯಗಳಲ್ಲಿ ಸಮಾನ ಹಕ್ಕುಗಳು ಲಭಿಸಲಿವೆ ಹಾಗೂ ಈ ಕಾನೂನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಕೀರ್ತಿ ಉತ್ತರಾಖಂಡದ ಪಾಲಾಗಲಿದೆ.