;Resize=(412,232))
ನವದೆಹಲಿ: ಛಾಯಾ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿಸಿದ್ದ ಹಿರಿಯ ಛಾಯಾಗ್ರಾಹಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಘು ರಾಯ್ (83) ಅವರು ಪ್ರಾಸ್ಪೇಟ್ ಕ್ಯಾನ್ಸರ್‌ನಿಂದ ನಿಧನರಾದರು.
ಅವರು ಎರಡು ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಆ ಬಳಿಕ ಕೊಂಚ ಚೇತರಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಉಲ್ಬಣಗೊಂಡಿತ್ತು. ಇದರ ಜತೆಗೆ ವಯೋಸಹಜ ಅನಾರೋಗ್ಯವೂ ಅವರನ್ನು ಕಾಡಿತ್ತು. ಹೀಗಾಗಿ ಚಿಕಿತ್ಸೆ ಫಲಿಸದೆ ಅಗಲಿದರು. ಅವರು ಪತ್ನಿ ಗುರ್ಮೀತ್, 4 ಮಕ್ಕಳನ್ನು ಅಗಲಿದ್ದಾರೆ. ಭಾನುವಾರ ಸಂಜೆ ಅವರ ಅಂತ್ಯಕ್ರಿಯೆ ದಿಲ್ಲಿಯಲ್ಲಿ ನಡೆಯಿತು
1942 ರ ಡಿಸೆಂಬರ್ 18 ರಂದು ಆಗಿನ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರ್ ಪದವಿ ಪಡೆದಿದ್ದ ಅವರು 23ನೇ ವಯಸ್ಸಿನಲ್ಲಿ ಛಾಯಾಗ್ರಾಹಣ ಆರಂಭಿಸಿದ್ದರು. 1966 ರಲ್ಲಿ ದಿ ಸ್ಟೇಟ್ಸ್‌ಮನ್ ಪತ್ರಿಕೆಯ ಮುಖ್ಯ ಛಾಯಾಗ್ರಾಹಕರಾಗಿ ಸೇರಿದರು. ಆ ಬಳಿಕ ಹಲವು ಮಾಧ್ಯಮಗಳಲ್ಲಿ ವರದಿ ಮಾಡಿದ್ದರು.
ಹೆನ್ರಿ ಕಾರ್ಟಿಯರ್-ಬ್ರೆಸನ್ ಶಿಷ್ಯರಾಗಿದ್ದ ಇವರು 1972 ರ ಬಾಂಗ್ಲಾದೇಶ ನಿರಾಶ್ರಿತರ ಬಿಕ್ಕಟ್ಟು ಮತ್ತು 1984ರ ಭೋಪಾಲ್ ಅನಿಲ ದುರಂತದ ಸಂದರ್ಭದಲ್ಲಿ ಫೋಟೋ ಸೆರೆ ಹಿಡಿದಿದ್ದರು. ಇಂದಿರಾ ಗಾಂಧಿ, ದಲೈಲಾಮಾ, ಮದರ್ ತೆರೇಸಾ, ಸತ್ಯಜಿತ್ ರೇ, ಹರಿಪ್ರಸಾದ್ ಚೌರಾಸಿಯಾ ಮತ್ತು ಬಿಸ್ಮಿಲ್ಲಾ ಖಾನ್ ಸೇರಿದಂತೆ ಪ್ರಮುಖ ವ್ಯಕ್ತಿಗಳ ಫೋಟೋಗ್ರಫಿ ಮಾಡಿದ್ದರು. 1972ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು.