ಒಹಾಯೋ ಗವರ್ನರ್ ಹುದ್ದೆಗೆ ವಿವೇಕ್‌ ಸ್ಪರ್ಧೆ: ಪ್ರಚಾರ ಶುರು

KannadaprabhaNewsNetwork | Published : Feb 26, 2025 1:03 AM

ಸಾರಾಂಶ

ಭಾರತೀಯ ಮೂಲದ ಅಮೆರಿಕ ಉದ್ಯಮಿ ಮತ್ತು ಮಾಜಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಅವರು ಅಮೆರಿಕದ ಒಹಾಯೋ ರಾಜ್ಯದ ಗವರ್ನರ್‌ ಹುದ್ದೆಗೆ ಉಮೇದುವಾರಿಕೆ ಘೋಷಿಸಿದ್ದು, ಮಂಗಳವಾರಅಧಿಕೃತವಾಗಿ ತಮ್ಮ ಪ್ರಚಾರವನ್ನು ಪ್ರಾರಂಭಿಸಿದ್ದಾರೆ.

ವಾಷಿಂಗ್ಟನ್‌: ಭಾರತೀಯ ಮೂಲದ ಅಮೆರಿಕ ಉದ್ಯಮಿ ಮತ್ತು ಮಾಜಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಅವರು ಅಮೆರಿಕದ ಒಹಾಯೋ ರಾಜ್ಯದ ಗವರ್ನರ್‌ ಹುದ್ದೆಗೆ ಉಮೇದುವಾರಿಕೆ ಘೋಷಿಸಿದ್ದು, ಮಂಗಳವಾರಅಧಿಕೃತವಾಗಿ ತಮ್ಮ ಪ್ರಚಾರವನ್ನು ಪ್ರಾರಂಭಿಸಿದ್ದಾರೆ.

ಸಿನ್ಸಿನಾಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವುದಾಗಿ, ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡುವುದಾಗಿ ಮತ್ತು ಸಂಪ್ರದಾಯವಾದಿ ನೀತಿಗಳನ್ನು ಪ್ರತಿಪಾದಿಸುವುದಾಗಿ ಭರವಸೆ ನೀಡಿದರು.

ಗವರ್ನರ್ ಹುದ್ದೆಗೆ ಸ್ಪರ್ಧಿಸಲು ಅಭಿಲಾಷೆ ವ್ಯಕ್ತಪಡಿಸಿದ್ದ ಅವರು ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಚಿಸಿದ್ದ ಸರ್ಕಾರಿ ದಕ್ಷತೆ ಇಲಾಖೆಯನ್ನು (ಡಿಒಜಿಇ) ತ್ಯಜಿಸಿದ್ದರು.

ಸಿಬಿಎಸ್‌ಇ 10ನೇ ಕ್ಲಾಸ್‌ ಪರೀಕ್ಷೆ ವರ್ಷಕ್ಕೆ 2 ಬಾರಿ

ನವದೆಹಲಿ: ಸಿಬಿಎಸ್‌ಇ ಮಂಡಳಿ, 2026ನೇ ಶೈಕ್ಷಣಿಕ ವರ್ಷದಿಂದ 10ನೇ ಕ್ಲಾಸ್‌ಗೆ 2 ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ಈ ಕುರಿತ ಕರಡು ನಿಯಮಕ್ಕೆ ಮಂಡಳಿ ಅನುಮೋದನೆ ನೀಡಿದ್ದು. ಮಾ.9ರೊಳಗೆ ಸಾರ್ವಜನಿಕರ ಸಲಹೆಗೆ ಆಹ್ವಾನಿಸಲಾಗಿದೆ. ಬಳಿಕ ಅಂತಿಮ ಅಧಿಸೂಚನೆ ಹೊರಡಿಸಲಿದೆ.ಮೊದಲ ಪರೀಕ್ಷೆ ಫೆಬ್ರವರಿ 17ರಿಂದ ಮಾರ್ಚ್‌ 6ರವರೆಗೆ ಹಾಗೂ 2ನೇ ಪರೀಕ್ಷೆ ಮೇ 5ರಿಂದ 20ರವರೆಗೆ ನಡೆಯಲಿದೆ. ಎರಡೂ ಪರೀಕ್ಷೆಗಳನ್ನು ಪೂರ್ತಿ ಸಿಲಬಸ್‌ಗೆ ತೆಗೆದುಕೊಳ್ಳಲಾಗುತ್ತದೆ ಎಂದು ಕರಡು ನಿಯಮವನ್ನು ಅನುಮೋದಿಸಿದ ಸಿಬಿಎಸ್‌ಇ ಹೇಳಿಕೆ ಮಂಗಳವಾರ ತಿಳಿಸಿದೆ. ಈ 2 ಪರೀಕ್ಷೆಗಳಲ್ಲಿ ಯಾವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೋ ಅದನ್ನು ವಿದ್ಯಾರ್ಥಿಗಳು ಉಳಿಸಿಕೊಳ್ಳಬಹುದಾಗಿದೆ.

ಈ 2 ಪರೀಕ್ಷೆಗಳೇ ಸಪ್ಲಿಮೆಂಟರಿ ಪರೀಕ್ಷೆಯಂತೆ ಕೆಲಸ ಮಾಡಲಿವೆ. ಇದರ ಹೊರತಾಗಿ ಇನ್ಯಾವ ವಿಶೇಷ ಪರೀಕ್ಷೆಯೂ ಇರುವುದಿಲ್ಲ, ಅಲ್ಲದೆ, ಪ್ರಾಯೋಗಿಕ ಹಾಗೂ ಆಂತರಿಕ ಪರೀಕ್ಷೆಗಳು ಮಾತ್ರ ಒಂದೇ ಬಾರಿ ನಡೆಯುತ್ತವೆ ಎಂದು ಅದು ಸ್ಪಷ್ಟಪಡಿಸಿದೆ. ಇದೇ ವೇಳೆ ಪರೀಕ್ಷಾ ಶುಲ್ಕ ಹೆಚ್ಚಿಸಲೂ ಅದು ನಿರ್ಧರಿಸಿದೆ.

ಪೋಪ್‌ ಕೊಂಚ ಚೇತರಿಕೆ: ಸಂತ ಪದವಿ ವಿಚಾರ ಚರ್ಚೆ

ರೋಮ್‌: ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಕ್ರೈಸ್ತರ ಪರಮೋಚ್ಚ ಗುರು ಪೋಪ್‌ ಫ್ರಾನ್ಸಿಸ್‌ ಅವರು ಚೇತರಿಸಿಕೊಂಡಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲೇ ವ್ಯಾಟಿಕನ್‌ ಚರ್ಚ್‌ನ ಉಪ ಮುಖ್ಯಸ್ಥ ಮತ್ತು ವ್ಯಾಟಿಕನ್‌ ಕಾರ್ಯದರ್ಶಿಗಳ ಜತೆ ಸಂತ ಪದವಿ ಪ್ರದಾನದ ಬಗ್ಗೆ ಚರ್ಚಿಸಿದ್ದಾರೆ.ಉಸಿರಾಟದ ತೊಂದರೆ, ಶ್ವಾಸಕೋಶದ ಸೋಂಕು ಜೊತೆಗೆ ಕಿಡ್ನಿ ಸಮಸ್ಯೆಯಿಂದ ಪೋಪ್‌ ಫೆ.14ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಕಿಡ್ನಿ ವೈಫಲ್ಯವೂ ಸಹ ಕೊಂಚ ಪ್ರಮಾಣದಲ್ಲಿ ಚೇತರಿಕೆಯಾಗಿದೆ. ಪರಿಣಾಮ ಸಂತ ಪದವಿ ಬಗ್ಗೆ ಚರ್ಚಿಸಿದರು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ವ್ಯಾಟಿಕನ್‌ನಲ್ಲಿ ಪೋಪ್‌ ಚೇತರಿಕೆಗೆಂದು ಸಾವಿರಾರು ಜನರು ಪ್ರಾರ್ಥನೆ ಸಲ್ಲಿಸಿದರು.

ಎಂಜಿನ್‌ನಲ್ಲೇ ಶೌಚಾಲಯಕ್ಕಾಗಿ ಮಹಿಳಾ ರೈಲು ಚಾಲಕರ ಪ್ರತಿಭಟನೆ

ನವದೆಹಲಿ: ಮಹಿಳಾ ಲೋಕೋ ಪೈಲಟ್‌ ಶೌಚಾಲಯಕ್ಕೆ ತೆರಳಲು ಹಳಿ ದಾಟುತ್ತಿದ್ದಾಗ ಅಪಘಾತದಿಂದ ಸಾವನ್ನಪ್ಪಿದ ಬೆನ್ನಲ್ಲೇ ಎಂಜಿನಲ್ಲೇ ಶೌಚಾಲಯ ಅಳವಡಿಸಲು ಆಗ್ರಹಿಸಿ ಮಹಿಳಾ ಲೋಕೋ ಪೈಲಟ್‌ಗಳು ತೋಳಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.ಫೆ.12ರಂದು ಬಂಗಾಳದ ಮಾಲ್ಡಾ ರೈಲುವಿಭಾಗದಲ್ಲಿ ವಾಶ್‌ ರೂಂ ಬ್ರೇಕ್‌ಗೆ ತೆರಳಿ ಹಿಂತಿರುಗಲು ಹಳಿ ದಾಟುತ್ತಿದ್ದಾಗ ಸಹಾಯಕ ಮಹಿಳಾ ಲೋಕೋ ಪೈಲಟ್‌ಗೆ ಮತ್ತೊಂದು ರೈಲಿಗೆ ಡಿಕ್ಕಿಯಾಗಿ ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ, ಮಹಿಳಾ ಚಾಲಕಿಯರು ವಾರದಿಂದ ಎಂಜಿನ್‌ನಲ್ಲಿ ಶೌಚಾಲಯ ವ್ಯವಸ್ಥೆ ಬೇಡಿಕೆ ಆಗ್ರಹಿಸಿ, ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಮಾಲ್ಡಾ ಮಾತ್ರವಲ್ಲದೇ ಪುಣೆ, ನಾಗ್ಪುರ, ಜಬಲ್ಪುರ, ಗಾಜಿಯಾಬಾದ್‌, ದೆಹಲಿ, ಪ್ರಯಾಗ್‌ರಾಜ್‌ , ದಾನಾಪುರ ಸೇರಿದಂತೆ ಹಲವೆಡೆ ಕಪ್ಪುಪಟ್ಟಿ ಧರಿಸಿ, ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜೊತೆಗೆ ಈ ಬಗ್ಗೆ ರೈಲ್ವೆ ಸಚಿವಾಲಯಕ್ಕೆ ಜ್ಞಾಪಕ ಪತ್ರ ಬರೆಯಲು ನಿರ್ಧರಿಸಿದ್ದಾರೆ.

ಸುರಂಗ ಕುಸಿತ: ಕಾರ್ಮಿಕರ ರಕ್ಷಣೆ ಸಾಧ್ಯತೆ ಮತ್ತಷ್ಟು ಕ್ಷೀಣ

ಹೈದರಾಬಾದ್: ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯಲ್ಲಿ ಶ್ರೀಶೈಲ ಎಡದಂಡೆ ಕಾಲುವೆ ಸುರಂಗದೊಳಗೆ ಸಿಲುಕಿರುವ 8 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ರಕ್ಷಣಾ ತಂಡಗಳು ಕಾರ್ಯಾಚರಣೆ ಮುಂದುವರೆಸಿವೆ. ಆದರೆ ಸಂಪೂರ್ಣವಾಗಿ ಕೆಸರಿನಿಂದ ತುಂಬಿರುವ ಮುಂದಿನ 50 ಮೀ. ಪ್ರದೇಶದ ಒಳಹೊಕ್ಕುವುದು ರಕ್ಷಣಾ ತಂಡಗಳಿಗೇ ಅಪಾಯಕಾರಿ ಎನ್ನಲಾಗಿದೆ.ಈ ಕುರಿತು ಮಾಹಿತಿ ನೀಡಿದ ತೆಲಂಗಾಣ ನೀರಾವರಿ ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ, ‘ಇದು ಭಾರತದಲ್ಲಿ ಇದುವರೆಗೆ ಸಂಭವಿಸಿದ ಅತ್ಯಂತ ಭೀಕರ, ಗಂಭೀರ ಮತ್ತು ಸಂಕೀರ್ಣವಾದ ಸುರಂಗ ಕುಸಿತವಾಗಿದೆ. ಕಾರ್ಮಿಕರನ್ನು ರಕ್ಷಿಸಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡಲು ಬದ್ಧವಾಗಿದೆ. ಕಳೆದ 3 ದಿನಗಳಲ್ಲಿ, ದೇಶದ ಯಾವುದೇ ಸುರಂಗ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಕರೆ ಮಾಡಿ ಸಹಾಯ ಕೋರಿದ್ದೇವೆ’ ಎಂದರು.

ರಾವಣ ಕೂಡ ಕೇಸರಿ ಬಟ್ಟೆ ಧರಿಸಿದ್ದ: ಯೋಗಿಗೆ ಅಖಿಲೇಶ್‌ ಟಾಂಗ್‌

ಲಖನೌ: ಕುಂಭವನ್ನು ಟೀಕಿಸಿದ್ದ ಪ್ರತಿಪಕ್ಷಗಳನ್ನು ರಣಹದ್ದುಗಳಿಗೆ ಹೋಲಿಸಿದ್ದ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿರುವ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ‘ಕೇಸರಿ ಬಟ್ಟೆ ಧರಿಸುವುದರಿಂದ ಯಾರಾದರೂ ಯೋಗಿಯಾಗುತ್ತಾರೆಯೇ? ಸೀತೆಯನ್ನು ಅಪಹರಿಸಲು ರಾವಣನೂ ಸಂತನ ವೇಷದಲ್ಲಿ ಬಂದಿದ್ದ’ ಎಂದು ಕುಟುಕಿದ್ದಾರೆ.ಮಂಗಳವಾರ ಮಾತನಾಡಿದ ಅವರು, ‘ಜನರಿಗೆ ರಾಮಾಯಣದ ಕತೆ ಗೊತ್ತು. ಸೀತೆಯನ್ನು ಅಪಹರಿಸಿದಾಗ, ರಾವಣ ಕೂಡ ಸಂತನ ವೇಷದಲ್ಲಿ ಬಂದಿದ್ದ. ಆದ್ದರಿಂದ ನಾವು ಮತ್ತು ನೀವು ಕೆಟ್ಟ ನಡವಳಿಕೆ ಮತ್ತು ಭಾಷೆ ಹೊಂದಿರುವ ಜನರ ಬಗ್ಗೆ ಜಾಗರೂಕರಾಗಿರಬೇಕು’ ಎಂದರು.

Share this article